ಮೈಸೂರು: ‘ಹಣ ಪಾವತಿಸಿದರೂ ವಾಹನವನ್ನು ಎಲ್ಲೆಲ್ಲೋ ನಿಲ್ಲಿಸಿ ತೆರಳಬೇಕು. ಭದ್ರತೆಯೂ ಇಲ್ಲ. ಗಿಡದ ನೆರಳಿನಲ್ಲಿ ಬೈಕ್ ನಿಲ್ಲಿಸಲೂ ಹಣ ತಗೋಳ್ತಾರೆ’
– ಕೆ.ಆರ್ ಆಸ್ಪತ್ರೆಗೆ ಬರುವ ಬಹುತೇಕರ ಅಸಮಾಧಾನವಿದು.
ಆಸ್ಪತ್ರೆಯ ಆವರಣದಲ್ಲಿ ವಾಹನ ಪಾರ್ಕಿಂಗ್‌ಗಾಗಿ ಪ್ರತ್ಯೇಕ ಸ್ಥಳ ಇಲ್ಲ. ಜಾಗ ಇರುವೆಡೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇದು ಸಾರ್ವಜನಿಕರಿಗಷ್ಟೇ ಅಲ್ಲದೆ ವೈದ್ಯರು ಹಾಗೂ ಸಿಬ್ಬಂದಿಗೂ ವಾಹನ ನಿಲುಗಡೆಗೆ ಸೂಕ್ತ ಸ್ಥಳ ಎಂಬುದೇ ಇಲ್ಲ.
ಆಸ್ಪತ್ರೆಯ ಮುಖ್ಯದ್ವಾರದ ಎಡ ಭಾಗದಲ್ಲಿ ಹಾಗೂ ಚೆಲುವಾಂಬ ಆಸ್ಪತ್ರೆಯ ಮುಂಭಾಗ ಸಾರ್ವಜನಿಕರಿಗೆ ವಾಹನ ಪಾರ್ಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅದೂ ಗಿಡ, ಮರಗಳ ನಡುವೆ!
‘ಶ್ರೀ ಭೈರವ ವಾಹನ ನಿಲ್ದಾಣ’ ಸಂಸ್ಥೆಯು ವಾಹನ ಪಾರ್ಕಿಂಗ್ ಜವಾಬ್ದಾರಿ ಹೊತ್ತಿದೆ. ಪ್ರತಿ ಬೈಸಿಕಲ್‌ಗೆ ₹5, ಬೈಕ್, ಸ್ಕೂಟರ್‌ಗೆ ₹30, ಆಟೊ ರಿಕ್ಷಾ ₹35, ಕಾರ್ ₹45ರಂತೆ ದಿನದ ಪಾಸ್ ವಿತರಿಸುತ್ತಾರೆ. ಒಂದರಿಂದ ಐದು ಗಂಟೆಗೆ ಕ್ರಮವಾಗಿ ₹4, ₹20, ₹20, ₹30 ಶುಲ್ಕವನ್ನು ಸಿಬ್ಬಂದಿ ವಸೂಲಿ ಮಾಡುತ್ತಾರೆ.
ಆದರೆ ಯಾವ ಸೌಲಭ್ಯಕ್ಕಾಗಿ ಈ ಹಣ ಪಾವತಿಸಬೇಕು ಎಂಬುದು ವಾಹನಗಳ ಮಾಲೀಕರ ಪ್ರಶ್ನೆ. ಏಕೆಂದರೆ ವಾಹನ ನಿಲ್ಲಿಸಲು ಯಾವುದೇ ಪ್ರತ್ಯೇಕ ಜಾಗ ಇಲ್ಲ. ಗಾಳಿ, ಮಳೆಯಿಂದ ರಕ್ಷಣೆ ನೀಡಲು ಚಾವಣಿ ಇಲ್ಲ. ವಾಹನಗಳೂ ಕೆಲವೊಮ್ಮೆ ಅಡ್ಡಾದಿಡ್ಡಿಯಾಗಿ ನಿಂತಿರುತ್ತವೆ.
ಹಳೆಯ ಜಯದೇವ ಚಿಕಿತ್ಸಾ ಕೇಂದ್ರದ ಕಟ್ಟಡದ ಒಂದು ಭಾಗದಲ್ಲಿ ಸಣ್ಣ ಚಾವಣಿ ವ್ಯವಸ್ಥೆಯುಳ್ಳ ಪಾರ್ಕಿಂಗ್ ಸ್ಥಳವಿದ್ದು, ಅಲ್ಲಿನ ಸ್ಥಳಾವಕಾಶಕ್ಕಿಂತ ಹೆಚ್ಚಿನ ಬೈಕ್‌ಗಳು ನಿಂತಿರುತ್ತವೆ.
‘ಸದ್ಯ ಕಟ್ಟಡಗಳ ನವೀಕರಣ ಕೆಲಸ ನಡೆಯುತ್ತಿದೆ. ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕೆಲಸದ ಜೊತೆಗೆ ಪಾರ್ಕಿಂಗ್‌ಗೂ ಪ್ರತ್ಯೇಕ ವ್ಯವಸ್ಥೆ ಆಗಬೇಕು’ ಎಂದು ಸಿಬ್ಬಂದಿಯೊಬ್ಬರು ಪ್ರತಿಪಾದಿಸಿದರು.
‘ಪಾರ್ಕಿಂಗ್‌ಗೆ ಹಣ ನಿಗದಿ ಮಾಡುವ ಮೊದಲು ನಿಲ್ಲಿಸುವ ವಾಹನಗಳಿಗೆ ಭದ್ರತೆ ಒದಗಿಸಲಿ’ ಎಂಬುದು ಬಹುತೇಕ ಸಾರ್ವಜನಿಕರ ಆಗ್ರಹ.
ಶತಮಾನೋತ್ಸವದ ಯೋಜನೆಗಳಲ್ಲಿ ವಾಹನ ಪಾರ್ಕಿಂಗ್‌ಗಾಗಿಯೂ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಇದೆ. ನೆಲಕ್ಕೆ ಇಂಟರ್‌ಲಾಕ್ ಟೈಲ್ಸ್ ಅಳವಡಿಸಬೇಕು ಎಂದು ಮನವಿ ಮಾಡಿದ್ದೇವೆಶೋಭಾ ಕೆ.ಆರ್ ಆಸ್ಪತ್ರೆಯ ಸೂಪರಿಂಟೆಂಡೆಂಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.