ADVERTISEMENT

ದಸರಾ ಕವಿಗೋಷ್ಠಿ: ಅನುಮತಿಯಿಲ್ಲದೆ ಆಹ್ವಾನ ಪತ್ರಿಕೆಯಲ್ಲಿ ಹೆಸರು- ಪಿ.ಚಂದ್ರಿಕಾ

ಕವಿತೆ ವಾಚಿಸಿ ಪ್ರತಿಭಟನೆ ದಾಖಲಿಸಿದ ಕವಯತ್ರಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 9:40 IST
Last Updated 3 ಅಕ್ಟೋಬರ್ 2022, 9:40 IST

ಮೈಸೂರು: ಅನುಮತಿಯಿಲ್ಲದೇ ಪ್ರತಿಷ್ಠಿತ ದಸರಾ ಪ್ರಧಾನ ಕವಿಗೋಷ್ಠಿಯ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿರುವುದಕ್ಕೆ ಕವಯತ್ರಿ ಪಿ.ಚಂದ್ರಿಕಾ ಅಸಮಾಧಾನ ವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸೋಮವಾರ ನಡೆದ ಕವಿಗೋಷ್ಠಿಯಲ್ಲಿ ಕಾವ್ಯ ವಾಚನಕ್ಕೂ ಮುನ್ನ ದಸರಾ ಕವಿಗೋಷ್ಠಿ ಉಪಸಮಿತಿ ನಡೆಯನ್ನು ವಿರೋಧಿಸಿದರು.

ಗೋಪಾಲಕೃಷ್ಣ ಅಡಿಗರ ಮಾತುಗಳ‌ ಮೂಲಕ ಕನ್ನಡದ ಸಂಸ್ಕೃತಿಯ ಹಿರಿಮೆಯನ್ನು ಹೇಳಿದ ಪಿ‌.ಚಂದ್ರಿಕಾ, 'ಕನ್ನಡ ಸಾಹಿತ್ಯ ಪರಂಪರೆಗೆ ಅಕ್ಷರ ಕೂಡಿಸುವ ಕವಿಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು, ಸ್ಮರಿಸಬೇಕು' ಎಂದರು.

ADVERTISEMENT

'ಅನಾರೋಗ್ಯವಿದ್ದರೂ ಕವಿತೆ ವಾಚಿಸಲು ಇಲ್ಲಿಗೆ ಬಂದಿದ್ದೇನೆ. ಕವಿಗೋಷ್ಠಿಗೆ ನನ್ನನ್ನು ಕರೆದಿರಲಿಲ್ಲ. ಫೋನ್ ಕರೆಯನ್ನೂ ಮಾಡಿ ಆಹ್ವಾನಿಸಲಿಲ್ಲ. ಅವ್ಯವಸ್ಥೆಯಿಂದ ಕೂಡಿದೆ. ಹೀಗಾಗಿ, ಗೌರವಧನ, ಪ್ರಯಾಣ ಭತ್ಯೆ ಸ್ವೀಕರಿಸುವುದಿಲ್ಲ' ಎಂದು ಹೇಳಿದರು.

' ಕತ್ತರಿಸುವ ಕತ್ತರಿಯಾಗಬೇಡಿ, ಕೂಡಿಸುವ ಸೂಜಿಯಾಗಿ' ಎಂಬ ಕವಿ ನಾಮದೇವ ಕವನದ ಸಾಲು ವಾಚಿಸಿ, ದಸರಾ ಕವಿಗೋಷ್ಠಿ ಉಪಸಮಿತಿಯ ನಡೆ, ಅವ್ಯವಸ್ಥೆಯನ್ನೂ ಟೀಕಿಸಿದರು.

ಬಳಿಕ 'ಮಹಮ್ಮದ್ ಪೈಗಂಬರ್' ಶೀರ್ಷಿಕೆಯ ತಮ್ಮ ಕವಿತೆಯನ್ನು ವಾಚಿಸಿದರು.

ಕವನ ವಾಚನದ ನಂತರ ವೇದಿಕೆ ಪ್ರವೇಶಿಸಿದ ಉಪಸಮಿತಿ ಕಾರ್ಯಾಧ್ಯಕ್ಷ ಡಾ.ಎಂ.ಜಿ.ಮಂಜುನಾಥ್ ಮಾತನಾಡಿ, 'ವ್ಯಾಟ್ಸ್ ಆ್ಯಪ್ ಮೂಲಕ ಆಹ್ವಾನ ನೀಡಿದ್ದೇವೆ. ಕರೆಯ ಸಂಭಾಷಣೆಗಳನ್ನೂ ನೀಡುತ್ತೇವೆ. ತಪ್ಪಿದ್ದರೆ ಕ್ಷಮಿಸಿಬಿಡಿ. ನಾವು ಸಣ್ಣವರು. ನೀವು ದೊಡ್ಡವರು' ಎಂದು ಸಮಜಾಯಿಷಿ ನೀಡಲು ಮುಂದಾದರು.

ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಉಪಸಮಿತಿ ಉಪ ವಿಶೇಷಾಧಿಕಾರಿ ವೇದಿಕೆ ಡಾ.ಎಂ.ದಾಸೇಗೌಡ, 'ಕ್ಷಮೆ ಕೇಳಿದ‌ ಮೇಲೂ ಮುಂದುವರಿಸುವುದು ಬೇಡ' ಎಂದರು.

'ತಪ್ಪು ಮಾಹಿತಿ ಕೊಡಬೇಡಿ. ಯಾರಿಗೆ ಆಹ್ವಾನ ನೀಡಿದ್ದೀರಿ ಎಂಬುದನ್ನು ತಿಳಿಸಿ. ನಾನು ನನ್ನ ಪ್ರತಿಭಟನೆಯನ್ನು ದಾಖಲಿಸಿದ್ದೇನೆ. ಕವಿತೆಯನ್ನು ಓದಿದ್ದೇನೆ. ಅವ್ಯವಸ್ಥೆಯನ್ನು ತೋರ್ಪಡಿಸಿ, ಮತ್ತಷ್ಟು ಬೆಳೆಸುತ್ತಿರುವವರು ನೀವು' ಎಂದು ಹೇಳಿದ ಚಂದ್ರಿಕಾ ಅವರು ಸನ್ಮಾನವನ್ನೂ ಸ್ವೀಕರಿಸದೇ ವೇದಿಕೆಯಿಂದ ನಿರ್ಗಮಿಸಿದರು.

ನಂತರ ಕವಿತೆ ವಾಚಿಸಿದ ಚ.ಹ.ರಘುನಾಥ, 'ಸಹ ಕವಿಯ ಸಂಕಟವೂ ನನ್ನದೂ ಆಗಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.