ADVERTISEMENT

ಮೈಸೂರು ಅರಮನೆ: ವಿದೇಶಿ ಪ್ರವಾಸಿಗರಿಗೆ ₹1,000 ನಿಗದಿಗೆ ವಿರೋಧ

ಎಂ.ಮಹೇಶ್
Published 27 ಅಕ್ಟೋಬರ್ 2024, 5:22 IST
Last Updated 27 ಅಕ್ಟೋಬರ್ 2024, 5:22 IST
ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಿದ ಮೈಸೂರು ಅರಮನೆ (ಸಂಗ್ರಹ ಚಿತ್ರ)
ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಿದ ಮೈಸೂರು ಅರಮನೆ (ಸಂಗ್ರಹ ಚಿತ್ರ)   

ಮೈಸೂರು: ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ವೀಕ್ಷಿಸಲು ಬರುವ ವಿದೇಶಿ ಪ್ರವಾಸಿಗರಿಗೆ ವಿಧಿಸುವ ‘ಪ್ರವೇಶ ಶುಲ್ಕ’ವನ್ನು ಏಕಾಏಕಿ ಒಂಬತ್ತು ಪಟ್ಟು ಅಂದರೆ ₹100ರಿಂದ ₹1,000ಕ್ಕೆ ಹೆಚ್ಚಿಸಿರುವುದಕ್ಕೆ ಪ್ರವಾಸೋದ್ಯಮ ಭಾಗೀದಾರರ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.

ಅರಮನೆ ಮಂಡಳಿಯು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದೆ. ಒಮ್ಮೆಲೇ ದುಬಾರಿ ಮಾಡಿರುವುದರಿಂದ ವಿದೇಶಿ ಪ್ರವಾಸಿಗರ ಭೇಟಿಯ ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು; ಇದರಿಂದ ಪ್ರವಾಸೋದ್ಯಮಕ್ಕೂ ತೊಂದರೆ ಆಗಬಹುದು ಎನ್ನುವ ಕಳವಳವೂ ಅವರದಾಗಿದೆ.

ADVERTISEMENT

ಪ್ರವಾಸೋದ್ಯಮದ ಭಾಗಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಮಾಲೋಚನೆಯನ್ನೇ ನಡೆಸದೆ ಅರಮನೆ ಮಂಡಳಿಯು ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎನ್ನುವ ಮಾತುಗಳು ಅವರಿಂದ ಕೇಳಿಬಂದಿವೆ.

ಕೋವಿಡ್‌–19 ಸಾಂಕ್ರಾಮಿಕದ ಪೂರ್ವದ ವರ್ಷಗಳಿಗೆ ಹೋಲಿಸಿದರೆ, ಇತ್ತೀಚಿನ ವರ್ಷಗಳಲ್ಲಿ ಅರಮನೆಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆ ಇದೆ. ಈಗ ಮತ್ತಷ್ಟು ಕುಸಿಯಲು ‘ಶುಲ್ಕ ಏರಿಕೆ’ಯು ಕಾರಣವಾಗಬಹುದು ಎಂಬ ಕಳವಳ ಅವರದು.

ಗ್ರಾಹಕರಿಗೆ ಏನೆಂದು ಉತ್ತರಿಸುವುದು?: ‘ವಿದೇಶಿಗರಿಗೆ ಪ್ರವೇಶ ಶುಲ್ಕವನ್ನು ₹1,000ಕ್ಕೆ ಹೆಚ್ಚಿಸಿರುವ ಮೈಸೂರು ಅರಮನೆ ಮಂಡಳಿಯ ಈ ನಡೆಯನ್ನು ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸುತ್ತದೆ. ಟ್ರಾವೆಲ್ ಏಜೆಂಟರಾದ ನಾವು ಹಲವು ತಿಂಗಳುಗಳ ಮುನ್ನವೇ ವಿದೇಶಿಗರ ಬಳಿ ಬುಕ್ಕಿಂಗ್ ಪಡೆದಿರುತ್ತೇವೆ; ಟೂರ್ ಪ್ಲಾನ್ ಮಾಡಿರುತ್ತೇವೆ. ಅರಮನೆ ಪ್ರವೇಶಕ್ಕೆ ಹಳೆಯ ದರಕ್ಕೆ ಅನುಗುಣವಾಗಿ ಹಣ ಪಡೆದಿರುತ್ತೇವೆ. ಈಗ ಏಕಾಏಕಿ ಟಿಕೆಟ್ ದರ ಏರಿಕೆ ಮಾಡಿದರೆ ನಾವು ನಮ್ಮ ಗ್ರಾಹಕರಿಗೆ ಏನು ಉತ್ತರ ನೀಡಬೇಕು?’ ಎಂದು ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಕೇಳಿದರು.

