ADVERTISEMENT

ಪೊಲೀಸರಿಂದ ಆರೋಪಿ ಮೇಲೆ ಗುಂಡಿನ ದಾಳಿ; ಗಾಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 3:18 IST
Last Updated 10 ಫೆಬ್ರುವರಿ 2021, 3:18 IST

ಮೈಸೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡುತ್ತಿದ್ದ ಕೊಲೆ ಯತ್ನ ಪ್ರಕರಣವೊಂದರ ಆರೋಪಿ ಜಯಂತ್ ಎಂಬಾತನ ಮೇಲೆ ಪೊಲೀಸರು ಮಂಗಳವಾರ ಸಂಜೆ ಗುಂಡು ಹಾರಿಸಿ, ಬಂಧಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಹೆಡ್‌ಕಾನ್‌ಸ್ಟೆಬಲ್ ರವಿ ಹಾಗೂ ಕಾನ್‌ಸ್ಟೆಬಲ್ ರವಿ ಅವರನ್ನು ಹುಣಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿ ಗೇಟ್‌ ಬಳಿ ಜ. 21ರಂದು ಈತ ಹಾಗೂ ಇನ್ನಿತರ ಆರೋಪಿಗಳು ಕೆಎಸ್‌ಆರ್‌ಟಿಸಿ ಬಸ್ ಚಾಲಕ ವೆಂಕಟೇಶ್‌ ಎಂಬುವವರಿಗೆ ರಸ್ತೆಯಲ್ಲಿ ಜಾಗ ಬಿಡಲಿಲ್ಲ ಎಂದು ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಈ ಕುರಿತ ವಿಡಿಯೊ ಸಾಕಷ್ಟು ವೈರಲ್‌ ಆಗಿತ್ತು.

ಆರೋಪಿಗಳ ಸುಳಿವನ್ನು ಆಧರಿಸಿ ಇನ್‌ಸ್ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡವು ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಆರೋಪಿಗಳಾದ ಜಯಂತ್, ವಿಘ್ನೇಶ್ ಹಾಗೂ ದೀಪಕ್ ಅವರನ್ನು ಕರೆದುಕೊಂಡು ಬರುವಾಗ ಬಿಳಿಕೆರೆ ಸಮೀಪ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಜಯಂತ್ ಇಳಿದಿದ್ದಾನೆ. ರಸ್ತೆಬದಿ ಬಿದ್ದಿದ್ದ ದೊಣ್ಣೆಯಿಂದ ಹೆಡ್‌ಕಾನ್‌ಸ್ಟೆಬಲ್ ರವಿ ಹಾಗೂ ಕಾನ್‌ಸ್ಟೆಬಲ್ ರವಿ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ADVERTISEMENT

ಈ ವೇಳೆ ಬಿಳಿಕೆರೆ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಜಯಪ್ರಕಾಶ್‌ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಈ ಆರೋಪಿಯು ಶ್ರೀರಂಗಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲೂ ಭಾಗಿಯಾಗಿದ್ದ ಅಂಶ ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.