ಮೈಸೂರು: ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ (ಎಸ್‌ಪಿವಿಜಿಎಂಸಿ), ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಆಯೋಜಿಸಿರುವ 62 ನೇ ‘ಪಾರಂಪರಿಕ ಸಂಗೀತೋತ್ಸವ'ಕ್ಕೆ ವಿದ್ವಾನ್ ಎನ್.ರವಿಕಿರಣ್ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, 'ಮೈಸೂರಷ್ಟೇ ಅಲ್ಲದೇ ನಾಡಿನ ಕಲಾರಸಿಕರಿಗೆ ಎಸ್‌ಪಿವಿಜಿಎಂಸಿ ಟ್ರಸ್ಟ್ ಸಾಂಸ್ಕೃತಿಕ ಜೀವಂತಿಕೆಯನ್ನು ನೀಡಿದೆ. ಅದಕ್ಕೆ ಸಂಗೀತ ಲೋಕದಲ್ಲಿ ಶಕ್ತಿಯಿದೆ. ಲಕ್ಷಾಂತರ ಕಲಾರಸಿಕರಿಗೆ ಭಾರತದ ವೈವಿಧ್ಯಮಯ ಸಂಗೀತವನ್ನು ಪರಿಚಯಿಸಿದೆ' ಎಂದರು.
'ದೇಶದ ಯಾವುದೇ ರಾಜ್ಯದ ಸಂಗೀತಗಾರರು 8ನೇ ಕ್ರಾಸ್ ನಲ್ಲಿ ಹಾಡುವುದಕ್ಕೆ, ನುಡಿಸುವುದಕ್ಕೆ ಹೆಮ್ಮೆ ಪಡುತ್ತಾರೆ. ವಿದೇಶದಲ್ಲಿದ್ದರೂ ಇಲ್ಲಿಂದ ಕರೆ ಬಂದರೆ ಓಡಿ ಬರುತ್ತಾರೆ. 8ನೇ ಕ್ರಾಸ್ ನಲ್ಲಿ ದೈವಿಕ ವಾತಾವರಣವಿದೆ' ಎಂದು ಶ್ಲಾಘಿಸಿದರು.
'ಪಾರಂಪರಿಕ ಸಂಗೀತಕ್ಕೆ ವೇದಿಕೆ ನೀಡಬೇಕೆಂಬ ದೂರದೃಷ್ಟಿಯಿಂದ ಸ್ಥಾಪಿತವಾದ ಟ್ರಸ್ಟ್, ಸತತ 62 ವರ್ಷ ಉತ್ಸವವನ್ನು ಯಾವುದೇ ತಡೆಯಿಲ್ಲದೇ ನಡೆದುಕೊಂಡು ಬಂದಿದೆ. ಟ್ರಸ್ಟ್ ಕಾರ್ಯದರ್ಶಿ ಹಿಮಾಂಶು ಶಕ್ತಿಯಾಗಿ ನಿಂತಿದ್ದಾರೆ' ಎಂದರು.
'ವೇದಿಕೆಯಲ್ಲಿ 14 ಬಾರಿ ಕಛೇರಿ ನೀಡಿರುವ ನನಗೆ ಪ್ರಸನ್ನ ವಿದ್ಯಾಗಣಪತಿಯೆಂದರೆ ತೀವ್ರ ಭಕ್ತಿ. ಕೋವಿಡ್ ಸಂದರ್ಭದಲ್ಲಿ ಅಮೆರಿಕದಲ್ಲಿದ್ದಾಗ ಪ್ರಸನ್ನ ಗಣಪತಿಯ ಮೇಲೆ ಸೂರ್ಯಕಾಂತಿ ರಾಗದಲ್ಲಿ ಕೃತಿ ರಚಿಸಿದ್ದೆ. ಅದನ್ನು ಇಂದು ಅವನಿಗೆ ಅರ್ಪಿಸುತ್ತಿರುವೆ' ಎಂದು ಹೇಳಿದರು.
'ಮೈಸೂರೆಂದರೆ ನನ್ನ ಮನೆಗೆ ಬರುವ ಖುಷಿ. ನನ್ನ ತಾತ ನಾರಾಯಣ ಅಯ್ಯಂಗಾರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನ ಸಂಗೀತ ವಿದ್ವಾಂಸರಾಗಿದ್ದರು. ಕಾವೇರಿ ನೀರನ್ನು ಕುಡಿದು ಬಾಲ್ಯ ಕಳೆದ ನನಗೆ ಅವಳೊಂದಿಗೆ ತಮಿಳುನಾಡಿಗೆ ಹೋದೆ. ಇಲ್ಲಿನ ಕೇಳುಗರೆಂದರೆ ನನಗೆ ವಿಶೇಷ' ಎಂದರು.
ಉದ್ಯಮಿ ಜಗನ್ನಾಥ ಶೆಣೈ ಮಾತನಾಡಿ, 'ಕಲಾಭಿಮಾನಿಯಾದವರು ಕಲಾವಿದರಿಂದ ಉಚಿತವಾಗಿ ಕಛೇರಿ ಪಡೆಯಬಾರದು. ಕಲೆ ಹಾಗೂ ಕಲಾವಿದಗೆ ಸಮ್ಮಾನ ಮಾಡಬೇಕು. ಸಂಗೀತ ಬೆಳೆಸುವ, ಕಲೆ ಉಳಿಸುವ ಮಾರ್ಗ ಇದೇ' ಎಂದು ಪ್ರತಿಪಾದಿಸಿದರು.
'ಉತ್ಸವ ಸ್ವಂತ ಕಟ್ಟಡದಲ್ಲಿ ನಡೆಯಬೇಕು ಎಂಬುದು ಸಂಗೀತಪ್ರಿಯರ ಅಭಿಲಾಷೆಯಾಗಿದೆ. ಅದಕ್ಕೆ ಪ್ರಯತ್ನವನ್ನು ಮಾಡಬೇಕು. ಎಲ್ಲ ಸಹಕಾರ ನೀಡಲಾಗುವುದು' ಎಂದರು.
ಮುಖಂಡ ವಾಸು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.