‘ಇದರಿಂದ ಆಗುವ ನಷ್ಟವನ್ನು ನಾವು ಹೇಗೆ ಭರಿಸುವುದು? ಈ ರೀತಿ ನಿರ್ಧಾರ ಕೈಗೊಳ್ಳುವ ಕನಿಷ್ಠ ಆರು ತಿಂಗಳ ಮುನ್ನ ನಮಗೆ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಇದ್ದಕ್ಕಿದ್ದಂತೆ ಶುಲ್ಕವನ್ನು ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಸರಿಯಲ್ಲ. ಇದಕ್ಕೆ ಮೈಸೂರಿನ ಪ್ರವಾಸೋದ್ಯಮಿಗಳ ತೀವ್ರ ವಿರೋಧವಿದೆ’ ಎಂದು ಅವರು ತಿಳಿಸಿದರು.

ಇಳಿಮುಖವಾಗುವ ಸಾಧ್ಯತೆ: ‘ಪ್ರವಾಸೋದ್ಯಮ ಪಾಲುದಾರರ ಜೊತೆ ಸಮಾಲೋಚನೆಯನ್ನೇ ನಡೆಸದೆ ಮಂಡಳಿಯು ಪ್ರವೇಶ ಶುಲ್ಕವನ್ನು ಹೆಚ್ಚಿಸಿ, ಒಂದೇ ದಿನದಲ್ಲಿ ಅನ್ವಯಗೊಳಿಸಿದೆ. ಈಗಾಗಲೇ ಮೈಸೂರಿಗೆ ಭೇಟಿ ನೀಡುವ ವಿದೇಶಿಯರ ಸಂಖ್ಯೆ ಕಡಿಮೆಯಾಗಿದೆ. ಶುಲ್ಕ ಜಾಸ್ತಿಯಾದ ಮಾಹಿತಿ ದೊರೆತರೆ ಆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ. ಶುಲ್ಕವನ್ನು ದುಪ್ಪಟ್ಟು ಮಾಡಬಹುದಿತ್ತು. ಆದರೆ, ಒಂಬತ್ತು ಪಟ್ಟು ಹೆಚ್ಚಳ ಮಾಡಿರುವುದು ಭಾರಿ ಅನ್ಯಾಯವಾಗಿದೆ’ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.

‘ಟ್ರಾವೆಲ್ ಏಜೆಂಟ್‌ಗಳು ವಿದೇಶಿಗರಿಂದ ಬುಕ್ಕಿಂಗ್‌ ತೆಗೆದುಕೊಳ್ಳುವಾಗ ₹100 ಶುಲ್ಕವೆಂದು ಕೊಟೇಶನ್ ನೀಡುತ್ತಿದ್ದೆವು. ಒಂದು ಗುಂಪಿನಲ್ಲಿ 35 ಜನರಿದ್ದರೆ, ನಾವು ಪ್ರವೇಶ ಶುಲ್ಕವಾಗಿ ₹3,500 ನಮೂದಿಸಿದ್ದೇವೆ. ಈಗ ಅದು ₹35 ಸಾವಿರ ಆಗುತ್ತದೆ. ಇದನ್ನು ಹೇಗೆ ಭರಿಸುವುದು, ನಮಗೆ ಸಿಗುವ ಕಮಿಷನ್‌ಗೂ ಕಲ್ಲು ಹಾಕಿದಂತಾಗುತ್ತದೆ’ ಎನ್ನುತ್ತಾರೆ ಟ್ರಾವೆಲ್ಸ್‌ ಏಜೆಂಟರು.

‘ಮೈಸೂರಿನಲ್ಲಿ ಕೋವಿಡ್‌ ನಂತರ ಚೇತರಿಕೆಯ ಹಳಿಯಲ್ಲಿದ್ದ ಪ್ರವಾಸೋದ್ಯಮಕ್ಕೆ, ಈಗ ಶುಲ್ಕ ಏರಿಕೆಯು ಹೊಡೆತ ನೀಡಲಿದೆ’ ಎನ್ನುವ ಆತಂಕ ಅವರದ್ದು.

ವಿದೇಶಿಯರಿಗೆ ಪ್ರವೇಶ ಶುಲ್ಕ ₹100 ಹಿಂದಿನಿಂದಲೂ ಇತ್ತು. ಅದನ್ನು ಅರಮನೆ ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಪರಿಷ್ಕರಿಸಲಾಗಿದೆ
ಟಿ.ಎಸ್. ಸುಬ್ರಹ್ಮಣ್ಯ, ಉಪನಿರ್ದೇಶಕ ಮೈಸೂರು ಅರಮನೆ ಮಂಡಳಿ
ಮೈಸೂರಿನ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಬಹುದಾದ ಶುಲ್ಕ ಏರಿಕೆ ನಿರ್ಧಾರವನ್ನು ಸಂಬಂಧಿಸಿದ ಅಧಿಕಾರಿಗಳು ಮರುಪರಿಶೀಲಿಸಬೇಕು
ಬಿ.ಎಸ್. ಪ್ರಶಾಂತ್, ಅಧ್ಯಕ್ಷ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.