ADVERTISEMENT

ಮೈಸೂರು: ಬೀಗ ತೆರೆಯದ 'ಪಿಂಕ್‌ ಶೌಚಾಲಯ'

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 23:30 IST
Last Updated 11 ಜೂನ್ 2023, 23:30 IST
ಮೈಸೂರಿನ ದಿವಾನ್ಸ್‌ ರಸ್ತೆಯಲ್ಲಿ ಅಂಬೇಡ್ಕರ್‌ ಭವನದ ಬಳಿ ನಗರಪಾಲಿಕೆಯಿಂದ ನಿರ್ಮಿಸಿರುವ ‘ಪಿಂಕ್ ಶೌಚಾಲಯ’ಕ್ಕೆ ಬೀಗ ಹಾಕಲಾಗಿದೆ/ ಪ್ರಜಾವಾಣಿ ಚಿತ್ರ
ಮೈಸೂರಿನ ದಿವಾನ್ಸ್‌ ರಸ್ತೆಯಲ್ಲಿ ಅಂಬೇಡ್ಕರ್‌ ಭವನದ ಬಳಿ ನಗರಪಾಲಿಕೆಯಿಂದ ನಿರ್ಮಿಸಿರುವ ‘ಪಿಂಕ್ ಶೌಚಾಲಯ’ಕ್ಕೆ ಬೀಗ ಹಾಕಲಾಗಿದೆ/ ಪ್ರಜಾವಾಣಿ ಚಿತ್ರ   

ಎಂ.ಮಹೇಶ

ಮೈಸೂರು: ನಗರದಲ್ಲೇ ಮೊದಲ ಬಾರಿಗೆ ಇಲ್ಲಿನ ದಿವಾನ್ಸ್‌ ರಸ್ತೆಯಲ್ಲಿ ಮಹಾನಗರ‍ಪಾಲಿಕೆಯಿಂದ ಮಹಿಳೆಯರಿಗಾಗಿ ನಿರ್ಮಿಸಿರುವ ಗುಲಾಬಿ (ಪಿಂಕ್‌) ಶೌಚಾಲಯ ಉದ್ಘಾಟನೆಯಾಗಿ ಎರಡೂವರೆ ತಿಂಗಳಾದರೂ ಬಳಕೆಗೆ ಮುಕ್ತವಾಗಿಲ್ಲ. ಮಾರ್ಚ್‌ 26ರಂದು ಮೇಯರ್‌ ಶಿವಕುಮಾರ್, ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್‌ ಹಾಗೂ ಆಗಿನ ಶಾಸಕ ಎಲ್.ನಾಗೇಂದ್ರ ಉದ್ಘಾಟನೆ ನೆರವೇರಿಸಿದ್ದರು.

2022–23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಈ ಶೌಚಾಲಯದ ಕಾಮಗಾರಿಯನ್ನು ಮಾರ್ಚ್‌ನಲ್ಲಿ ಪೂರ್ಣಗೊಳಿಸಲಾಗಿತ್ತು. 15ನೇ ಹಣಕಾಸು ಯೋಜನೆಯಡಿ ನಿರ್ಮಾಣವಾಗಿದ್ದು, ₹ 37 ಲಕ್ಷ ವೆಚ್ಚ ಮಾಡಲಾಗಿದೆ. ಸಂಘ–ಸಂಸ್ಥೆಗಳ ಸಲಹೆ ಆಧರಿಸಿ ಪಾಲಿಕೆ ಕ್ರಮ ಕೈಗೊಂಡಿದೆ. ಆದರೆ, ಇದು ಇದ್ದೂ ಇಲ್ಲದಂತಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಅದರಿಂದ ಪ್ರಯೋಜನವಾಗುತ್ತಿಲ್ಲ.

ADVERTISEMENT

ಸರ್ಕಾರದ ಜಾಗವನ್ನು ಪಾಲಿಕೆಗೆ ಹಸ್ತಾಂತರಿಸಿಕೊಂಡು ಕಟ್ಟಡವನ್ನು ನಿರ್ಮಿಸಲಾಗಿದೆ. 23ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮುತುವರ್ಜಿ ವಹಿಸಿದ್ದರು.

ನಿರ್ವಹಣೆಗೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ. ಮೊದಲ ಬಾರಿಗೆ ಯಾರೂ ಬಂದಿರಲಿಲ್ಲ. ಮತ್ತೆ ಕರೆಯಲಾಗಿದೆ. ನಿರ್ವಹಣೆಯನ್ನು ನೋಡಿಕೊಳ್ಳುವವರೂ ಮಹಿಳೆಯರೇ ಇರಬೇಕಾಗುತ್ತದೆ. ಇದಕ್ಕಾಗಿ ತಡವಾಗುತ್ತಿದೆ
ಪ್ರಮೀಳಾ ಭರತ್, ಪಾಲಿಕೆ ಸದಸ್ಯೆ

ಹಲವು ಸೌಲಭ್ಯ

ಮಹಿಳೆಯರು, ಶಾಲಾ–ಕಾಲೇಜು ವಿದ್ಯಾರ್ಥಿನಿಯರಿಗೆ ಮಾತ್ರ ಬಳಕೆಗೆ ಅವಕಾಶವಿದೆ. ಕಟ್ಟಡಕ್ಕೆ ಗುಲಾಬಿ ಬಣ್ಣ ಹಚ್ಚಲಾಗಿದೆ. ಸ್ಯಾನಿಟರಿ ನ್ಯಾಪ್‌ಕಿನ್ ವೆಂಡಿಂಗ್ ಯಂತ್ರವನ್ನೂ ಹೊಂದಿರಲಿದೆ. ಮಕ್ಕಳಿಗೆ ಹಾಲೂಡಿಸುವುದಕ್ಕೆ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ. ಸ್ನಾನಕ್ಕೂ ವ್ಯವಸ್ಥೆ ಇರಲಿದೆ. ಇನ್ಸಿನಿರೇಟರ್ ಯಂತ್ರ, ಗೀಸರ್‌, ಸೋಲಾರ್‌  ವ್ಯವಸ್ಥೆ ಇದೆ. ತಲಾ ಎರಡು ಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸದ ಟಾಯ್ಲೆಟ್ ಇರಲಿವೆ. ಅದರಲ್ಲಿ ಅಂಗವಿಕಲರಿಗೆ ಒಂದು ಮೀಸಲಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.

