ADVERTISEMENT

ಮೈಸೂರು | ಸಂಸತ್ ಭದ್ರತಾ ಲೋಪ: ದೆಹಲಿ ಪೊಲೀಸರಿಂದ ಡಿ.ಮನೋರಂಜನ್ ಪೋಷಕರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 4:16 IST
Last Updated 19 ಡಿಸೆಂಬರ್ 2023, 4:16 IST
<div class="paragraphs"><p>ಡಿ.ಮನೋರಂಜನ್</p></div>

ಡಿ.ಮನೋರಂಜನ್

   

ಮೈಸೂರು: ಲೋಕಸಭೆ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದಿದ್ದ ಆರೋಪಿ ಡಿ. ಮನೋರಂಜನ್ ಅವರ ಮನೆಯಲ್ಲಿ ದೆಹಲಿ ಪೊಲೀಸರು ಸೋಮವಾರ ತಪಾಸಣೆ ನಡೆಸಿದರು. ಪೋಷಕರನ್ನು ಸತತ ಏಳೂವರೆ ತಾಸು ವಿಚಾರಣೆಗೆ ಒಳಪಡಿಸಿದರು.

ವಿಜಯನಗರ 2ನೇ ಹಂತದಲ್ಲಿರುವ ‘ಶ್ರೀ ರಂಗ’ ಮನೆಗೆ ಸೋಮವಾರ ಬೆಳಿಗ್ಗೆ 11ಕ್ಕೆ  ದೆಹಲಿ ಪೊಲೀಸ್ ಅಧಿಕಾರಿಗಳು (ಒಬ್ಬ ಮಹಿಳಾ ಅಧಿಕಾರಿ) ಹಾಗೂ ಒಬ್ಬ ರಾಜ್ಯ ಗುಪ್ತಚರ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಸಂಜೆ 6.30ರವರೆಗೆ ವಿಚಾರಣೆ ನಡೆಸಿದರು. ಆರಂಭದಲ್ಲಿ ಮನೆಯಲ್ಲಿದ್ದ ಕುಟುಂಬದವ ರನ್ನು ಹೊರಗೆ ಕಳಿಸಿ, ಮನೋರಂಜನ್‌ ಅವರ ತಾಯಿ ಹಾಗೂ ತಂಗಿಯ ಬಳಿ ಮಾಹಿತಿ ಪಡೆದರು.

ADVERTISEMENT

ಈ ಹಿಂದೆ ದೆಹಲಿ ಪೊಲೀಸರ ಸೂಚನೆಯಂತೆ ಮನೆಯವರು 3ನೇ ಅಂತಸ್ತಿನಲ್ಲಿರುವ ಮನೋರಂಜನ್‌ ಕೋಣೆಗೆ ಬೀಗ ಹಾಕಿದ್ದರು. ಅಧಿಕಾರಿಗಳು ಬೀಗ ತೆಗೆಸಿ ಪರಿಶೀಲನೆ ನಡೆಸಿದರು. ಅಲ್ಲಿ ಐದು ತಾಸು ತಪಾಸಣೆ ನಡೆಸಿದರು. ಮನೋರಂಜನ್ ಓದುತ್ತಿದ್ದ ಪುಸ್ತಕಗಳು, ಬಳಸುತ್ತಿದ್ದ ವಸ್ತುಗಳನ್ನು ಪರೀಕ್ಷಿಸಿದರು. ಈ ನಡುವೆ ವಿಜಯನಗರ ಠಾಣೆ ಇನ್‌ಸ್ಪೆಕ್ಟರ್‌ ಸುರೇಶ್, ಎಸ್‌ಐ ವಿಶ್ವನಾಥ್ ಅವರನ್ನೂ ಕರೆಸಿಕೊಂಡು, ಮನೋರಂಜನ್‌ಗೆ ಅಪರಾಧ ಹಿನ್ನೆಲೆ ಇದೆಯೇ ಎಂಬುದನ್ನು ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಬಂದಾಗ ಮನೋರಂಜನ್‌ ತಂದೆ ದೇವರಾಜೇಗೌಡ ಮನೆಯಲ್ಲಿರಲಿಲ್ಲ. ಕೆಲ ಸಮಯದ ಬಳಿಕ ಬಂದ ಅವರನ್ನು ಅಧಿಕಾರಿಗಳು ಕೊಠಡಿಗೆ ಕರೆಸಿಕೊಂಡು ಮಾಹಿತಿ ಪಡೆದರು. ಮಗನ ಚಟುವಟಿಕೆ, ಹಣದ ಮೂಲ ಯಾವುದು, ಆತನ ಸ್ನೇಹಿತರು ಯಾರ‍್ಯಾರು, ಹವ್ಯಾಸಗಳೇನಿ ದ್ದವು ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಂಡರು. ಈ ವೇಳೆ ತಾಯಿ ಕಣ್ಣೀರಿಡುತ್ತಾ ಮಾಹಿತಿ ನೀಡಿದರು ಎಂಬ ಮಾಹಿತಿ ದೊರೆತಿದೆ.

ಭದ್ರತೆ

ಮನೋರಂಜನ್‌ ಮನೆಗೆ ಭದ್ರತೆ ಮುಂದುವರಿಸಲಾಗಿದ್ದು, 3 ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೊರಗಡೆಯವರು ಮನೆಯ ಒಳಗಡೆ ತೆರಳದಂತೆ ಗೇಟ್‌ಗೆ ಬೀಗ ಹಾಕಲಾಗಿದ್ದು, ಸಿಬ್ಬಂದಿ ಅನುಮತಿ ಬಳಿಕ ಬೀಗ ತೆಗೆಯುವ ವ್ಯವಸ್ಥೆ ಮಾಡಲಾಗಿದೆ. ಮನೋರಂಜನ್‌ ಅವರನ್ನು ಮಂಗಳವಾರ ಮೈಸೂರಿಗೆ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.