ADVERTISEMENT

ಮೈಸೂರು: ‘ಸಿರಿಧಾನ್ಯ’ ಪ್ರಚಾರಕಗೆ ಪದ್ಮಶ್ರೀ ಗೌರವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:36 IST
Last Updated 26 ಜನವರಿ 2023, 5:36 IST
ಡಾ.ಖಾದರ್‌
ಡಾ.ಖಾದರ್‌   

ಮೈಸೂರು: ಮೈಸೂರಿನಲ್ಲಿ ನೆಲೆಯೂರಿ ಸಿರಿಧಾನ್ಯಗಳ ಮಹತ್ವವನ್ನು ಸಾರುವ ಕಾರ್ಯದಲ್ಲಿ ತೊಡಗಿರುವ, ಆರೋಗ್ಯ ವಿಜ್ಞಾನದ ಸಂತ ಎಂದೇ ಕರೆಸಿಕೊಳ್ಳುವ ಡಾ.ಖಾದರ್ ವಲ್ಲಿ ದೂದೇಕುಲ ಅವರಿಗೆ ‘ಪದ್ಮಶ್ರೀ’ ಪುರಸ್ಕಾರ ಸಂದಿದೆ. ವಿಜ್ಞಾನ ಮತ್ತು ಎಂಜಿನಿಯರಿಂಗ್‌ ವಿಭಾಗದ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.

ಆಂಧ್ರದ ಕಡಪ ಜಿಲ್ಲೆಯಲ್ಲಿ ಜನಿಸಿದ ಅವರು ಕಾಲೇಜು ಶಿಕ್ಷಣವನ್ನು ಅಲ್ಲೇ ಪಡೆದರು. ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ಪದವಿ ಪೂರೈಸಿದ್ದು ಕರ್ನಾಟಕದಲ್ಲಿ. ಜೀವ ರಾಸಾಯನಿಕ ವಿಜ್ಞಾನದಲ್ಲಿ ಸ್ಟಿರಾಯಿಡ್‌ಗಳ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ನಂತರ 2 ವರ್ಷ ಮೈಸೂರಿನಲ್ಲಿ ಸಿರಿಧಾನ್ಯಗಳ ಮೇಲೆ ಸಂಶೋಧನೆ ಮಾಡಿದ್ದರು. ಬಳಿಕ ಐದು ವರ್ಷಗಳವರೆಗೆ ಅಮೆರಿಕದ ಬಹುರಾಷ್ಟ್ರೀಯ ಕಂಪನಿಯಲ್ಲಿ ವಿಜ್ಞಾನಿಯಾಗಿ ಜೈವಿಕ ನಿಯಂತ್ರಕ ರಾಸಾಯನಿಕಗಳ, ಸೂಕ್ಷ್ಮಾಣು ಜೀವಿಗಳ ಸಂಶೋಧನೆಯನ್ನೂ ಕೈಗೊಂಡಿದ್ದರು.

ಐದು ವರ್ಷ ಪೋರ್ಟ್‌ಲ್ಯಾಂಡ್‌ನಲ್ಲಿ ಸೂಕ್ಷ್ಮಾಣು ಜೀವಿಗಳು, ಮರಗಟ್ಟು ವಿಧಾನಗಳು, ಸೂಕ್ಷ್ಮಜೀವಿಗಳ ನಿರ್ವಹಣೆ, ಪರ್ಯಾವರಣ ವಿಷರಾಸಾಯನಿಕ ಪದಾರ್ಥಗಳ ನಿಷ್ಕ್ರಿಯಗೊಳಿಸುವಿಕೆಯ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿದ್ದರು. ಅಲ್ಲೆಲ್ಲ ಪಡೆದ ಜ್ಞಾನವನ್ನು ಸಮಾಜಕ್ಕೆ ಹಂಚುತ್ತಿದ್ದಾರೆ 65 ವರ್ಷದ ಖಾದರ್. ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತಾರೆ.

ADVERTISEMENT

ಬೆಂಗಳೂರಿನ ಐಐಎಸ್ಸಿಯಲ್ಲಿ ಪಿಎಚ್‌ಡಿ ಪದವಿ ಪಡೆದಿರು ಅವರು, ಸದ್ಯ ಇಲ್ಲಿನ ತೊಣಚಿಕೊಪ್ಪಲಿನಲ್ಲಿ ನೆಲೆಸಿದ್ದಾರೆ. ‘ಕಾಡುಕೃಷಿ ವಿಧಾನದ’ ಬಗ್ಗೆ ಸಂಪೂರ್ಣ ಅಧ್ಯಯನ ಕೈಗೊಂಡಿದ್ದಾರೆ. ರೈತರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ಕಬಿನಿ ಜಲಾಶಯದ ಸಮೀಪದಲ್ಲಿ 8 ಎಕರೆ ಬಂಜರು ಭೂಮಿಯನ್ನು ಖರೀದಿಸಿ ಕಾಡು ಕೃಷಿಯಲ್ಲಿ ನಿರತರಾಗಿದ್ದಾರೆ. ಅಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವಿಜ್ಞಾನಿಯಾಗಿದ್ದ ಅವರು, ಈಗ ಕೃಷಿ ತಜ್ಞರಾಗಿ ಹೊರಹೊಮ್ಮಿದ್ದಾರೆ. ಕೃಷಿ ಸಂಪನ್ಮೂಲ ವ್ಯಕ್ತಿಯೂ ಆಗಿದ್ದಾರೆ. ದೇಶದ ವಿವಿಧೆಡೆ ಉಪನ್ಯಾಸ ನೀಡಿದ್ದಾರೆ. ಸಿರಿಧಾನ್ಯಗಳ ಮಹತ್ವವನ್ನು ತಿಳಿಸುತ್ತಿದದ್ದಾರೆ. ಮೂಲವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಗೆ ಸರ್ಕಾರ ಮನ್ನಣೆ ನೀಡಿದೆ.

‘ಮೂಲವಿಜ್ಞಾನದಲ್ಲಿ ಮಾಡಿದ ಕೆಲಸವನ್ನು ಪರಿಗಣಿಸಿ, ಸರ್ಕಾರವು ನನ್ನನ್ನು ಗುರುತಿಸಿ ಪುರಸ್ಕಾರ ನೀಡಿದ್ದಕ್ಕೆ ಖುಷಿಯಾಗಿದೆ. ಸಿರಿಧಾನ್ಯಗಳ ಬಗ್ಗೆ ಇನ್ನೂ ಹೆಚ್ಚು ಮಾತನಾಡಲು ಉತ್ಸಾಹ ದೊರೆತಂತಾಗಿದೆ. ಮುಂದೆ ಹೆಚ್ಚು ಜನರು ಸಿರಿಧಾನ್ಯದತ್ತ ಮನಸ್ಸು ಮಾಡಬಹುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.