ADVERTISEMENT

ದಸರಾ ಕವಿಗೋಷ್ಠಿ: ಪಾಲ್ಗೊಳ್ಳದಿರಲು ಆರಿಫ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 16:22 IST
Last Updated 5 ಅಕ್ಟೋಬರ್ 2024, 16:22 IST
<div class="paragraphs"><p>ಆರಿಫ್‌ ರಾಜಾ</p></div>

ಆರಿಫ್‌ ರಾಜಾ

   

(ಚಿತ್ರ ಕೃಪೆ: ಆರಿಫ್‌ ರಾಜಾ/ಫೇಸ್‌ಬುಕ್)

ಮೈಸೂರು: ‘ಈ ಬಾರಿಯ ದಸರಾ ಪ್ರಧಾನ (ಸಮೃದ್ಧ) ಕವಿಗೋಷ್ಠಿಯಲ್ಲಿ ನಾನು ಭಾಗವಹಿಸುತ್ತಿಲ್ಲ. ಆಮಂತ್ರಣ ಪತ್ರಿಕೆ ನೋಡಿದ ಮೇಲೆ ಈ ನಿರ್ಧಾರಕ್ಕೆ ಬಂದಿರುವೆ’ ಎಂದು ಕವಿ, ಅನುವಾದಕ ಆರಿಫ್‌ ರಾಜಾ ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಫೇಸ್‌ಬುಕ್‌ ಖಾತೆಯಲ್ಲಿ ಶನಿವಾರ ಪೋಸ್ಟ್‌ ಹಾಕಿರುವ ಅವರು, ‘ಕವಿಗಳ ಆಯ್ಕೆಯಲ್ಲಿ ಪ್ರತಿಭೆ ಎಷ್ಟು ಮುಖ್ಯ ಮಾನದಂಡವೋ, ಪ್ರಾತಿನಿಧ್ಯವೂ ಅಷ್ಟೇ ಮುಖ್ಯವೆಂಬುದು ನನ್ನ ಅಭಿಮತ. ಕಳೆದೆರಡು ದಶಕಗಳಿಂದ ಗಂಭೀರವಾಗಿ ಕಾವ್ಯ ರಚನೆಯಲ್ಲಿ ತೊಡಗಿರುವ, ಸಮಕಾಲೀನ ಕನ್ನಡ ಕಾವ್ಯದ ಮುಖ್ಯ ದನಿಗಳನ್ನು ಒಳಗೊಂಡಿದ್ದರೆ ಈ ದಸರಾ ಕವಿಗೋಷ್ಠಿ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಇನ್ನು ಮುಂದಾದರೂ ಸಂಬಂಧಿಸಿದವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿ’ ಎಂದು ಬರೆದಿದ್ದಾರೆ.

ಕವಿಗೋಷ್ಠಿಯಲ್ಲಿ ಈ ಹಿಂದೆ ಪಾಲ್ಗೊಂಡಿದ್ದವರಿಗೇ ಮತ್ತೆ ಅವಕಾಶ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾದ ಕಾರಣದಿಂದ ಅವರು ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಸಮೃದ್ಧ ಕವಿಗೋಷ್ಠಿ ಅ.9ರಂದು ನಡೆಯಲಿದೆ.

‘ದಸರಾ ಉದ್ಘಾಟನೆಗೆ ಆಹ್ವಾನಿತರಾಗಿದ್ದ ಪ್ರೊ.ಹಂ.ಪ.ನಾಗರಾಜಯ್ಯ ಅವರು ಕವಿಗೋಷ್ಠಿಯ ಆಹ್ವಾನವನ್ನು (ಅವರು ಅ.7ರಂದು ನಡೆಯುವ ‘ಸಂತಸ’ ಶೀರ್ಷಿಕೆಯ ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ) ನಿರಾಕರಿಸುವ ಸಾತ್ವಿಕತೆ ತೋರದಿರುವುದು ಮೌಲ್ಯಗಳ ಇಳಿಮುಖದ ಸಂಕೇತ... ಅಷ್ಟೇ’ ಎಂದು ಬಸೂ (ಬಸವರಾಜ್‌ ಸೂಳಿಭಾವಿ) ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಕವಿಗೋಷ್ಠಿ ಉಪ ಸಮಿತಿಯ ಎಡವಟ್ಟುಗಳು ಮುಂದುವರಿದಿದ್ದು, ಆಹ್ವಾನಪತ್ರಿಕೆ ಮುದ್ರಿಸಿದ ನಂತರ ಕೆಲವರ ಹೆಸರನ್ನು ಸೇರಿಸಿ ಆಹ್ವಾನಿಸಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.