ಈ ರಸ್ತೆಯು ಸದಾ ಜನದಟ್ಟಣೆಯಿಂದ ಕೂಡಿರುವ ಜಾಗ. ವಾಣಿಜ್ಯ ಸಂಕೀರ್ಣಗಳು, ಬಟ್ಟೆ, ಚಿನ್ನಾಭರಣ ಸೇರಿದಂತೆ ಸಾಕಷ್ಟು ಅಂಗಡಿಗಳು-ಮಳಿಗೆಗಳು, ವಿವಿಧ ಕಚೇರಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿವೆ. ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಒಂದಾದ ಡಿ.ದೇವರಾಜ ಅರಸು ರಸ್ತೆಯೂ ಸಮೀಪದಲ್ಲೇ ಇದೆ. ಶಾಲಾ–ಕಾಲೇಜುಗಳೂ ಇವೆ. ನಿತ್ಯ ಸಾವಿರಾರು ಮಹಿಳೆಯರು, ವಿದ್ಯಾರ್ಥಿನಿಯರು ಈ ರಸ್ತೆಯಲ್ಲಿ ಓಡಾಡುತ್ತಾರೆ. ಹಾಗಾಗಿ ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿ ಶೌಚಾಲಯ ನಿರ್ಮಿಸಲಾಗಿದೆ.

ನಿರ್ವಹಣೆಗೆ ಟೆಂಡರ್‌ ಕರೆಯಲಾಗುವುದು

ಶೌಚಾಲಯವು ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ತೆರೆದಿರಲಿದೆ. ಅದರ ನಿರ್ವಹಣೆಗೆ ಟೆಂಡರ್‌ ಕರೆಯಲಾಗುತ್ತದೆ. ಸ್ವಚ್ಛತೆಗೆ ಹಾಗೂ ನಿರ್ವಹಣೆಗಾಗಿ ಮಹಿಳಾ ಪೌರಕಾರ್ಮಿಕರನ್ನು ನೇಮಿಸಲಾಗುವುದು ಎಂದು ಅಧಿಕಾರಿಗಳು ಉದ್ಘಾಟನೆ ಸಂದರ್ಭದಲ್ಲಿ ತಿಳಿಸಿದ್ದರು.

ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಕಟ್ಟಿದ್ದ ಶೌಚಾಲಯ

ಡಿ.ದೇವರಾಜ ಅರಸು ರಸ್ತೆಯಲ್ಲಿ 150 ಮಳಿಗೆಗಳಿವೆ. ಅಲ್ಲಿ ಕೆಲಸಕ್ಕೆ ಬಹಳಷ್ಟು ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಬರುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡುತ್ತಾರೆ. ಅವರಿಗೆ ಶೌಚಾಲಯ ಬಳಕೆಗೆ ಅನುಕೂಲ ಮಾಡಿಕೊಡಲು ಪಿಂಕ್‌ ಟಾಯ್ಲೆಟ್ ನಿರ್ಮಿಸಲಾಗಿದೆ. ಸ್ನಾನಕ್ಕೂ ವ್ಯವಸ್ಥೆ ಇರಲಿದೆ ಎಂದು ಜನಪ್ರತಿನಿಧಿಗಳು ತಿಳಿಸಿದ್ದರು. ಸಿದ್ಧವಿದ್ದರೂ ಬಳಸಿಕೊಳ್ಳಲಾಗದ ಸ್ಥಿತಿ ಇದೆ. ಏಕೆಂದರೆ, ಇದು ಉದ್ಘಾಟನೆಯಾದ ದಿನದಿಂದಲೂ ಬೀಗ ಹಾಕಿದ ಸ್ಥಿತಿಯಲ್ಲಿಯೇ ಇದೆ! ಬಳಕೆಗೆ ಯಾವಾಗಿನಿಂದ ಮುಕ್ತವಾಗುತ್ತದೆ; ಬೀಗವನ್ನು ಹಾಕಿರುವುದು ಏಕೆ ಎನ್ನುವುದಕ್ಕೆ ಅಧಿಕಾರಿಗಳಿಂದ ಉತ್ತರ ದೊರೆಯುತ್ತಿಲ್ಲ. ಸದ್ಯ ಈ ಕಟ್ಟಡದ ಮುಂದಿನ ಜಾಗ ವಾಹನಗಳ ನಿಲುಗಡೆಯ ತಾಣವಾಗಿದೆ ಹೋಗಿದೆ!

ನಿರ್ವಹಣೆಗೆ ಟೆಂಡರ್‌ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸಲು ಪಾಲಿಕೆ ಅಧಿಕಾರಿಗಳು ಕಾಳಜಿ ವಹಿಸದಿರುವ ಕಾರಣ, ಶೌಚಾಲಯ ಬಳಕೆಗೆ ಬಾರದಂತಹ ಸ್ಥಿತಿ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.