ಮೈಸೂರು: ‘ಹೆಸರಾಯಿತು ಕರ್ನಾಟಕ.. ಉಸಿರಾಗಲಿ ಕನ್ನಡ; ಹಸಿಗೋಡೆಯ ಹರಳಿನಂತೆ.. ಹುಸಿಹೋಗದ ಕನ್ನಡ’
1973ರ ನ.1ರಂದು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದಾಗ ಕವಿ ಚನ್ನವೀರ ಕಣವಿ ಅವರಿಂದ ಹೊಮ್ಮಿದ ಸಾಲುಗಳಿವು. ನಗರದ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿಯೇ ಹೆಸರು ಘೋಷಣೆಯಾಗಿದ್ದು ವಿಶೇಷ.
ಮೊದಲು ವಿರೋಧ: ಡಿ.ದೇವರಾಜ ಅರಸು ಅವರೇ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಹೆಸರಿಡಲು ವಿರೋಧಿಸಿದ್ದರು. 1956ರಲ್ಲಿ ಭಾಷಾವಾರು ರಾಜ್ಯ ರಚನೆಯಾಗಿ ಮೈಸೂರು ಪ್ರಾಂತ್ಯಕ್ಕೆ ಮುಂಬೈ, ಹೈದರಾಬಾದ್, ಮದ್ರಾಸ್‌ನ ಕನ್ನಡ ಭಾಷಿಕ ಪ್ರದೇಶಗಳು ಸೇರ್ಪಡೆಯಾದಾಗ ಮೈಸೂರು ರಾಜ್ಯವನ್ನು ‘ವಿಶಾಲ ಮೈಸೂರು’ ಎಂದೇ ಕರೆಯಲಾಯಿತು. ಕರ್ನಾಟಕ ಎಂದಾಗಲಿಲ್ಲ.
‘ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಸಾಹುಕಾರ್ ಚೆನ್ನಯ್ಯ ಅವರೂ ಕರ್ನಾಟಕ ಎಂಬ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದರು. ಅವರ ಗರಡಿಯಲ್ಲಿಯೇ ಅರಸು ನಾಯಕರಾಗಿ ಹೊಮ್ಮಿದ್ದರು. ಕೆ.ಸಿ.ರೆಡ್ಡಿ ಅವರಿಂದ ವೀರೇಂದ್ರ ಪಾಟೀಲ ಅವರ ಆಡಳಿತಾವಧಿವರೆಗೂ ಯಾರೂ ಹೆಸರು ಬದಲಾಯಿಸುವ ಧೈರ್ಯ ಪ್ರದರ್ಶಿಸಿರಲಿಲ್ಲ. ಮೈಸೂರಿನವರೇ ಆಗಿ ಮೈಸೂರಿನ ಹೆಸರು ಬದಲಿಸಿದ್ದು ವಿದ್ಯಾರ್ಥಿಗಳಿಗೆಲ್ಲ ಆಶ್ಚರ್ಯ ತರಿಸಿತ್ತು’ ಎನ್ನುತ್ತಾರೆ ಇತಿಹಾಸತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು.
‘ಸಾಹುಕಾರ್ ಚೆನ್ನಯ್ಯ ಅವರೆಂದರೆ ಅರಸು ಅವರಿಗೆ ಅಪಾರ ಗೌರವ. ಹುಣಸೂರಿನಲ್ಲಿ ಚುನಾವಣೆಗೆ ನಿಂತಾಗ ನಾಮಪತ್ರ ಸಲ್ಲಿಸುವಾಗ ಠೇವಣಿ ಕಟ್ಟಿದವರೂ ಚೆನ್ನಯ್ಯ ಅವರೇ. ಇಬ್ಬರಿಗೂ ಮೈಸೂರಿನ ಬಗ್ಗೆ ಅಪಾರ ಅಭಿಮಾನವಿತ್ತು. ಅರಸು ಅವರು ಕರ್ನಾಟಕವೆಂದು ನಾಮಕರಣ ಮಾಡಲು ಹೋದಾಗ ಹಳೇ ಮೈಸೂರು ಭಾಗದ ಪ್ರಭಾವಿ ನಾಯಕರಿಗೆ ಹೃದಯಾಘಾತವಾದಂತೆ ಆಗಿತ್ತು’ ಎಂದು ಸ್ಮರಿಸಿದರು.
