ಮೈಸೂರು: ‘ರಾಷ್ಟ್ರದ ಹಿತಾಸಕ್ತಿಗಾಗಿ ಜನ್ಮ ತಾಳಿದ ಬಿಜೆಪಿ ರಾಜ್ಯ ಘಟಕದಲ್ಲಿ ಯಾವುದೇ ಬಣ ಇಲ್ಲ. ಇರುವುದು ಒಂದೇ ಬಣ, ಅದು ಕೇಸರಿ ಬಣ’ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು.
ಇಲ್ಲಿ ಶುಕ್ರವಾರ ವಕ್ಫ್ ಕಾಯ್ದೆ ವಿರುದ್ಧದ ‘ನಮ್ಮ ಭೂಮಿ, ನಮ್ಮ ಹಕ್ಕು’ ಹೆಸರಿನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದರು.
‘ವಕ್ಫ್ ಕಾಯ್ದೆ ಮೂಲಕ ಭೂ ದುರಾಕ್ರಮಣ ತಡೆಯಲು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ನರೇಂದ್ರ ಮೋದಿಯವರು ದೇಶ ವಿರೋಧಿ ಉಗ್ರರ ಪಾಲಿಗೆ ಉಗ್ರನರಸಿಂಹನಂತೆ ಕಾಣುತ್ತಿದ್ದಾರೆ. ಮೋದಿ ಈ ದೇಶ ಕಂಡ ಏಕೈಕ ಸಿಂಹ ಪುರುಷ. ಅವರನ್ನು ಹೊರತುಪಡಿಸಿದರೆ ಮೈಸೂರು ಬಿಜೆಪಿಯಲ್ಲಿ ಯಾವ ಸಿಂಹಗಳೂ ಇಲ್ಲ. ಕರ್ನಾಟಕದಲ್ಲಿ ಪಕ್ಷವನ್ನು ತಮ್ಮ ಹೋರಾಟದ ಮೂಲಕ ಸದೃಢವಾಗಿ ಬೆಳೆಸಿದ ಯಡಿಯೂರಪ್ಪ ಅವರನ್ನು ಬಿಟ್ಟರೆ ಇನ್ಯಾವ ಹುಲಿಯೂ ಇಲ್ಲ’ ಎಂದು ಭಿನ್ನಮತೀಯರನ್ನು ಟೀಕಿಸಿದರು.
‘ಒಳಗಿದ್ದುಕೊಂಡೇ ಪಕ್ಷಕ್ಕೆ ಉಪಟಳ ನೀಡುವವರನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.
‘ಮೊಘಲರ ದುರಾಕ್ರಮಣದ ಆಡಳಿತದ ನಂತರ ಭಾರತದಲ್ಲಿ ವಕ್ಫ್ ಹೆಸರಿನ ಆಕ್ರಮಣಕಾರಿ ಕಾಯ್ದೆ ತಂದು ರೈತರು ಹಾಗೂ ಹಿಂದೂ ಪೂಜಾ ಮಂದಿರಗಳ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ, ಅಲ್ಲಾವುದ್ದೀನ್ ಖಿಲ್ಜಿ ತನ್ನ ಬಂಟ ಮಲ್ಲಿಕಾಫೂರ್‌ನನ್ನು ಛೂಬಿಟ್ಟು ಹಿಂದೂ ಸಾಮ್ರಾಜ್ಯಗಳ ಮೇಲೆ ಆಕ್ರಮಣ ನಡೆಸಿದ ಮಾದರಿಯಲ್ಲೇ ಸಚಿವ ಜಮೀರ್ ಅಹಮದ್ ಮೂಲಕ ವಕ್ಫ್ ಹೆಸರಿನಲ್ಲಿ ರೈತರ ಹಾಗೂ ಮಠ-ಮಾನ್ಯಗಳ ಭೂಮಿ ಕಸಿಯುವ ದುರಾಕ್ರಮಣ ನೀತಿ ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಇದನ್ನು ಖಂಡಿಸುವ ಹಾಗೂ ವಕ್ಫ್ ಕಾಯ್ದೆ ತಿದ್ದುಪಡಿ ಮೂಲಕ ಈ ನೆಲದ ನೈಜ ಭೂಮಾಲೀಕರ ಹಕ್ಕು ಸಂರಕ್ಷಿಸುವುದು ಬಿಜೆಪಿಯ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ವಕ್ಫ್ ದಾಳಿಯ ಭೀತಿ ಎದುರಿಸುತ್ತಿರುವವರ ಪರವಾಗಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಹೋರಾಟ ನಡೆಸುತ್ತಿದೆ’ ಎಂದು ತಿಳಿಸಿದರು.
‘ದೇಶದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸುವ ನಿಟ್ಟಿನಲ್ಲಿ ಜನಾಭಿಪ್ರಾಯ ರೂಪಿಸಲಾಗುತ್ತಿದೆ. ಕೆಲವರು ತಮ್ಮ ರಹಸ್ಯ ಕಾರ್ಯಸೂಚಿ ಕಾರ್ಯಗತಗೊಳಿಸಿಕೊಳ್ಳಲು ವಕ್ಫ್ ಹೆಸರಿನಲ್ಲಿ ಬಣ ರಾಜಕೀಯ ಮಾಡಲು ಹೊರಟಿದ್ದಾರೆ. ಇದನ್ನು ಮಾಧ್ಯಮದಲ್ಲಿ ವಿಪರೀತವಾಗಿ ವೈಭವೀಕರಿಸುತ್ತಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.