ಮೈಸೂರು: ‘ಭತ್ತ ಖರೀದಿ ಕೇಂದ್ರವನ್ನು ತ್ವರಿತವಾಗಿ ಪ್ರಾರಂಭಿಸಬೇಕು. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ಬೆಂಬಲ ಬೆಲೆಯಾಗಿ ₹2,320ರ ಜೊತೆಗೆ ರಾಜ್ಯ ಸರ್ಕಾರದಿಂದ ₹500 ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹಿಸಿದರು.
ಇಲ್ಲಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ನಡೆದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.
‘ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲೂ ಪ್ರಾರಂಭಿಸಬೇಕು. 20 ಜಿಲ್ಲೆಗಳಲ್ಲಿ 30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಖರೀದಿ ಕೇಂದ್ರಗಳನ್ನು ಹಾಗೂ ಏಜೆನ್ಸಿಗಳನ್ನು ಗುರುತಿಸಿ ರಾಜ್ಯದಲ್ಲಿ ರೈತರಿಗೆ ಯಾವುದೇ ಷರತ್ತುಗಳನ್ನು ವಿಧಿಸದೆ ಕೇರಳ, ತೆಲಂಗಾಣ ಮತ್ತು ಒಡಿಶಾದಂತೆ ₹500 ಹೆಚ್ಚುವರಿ ಪ್ರೋತ್ಸಾಹಧನ ನೀಡಿ ಖರೀದಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
‘ಹೊಸಪೇಟೆ, ರಾಯಚೂರು, ಯಾದಗಿರಿ ಭಾಗಗಳಲ್ಲಿ ಭತ್ತದ ಕೊಯ್ಲು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಪಂಜಾಬ್‌ನಲ್ಲಿ ಖರೀದಿ ಕೇಂದ್ರಗಳನ್ನು ನ.1ರಿಂದಲೇ ಪ್ರಾರಂಭಿಸಿ ಯಾವುದೇ ಷರತ್ತುಗಳಿಲ್ಲದೆ 85.41 ಲಕ್ಷ ಟನ್ ಭತ್ತ ಖರೀದಿಸಲಾಗಿದೆ. ಅದರಂತೆ ರಾಜ್ಯ ಸರ್ಕಾರವೂ ಕ್ರಮ ಕೈಗೊಳ್ಳಬೇಕು’ ಎಂದರು.
‘ರೈತರ ನೋಂದಣಿಗೆ, ಭತ್ತ ಬೆಳೆದಿರುವ ಎಲ್ಲಾ ರೈತರ ಪಹಣಿಯನ್ನು ಪಡೆದು ಅವರ ಖಾತೆಗೆ ಹಣ ಜಮೆಗೆ ಕ್ರಮ ಕೈಗೊಳ್ಳಬೇಕು. ಎಲ್ಲ ಭತ್ತವನ್ನೂ ಖರೀದಿಸಬೇಕು. ಇದರಿಂದ, ರಾಜ್ಯದಲ್ಲಿ ಪಡಿತರ ವ್ಯವಸ್ಥೆಯಲ್ಲಿ ಹಣ ನೀಡುವ ಬದಲು ಗುಣಮಟ್ಟದ ಅಕ್ಕಿಯನ್ನೇ ನೀಡುವುದು ಸಾಧ್ಯವಾಗಲಿದೆ’ ಎಂದು ಹೇಳಿದರು.
ರಾಜ್ಯ ರೈತ ಸಂಘದ ಮುಖಂಡರಾದ ನಾರಾಯಣರೆಡ್ಡಿ, ರಾಮನಗರದ ಸಂಪತ್ತು, ಶಿವಕುಮಾರ್, ದಾಬಸ್‌ಪೇಟ್ ವಾಯ್ಸ್‌ನ ರಾಜೇಶ್ ಮಾತನಾಡಿದರು.
‘ರಾಜ್ಯದಲ್ಲಿ ವಕ್ಫ್ ಮಂಡಳಿಯ ಆಸ್ತಿ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣವನ್ನು ಕೈಬಿಟ್ಟು ಮೂಲ ಮಾಲೀಕ ಹಾಗೂ ಅನುಭವದಾರರು ಅಥವಾ ಭೂಮಿಯ ರೈತನಿಗೆ ಯಾವುದೇ ಕಾನೂನಿನಡಿ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ರಾಜ್ಯದ ರೈತರನ್ನು ಕಾಪಾಡಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಬೇಕು’ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಮುಖಂಡರಾದ ವಿನೋದ್ ಕುಮಾರ್, ಮಲಿಯೂರು ಹರ್ಷ, ವಿಠಲ ಬಿ. ಗಣಾಚಾರಿ, ಹತ್ತಳ್ಳಿ ಸ್ವಾಮಿರಾಜ್, ನಾಗರಾಜ್, ಹನುಮಯ್ಯ, ಹಾಡ್ಯ ರವಿ, ಪ್ರಕಾಶ್ ಗಾಂಧಿ, ಚಿಕ್ಕಬಳ್ಳಾಪುರ ಗೋವಿಂದರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ್ ಮುದ್ದಳ್ಳಿ, ಚಿಕ್ಕಸ್ವಾಮಿ, ದೇವೇಂದ್ರಕುಮಾರ್, ಶಿವರುದ್ರಪ್ಪ, ಕಸುವಿನಹಳ್ಳಿ ಮಂಜೇಶ್, ಶಾಂತರಾಜ್, ಬನ್ನೂರು ಕೃಷ್ಣಪ್ಪ, ಬಿದರಳ್ಳಿ ಮಾದಪ್ಪ, ಸತೀಶ್, ಮೋಹನ, ಚಂದ್ರು, ದೇವಿರಮ್ಮನಳ್ಳಿ ಮಹೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.