ಮೈಸೂರು: ‘ರೈಲ್ವೆ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಹಾಗೂ ಅರ್ಜಿ ಸಲ್ಲಿಸುವ ಅವಕಾಶ ಒದಗಿಸಲಾಗಿದೆ’ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಮಾತನಾಡಿ, ‘ಇದರಿಂದ ಕನ್ನಡಿಗರು ಹೆಚ್ಚು ಉದ್ಯೋಗ ಪಡೆಯಲು ಅನುಕೂಲವಾಗಲಿದೆ’ ಎಂದರು.
‘ಇಲಾಖೆಯಿಂದ ವಾರ್ಷಿಕ ನೇಮಕಾತಿ ವೇಳಾಪಟ್ಟಿ ಪ್ರಕಟಿಸಲಾಗುವುದು. ಜನವರಿಯಿಂದ ಇಲ್ಲಿಯವರೆಗೆ 60 ಸಾವಿರ ಹುದ್ದೆಗಳ ಭರ್ತಿಗೆ ಇಲಾಖೆಯು ಪ್ರಕ್ರಿಯೆ ನಡೆಸಿದೆ. ದೇಶದ ಆರ್ಥಿಕತೆಗೆ ಮಹತ್ತರವಾದ ಕೊಡುಗೆ ನೀಡುವ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ’ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಡಾದಲ್ಲಿ ಇಷ್ಟೊಂದು ಅಕ್ರಮವಾಗಿದೆ ಎಂದುಕೊಂಡಿರಲಿಲ್ಲ. ನಾನು ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ, ಮುಡಾದಲ್ಲಿ ಒಟ್ಟು 7,200 ಖಾಲಿ ನಿವೇಶನಗಳನ್ನು ಗುರುತಿಸಿ ಸಾರ್ವಜನಿಕ ಹರಾಜಿಗೆ ತೀರ್ಮಾನಿಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಈಗ ಜಾರಿ ನಿರ್ದೇಶನಾಲಯವು ತನಿಖೆ ಕೈಗೆತ್ತಿಕೊಂಡಿದೆ. ಮುಡಾ ಹಾಗೂ ವಾಲ್ಮೀಕಿ ನಿಗಮ ಪ್ರಕರಣ ಎರಡೂ ತಾರ್ಕಿಕ ಅಂತ್ಯ ಕಾಣಲಿವೆ’ ಎಂದರು.
‘ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಆತುರದ ನಿರ್ಧಾರ ಮಾಡಿದ್ದಾರೆ. ಇಡೀ ಪರಿಸ್ಥಿತಿಯನ್ನು ಜನ ಅವಲೋಕಿಸುತ್ತಿದ್ದಾರೆ. ಉಪ ಚುನಾವಣೆಯ ಮೂರು ಕ್ಷೇತ್ರಗಳಲ್ಲೂ ಎನ್‌ಡಿಎ ಗೆಲ್ಲಲಿದ್ದು, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ’ ಎಂದರು.
ತಮ್ಮ ತಪ್ಪು ಮುಚ್ಚಿಕೊಳ್ಳಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಪುಟವಿಟ್ಟ ಚಿನ್ನದಂಥ ಶೋಭಾ ಕರಂದ್ಲಾಜೆ ಕುರಿತು ಕೀಳುಮಟ್ಟದ ಹೇಳಿಕೆ ನೀಡುವುದು ಘನತೆಗೆ ತಕ್ಕದ್ದಲ್ಲವಿ. ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.