ಮೈಸೂರು: ‘ಮೈಸೂರು– ಹಂಪಿ ಸೇರಿದಂತೆ ರಾಜ್ಯದ ಪ್ರಮುಖ ತಾಣಗಳಲ್ಲಿ ಪ್ರವಾಸಿಗರೊಡನೆ ವ್ಯವಹರಿಸಲು ಅನುಕೂಲವಾಗುವಂತೆ ಪ್ರತ್ಯೇಕ ಪ್ರವಾಸಿ ಸ್ನೇಹಿ ಪೊಲೀಸ್ ಘಟಕ ತೆರೆಯಲು ಚಿಂತನೆ ನಡೆದಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಗುರುವಾರ ಹೋಟೆಲ್ ಉದ್ಯಮಿಗಳ ಜೊತೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿ, ‘ರಾಜ್ಯದ ಪ್ರವಾಸಿ ತಾಣಗಳಿಗೆ ದೇಶ–ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹೀಗೆ ಬಂದವರೊಂದಿಗೆ ಪೊಲೀಸರು ಕೆಟ್ಟದಾಗಿ ವರ್ತಿಸಿದರೆ ಇಡೀ ರಾಜ್ಯಕ್ಕೆ ಕೆಟ್ಟ ಹೆಸರು. ಹೀಗಾಗಿ ಪ್ರವಾಸಿ ಸ್ನೇಹಿ ಘಟಕ ತೆರೆಯಲಾಗುವುದು. ಪ್ರವಾಸಿಗರೊಡನೆ ಸೌಜನ್ಯದಿಂದ ವರ್ತಿಸುವ, ಹಿಂದಿ–ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳನ್ನು ಮಾತನಾಡುವ ತರಬೇತಿಯನ್ನೂ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಮೈಸೂರಿನಲ್ಲಿ ಮಧ್ಯರಾತ್ರಿ 1ರವರೆಗೆ ವ್ಯಾಪಾರ–ವಹಿವಾಟಿಗೆ ಅವಕಾಶ ನೀಡಬೇಕು’ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡರ ಮನವಿಗೆ ಸ್ಪಂದಿಸಿದ ಗೃಹ ಸಚಿವರು, ‘ಇನ್ನೊಂದು ವಾರದೊಳಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
‘ಪ್ರಮುಖ ನಗರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ರಾತ್ರಿ 1ರವರೆಗೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅನುಮತಿಯ ಅಗತ್ಯವಿದೆ. ರಾತ್ರಿ 10.30ಕ್ಕೆ ಹೋಟೆಲ್ ಮುಚ್ಚುವುದರಿಂದ ಎಷ್ಟೋ ಬಾರಿ ಪ್ರವಾಸಿಗರು ಊಟ ಸಿಗದೇ ಪರದಾಡುತ್ತಾರೆ. ಮದ್ಯಪಾನಾಸಕ್ತರು ನಮ್ಮನ್ನು ಸಮಯ ಕೇಳಿ ಕುಡಿಯುವುದಿಲ್ಲ. ಜನರಿಗೆ ಆಗುವ ತೊಂದರೆ ತಪ್ಪಿಸಲು ಬೆಂಗಳೂರಿನಲ್ಲಿ ಈಗಾಗಲೇ ರಾತ್ರಿ 1ರವರೆಗೆ ಅನುಮತಿ ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.