ಕ್ರಾಫರ್ಡ್ ಭವನ; ನಾಮಕರಣ: ‘ಆಗೆಲ್ಲ ಮೈಸೂರಿನಲ್ಲಿ ಸಭೆ ಸಮಾರಂಭಗಳು ನಡೆದರೆ ಪುರಭವನ ಇಲ್ಲವೇ ಮಹಾರಾಜ ಕಾಲೇಜಿನ ಜ್ಯೂನಿಯರ್ ಬಿ.ಎ ಹಾಲ್‌ನಲ್ಲಿ ನಡೆಯುತ್ತಿದ್ದವು. ಸಕಲೇಶಪುರದಲ್ಲಿ ದೊಡ್ಡ ಎಸ್ಟೇಟ್ ಹೊಂದಿದ್ದ ಸರ್ ಕ್ರಾಫರ್ಡ್ ಅವರಿಗೆ ಮೈಸೂರೆಂದರೆ ಅಪಾರ ಪ್ರೀತಿ. ಬೆಂಗಳೂರು ರಾಜಧಾನಿಯಾದಾಗ, ಮೈಸೂರಿನಲ್ಲಿ ವಿಧಾನಸಭೆ ಅಧಿವೇಶನ ನಡೆಸಬೇಕು ಎಂದು ಮುಖ್ಯಮಂತ್ರಿ ಕೆ.ಹನುಮಂತಯ್ಯ ಅವರಿಗೆ ಕೇಳಿಕೊಂಡಿದ್ದರಂತೆ. ದೊಡ್ಡ ಸಭಾಂಗಣಗಳು ಇಲ್ಲದಿದ್ದಾಗ ಅಧಿವೇಶನ ನಡೆಸಲೆಂದೇ ಕ್ರಾಫರ್ಡ್ ಭವನ ನಿರ್ಮಾಣ ಮಾಡಲಾಯಿತು’ ಎಂದು ನಂಜರಾಜ ಅರಸು ಹೇಳಿದರು.
‘ಭವನ ನಿರ್ಮಾಣ ವೆಚ್ಚದ ಅರ್ಧ ಹಣವನ್ನು ಕ್ರಾಫರ್ಡ್ ಭರಿಸಿದ್ದರು. 1957ರ ಸುಮಾರು ವಿಧಾನಸಭೆ ಅಧಿವೇಶನವೂ ಆಯ್ತು. ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯಕ್ಕೆ ಕಟ್ಟಡವಿಲ್ಲವೆಂದು ಆಗಿನ ಶಿಕ್ಷಣ ಸಚಿವ ಕೆ.ವಿ.ಶಂಕರೇಗೌಡ ಅವರಲ್ಲಿ ಕೇಳಿದ್ದರು. ಹೀಗಾಗಿ ಕ್ರಾಫರ್ಡ್ ಭವನ ವಿಶ್ವವಿದ್ಯಾಲಯದ ಕಾರ್ಯಸೌಧವೂ ಆಯಿತು. ಅದರ ನಿರ್ಮಾತೃ ಕ್ರಾಫರ್ಡ್ ಹೆಸರು ಸಭಾಂಗಣಕ್ಕೆ ಮಾತ್ರ ಸೀಮಿತವಾಯಿತು’ ಎಂದರು.
ಜಯಚಾಮರಾಜೇಂದ್ರ ಒಡೆಯರ್ ಭಾಗಿ: ಕರ್ನಾಟಕ ನಾಮಕರಣೋತ್ಸವದಲ್ಲಿ ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರೂ ಪಾಲ್ಗೊಂಡಿದ್ದರು. ಬೆಂಗಳೂರು, ಮೈಸೂರು, ಹಂಪಿ, ಗದಗದಲ್ಲಿ ಸಂಭ್ರಮ ನಡೆದಿತ್ತು. ಎಲ್ಲ ಸಭೆಗಳಲ್ಲೂ ಒಡೆಯರ್ ಅತಿಥಿಯಾಗಿ ಭಾಗವಹಿಸಿದ್ದರು. ಅರಸು ಅವರಿಗೆ ಬೆಂಗಳೂರಿಗಿಂತ ಮೈಸೂರೇ ಇಷ್ಟ. ಅವರ ಹೋರಾಟದ ಕೇಂದ್ರ ಮೈಸೂರಾಗಿತ್ತು. ನಾಮಕರಣೋತ್ಸವದ ಸಭೆಯೂ ಇಲ್ಲೇ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.