ADVERTISEMENT

ಮೈಸೂರು | ವಾಹನ ನಿಲುಗಡೆಗೆ ನಿರ್ಬಂಧ: ಪೊಲೀಸ್‌, ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ

ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 7:37 IST
Last Updated 22 ಜೂನ್ 2024, 7:37 IST
<div class="paragraphs"><p>ಸಾಂಕೇತಿಕ ಚಿತ್ರ ( ಸಂಗ್ರಹ)</p></div>

ಸಾಂಕೇತಿಕ ಚಿತ್ರ ( ಸಂಗ್ರಹ)

   

ಮೈಸೂರು: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಸೂಚನೆಯಂತೆ ಪಾಲಿಕೆ ಹಾಗೂ ನಗರ ಪೊಲೀಸ್‌ ಅಧಿಕಾರಿಗಳು ಶುಕ್ರವಾರ ಎಂ.ಜಿ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ವಾಹನ ತೆರವುಗೊಳಿಸಿದರು.

ಎಂ.ಜಿ ರಸ್ತೆಯಲ್ಲಿ ನಡೆಯುತ್ತಿರುವ ‘ರೈತ ಸಂತೆ’ಯಿಂದಾಗಿ ತೊಂದರೆಯಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಸಂತೆಯನ್ನು ಬಂಡೀಪಾಳ್ಯ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿ ಸೂಚಿಸಿದ್ದರು. ಈ ಬಗ್ಗೆ ಸಭೆ ನಡೆಸಿದಾಗ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಅವರ ಮನವಿಯಂತೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ವಚ್ಛತೆ ಕಾಪಾಡಲು ಖಾಯಂ ಪೌರಕಾರ್ಮಿಕ ಸಿಬ್ಬಂದಿ ನೇಮಕಕ್ಕೆ ಸೂಚಿಸಿದ್ದರು.

ADVERTISEMENT

ರಸ್ತೆ ಬದಿ ವಾಹನ ನಿಲ್ಲಿಸಿ ಸಂಚಾರಕ್ಕೆ ತೊಂದರೆ ನೀಡಿದರೆ ದಂಡ ಹಾಕಿ, ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆಯೂ ತಿಳಿಸಿದ್ದರು. ಶುಕ್ರವಾರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಅದನ್ನು ಕಾರ್ಯರೂಪಕ್ಕೆ ತಂದರು. ರಸ್ತೆ ಬದಿ ಬ್ಯಾರಿಕೇಡ್‌ ಅಳವಡಿಸಿ ನಿಲುಗಡೆ ನಿರ್ಬಂಧಿಸಿದರು.

ಪೌರಕಾರ್ಮಿಕ ಸಿಬ್ಬಂದಿ ತರಕಾರಿ ತ್ಯಾಜ್ಯ, ಪ್ಲಾಸ್ಟಿಕ್‌ ವಸ್ತು ತೆರವು ಮಾಡಿ ಸ್ವಚ್ಛಗೊಳಿಸಿದರು. ಸದಾ ಗಿಜಿಗುಡುತ್ತಿದ್ದ ರಸ್ತೆ ಶುಕ್ರವಾರ ಶಾಂತವಾಗಿತ್ತು. ಸಂಚಾರಕ್ಕೆ ಮುಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.