ಮೈಸೂರು: ಪ.ಮಲ್ಲೇಶ್ ಅವರ ಹೋರಾಟದ ಜೀವನವನ್ನು ನೆನೆದು ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ) ಕವಿ ಕುವೆಂಪು ಅವರ ‘ತರುಣರಿರಾ ಎದ್ದೇಳಿ! ಎಚ್ಚರಗೊಳ್ಳಿ, ಬಾಳಿ!’ ಹಾಡನ್ನು ಹಾಡಿದರೆ, ವೇದಿಕೆಗೆ ಬಂದ ಪ್ರತಿಯೊಬ್ಬರೂ ಹಿರಿಯ ಸಮಾಜವಾದಿಯೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಭಾವುಕರಾದರು.
ಮೈಸೂರಿನ ಪ್ರಗತಿಪರ ಸಂಘಟನೆಗಳಿಂದ ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾಜವಾದಿ ಪ.ಮಲ್ಲೇಶ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.
ಕುಟುಂಬದವರು, ಹೋರಾಟದ ಜೊತೆಗಾರರು, ವಿದ್ಯಾರ್ಥಿಗಳು ಹಾಗೂ ಆತ್ಮೀಯರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಅಗಲಿದ ಸಂಗಾತಿಗೆ ದೀಪ, ಪುಷ್ಪನಮನ ಸಲ್ಲಿಸಿದರು.
ಸಾಹಿತಿ ದೇವನೂರ ಮಹಾದೇವ ಮಾತನಾಡಿ, ‘ಜೊತೆಗಾರರಿಗೆ ಅವರ ಮುಂಗೋಪಿತನ, ಆಕ್ರೋಶದ ಗುಣ ಆತಂಕವೆನಿಸಿದರೂ ಅಂತಿಮವಾಗಿ ಪ್ರೀತಿಯನ್ನೇ ಹೆಚ್ಚು ತೋರುತ್ತಿದ್ದ ಮಗು ಮನಸ್ಸಿನ ಸ್ನೇಹಜೀವಿ ಆತ’ ಎಂದು ಸ್ಮರಿಸಿದರು.
‘ಕ್ರಿಯಾಶೀಲ ಸ್ನೇಹಿತರಾದ ಕೆ.ರಾಮದಾಸ್ ತೀರಿಹೋದಾಗ, ಆಲನಹಳ್ಳಿ ಕೃಷ್ಣ ಇಲ್ಲವಾದಾಗ ಖಾಲಿ ವಾತಾವರಣದ ಅನುಭವವಾಯಿತು. ಮಲ್ಲೇಶ್ ಹೊರಟು ಹೋದಾಗಲು ಅದೇ ಸ್ಥಿತಿಯನ್ನು ಎದುರಿಸಿದೆ’ ಎಂದು ಗೆಳೆಯನನ್ನು ನೆನೆದು ಭಾವುಕರಾದರು.
‘ಸರಿಯಾದ ಕೌಶಲವಿಲ್ಲದೇ ತೀವ್ರವಾಗಿ ಹೋರಾಟದಲ್ಲಿ ಮುನ್ನುಗ್ಗುವ ಅವರ ಸ್ವಭಾವ ಕೆಲವೊಮ್ಮೆ ಸಮಸ್ಯೆಯನ್ನು ಬಿಗಡಾಯಿಸಲು ಮತ್ತು ಹಲವು ಬಾರಿ ಸರಿಪಡಿಸಲು ಕಾರಣವಾಗುತ್ತಿತ್ತು. ಒಂದಂತೂ ಸ್ಪಷ್ಟ, ಅವರು ಯಾವುದಕ್ಕೂ ಜಗ್ಗದ ಕುಗ್ಗದ ಹೋರಾಟಗಾರ’ ಎಂದು ನೆನೆದರು.
‘ಕನ್ನಡ ಪರ ಹೋರಾಟ ಅಥವಾ ಯಾವುದೇ ಅನ್ಯಾಯಗಳನ್ನು ಎದುರಿಸುವಲ್ಲಿ ಸದಾ ಮುಂದಿರುತ್ತಿದ್ದ ‘ಹೋರಾಟಗಳ ಸಖ’. ಅವರ ಕನ್ನಡ ಪ್ರೇಮ ಹೃದಯದ ಒಳಗಿಂದ ಉಕ್ಕುತ್ತಿತ್ತು. ಅವರು ಕಟ್ಟಿದ ನೃಪತುಂಗ ಕನ್ನಡ ಶಾಲೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವುದು ಅವರನ್ನು ಜೀವಂತವಾಗಿರಿಸುವ ಒಂದು ದಾರಿ’ ಎಂದು ಕುಟುಂಬಕ್ಕೆ ಸಲಹೆ ನೀಡಿದರು.
ಪಿಯುಸಿಎಲ್ ಪ್ರಧಾನ ಕಾರ್ಯದರ್ಶಿ ಜಿ.ಪಿ.ಬಸವರಾಜು, ‘ಒಡನಾಡಿ‘ ಸೇವಾ ಸಂಸ್ಥೆಯ ಸಂಸ್ಥಾಪಕ ಪರಶುರಾಮ್, ಶಬೀರ್ ಮುಸ್ತಫ, ಕೆ.ಅರ್ಕೇಶ್, ರಾಮಾಂಜಿನಪ್ಪ ಆಲ್ದಳ್ಳಿ, ಕೆ.ಟಿ.ವೀರಪ್ಪ, ಸವಿತಾ ನೆನಪುಗಳನ್ನು ಹಂಚಿಕೊಂಡರು.
‘ಶುಭ್ರ ವ್ಯಕ್ತಿತ್ವದ ಮುಂದಾಳು’
‘ಸದಾ ಬಿಳಿ ಬಟ್ಟೆ ಧರಿಸುತ್ತಿದ್ದ ಮಲ್ಲೇಶ್ ಅವರ ವ್ಯಕ್ತಿತ್ವ ಕೂಡ ಅಷ್ಟೇ ಶುಭ್ರ. ಮಸಿ ಬಳಿಯುವ ಯಾವ ಪ್ರಯತ್ನವೂ ಸಫಲವಾಗದಂತೆ ಹೋರಾಟದ ಬದುಕನ್ನು ನಡೆಸಿದವರು’ ಎಂದು ವಕೀಲ ಪ್ರೊ.ರವಿವರ್ಮ ಕುಮಾರ್ ಹೇಳಿದರು.
‘ರೈತರ ಹೋರಾಟ, ಕನ್ನಡಕ್ಕಾಗಿ ಗೋಕಾಕ್ ಹೋರಾಟಗಳಲ್ಲಿ ಅವರನ್ನು ಹತ್ತಿರದಿಂದ ಬಲ್ಲೆ. ಏನನ್ನಾದರೂ ಎದುರಿಸಿ ಮುನ್ನುಗ್ಗುವ ಅವರ ಛಾತಿ ಈಗಲೂ ವಿಸ್ಮಯಕಾರಿ ಎನ್ನಿಸುತ್ತದೆ’ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.