ADVERTISEMENT

11,600 ಜನರಿಗೆ ಪಿಂಚಣಿ: ಸಮಸ್ಯೆ ಪರಿಹಾರ

ಪ್ರಜಾವಾಣಿ ವರದಿ ಪರಿಣಾಮ: ಶಾಸಕ ಎಸ್‌.ಎ.ರಾಮದಾಸ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 10:11 IST
Last Updated 26 ಆಗಸ್ಟ್ 2020, 10:11 IST
ರಾಮದಾಸ್
ರಾಮದಾಸ್   

ಮೈಸೂರು: ‘ವಿವಿಧ ಕಾರಣಗಳಿಂದಾಗಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸ್ಥಗಿತಗೊಂಡಿದ್ದ 11,600 ಅರ್ಹ ಫಲಾನುಭವಿಗಳ ದಾಖಲೆಗಳನ್ನು ಸರಿಪಡಿಸಿ, ಸಾಫ್ಟ್‌ವೇರ್‌ಗೆ ಅಪ್‌ಲೋಡ್‌ ಮಾಡುವ ಮೂಲಕ ದಾಖಲೀಕರಣ ಮಾಡಲಾಗಿದೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ಬುಧವಾರ ಇಲ್ಲಿ ತಿಳಿಸಿದರು.

‘ಒಂದೊಂದು ಯೋಜನೆಯ ಫಲಾನುಭವಿಗೂ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಲಾಗಿದೆ. ಶೀಘ್ರದಲ್ಲೇ ಈ ಎಲ್ಲರಿಗೂ ಹಿಂದಿನಂತೆಯೇ ಮಾಸಾಶನ ದೊರೆಯಲಿದೆ’ ಎಂದು ಅವರು ಹೇಳಿದರು.

‘ಸಿಗದ ಹಣ: ಅಸಹಾಯಕರ ಕಣ್ಣೀರು’ ಶೀರ್ಪಿಕೆಯಡಿ ‘ಪ್ರಜಾವಾಣಿ’ ಮೇ 6ರ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿ ಫಲಾನುಭವಿಗಳ ಸಂಕಷ್ಟ ಆಲಿಸಿದ್ದೆ ಎಂದು ರಾಮದಾಸ್‌ ತಿಳಿಸಿದರು.

ADVERTISEMENT

‘ಪಾಲಿಕೆಯ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಜೊತೆ ಈ ಸಂಬಂಧ ಕೂಲಂಕಷ ಚರ್ಚೆ ನಡೆಸಿದ್ದೆ. 15 ಸಾವಿರ ಫಲಾನುಭವಿಗಳ ದಾಖಲಾತಿ ಸಮರ್ಪಕವಾಗಿಲ್ಲದಿದ್ದರಿಂದ, ಅಸಹಾಯಕರ ಖಾತೆಗೆ ಪಿಂಚಣಿ ಜಮಾ ಆಗುವುದು ಸ್ಥಗಿತಗೊಂಡಿತ್ತು ಎಂಬುದು ಗೊತ್ತಾಯಿತು. ಪಾಲಿಕೆಯ ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪರಿಹಾರಕ್ಕೆ ಮಾರ್ಗೋಪಾಯವನ್ನು ಕಂಡುಕೊಂಡಿದ್ದೆವು.

ಅದರಂತೆ ಪ್ರತಿಯೊಬ್ಬ ಫಲಾನುಭವಿ ಮನೆ ಮನೆಗೆ ತೆರಳಿದ ಪಾಲಿಕೆ ಅಧಿಕಾರಿಗಳು, ದಾಖಲಾತಿ ಸಂಗ್ರಹಿಸಿ ಸಂಬಂಧಿಸಿದ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಿದರು. ಈ ಕೆಲಸದಲ್ಲಿ 11,600ಕ್ಕೂ ಹೆಚ್ಚು ಜನರ ನಿಖರ ದಾಖಲಾತಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದರಿಂದ ಬಹು ಕಾಲದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಜೊತೆಗೆ ಅರ್ಹರಿಗೆ ಮಾಸಾಶನವೂ ಎಂದಿನಂತೆ ದೊರೆಯಲಿದೆ’ ಎಂದು ಶಾಸಕರು ಹೇಳಿದರು.

‘3,400ಕ್ಕೂ ಹೆಚ್ಚು ಫಲಾನುಭವಿಗಳು ಸೂಕ್ತ ದಾಖಲಾತಿ ಒದಗಿಸಿಲ್ಲ. ಇದರಲ್ಲಿ ಕೆಲವರು ಮೃತಪಟ್ಟಿದ್ದಾರೆ. ಊರಲ್ಲೂ ಇಲ್ಲ. ಅರ್ಹರು ದಾಖಲಾತಿ ನೀಡಿದರೆ, ಅವರಿಗೂ ಪಿಂಚಣಿ ಸೌಲಭ್ಯ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ರಾಮದಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.