‘ಸೋಲಿನ ಅವಲೋಕನ’
ಉಪಚುನಾವಣೆ ಫಲಿತಾಂಶದ ವಿಷಯದಲ್ಲಿ ಜನರ ತೀರ್ಪನ್ನು ಗೌರವಿಸುತ್ತೇವೆ. ಮೂರು ಕಡೆ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆ ಇತ್ತು. ಈ ರೀತಿಯ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಚನ್ನಪಟ್ಟಣದಲ್ಲಿ ನಾವು ಸಹ ಪ್ರಚಾರ ಮಾಡಿದ್ದೆವು. ಜನರ ಒಲವು ನಮ್ಮ ಪರವಿತ್ತು. ಸೋಲಿನ ಅವಲೋಕನ ಮಾಡುತ್ತೇವೆ.
– ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಸಂಸದ
‘ಅನೈತಿಕ ಮೈತ್ರಿಗೆ ತಕ್ಕ ಉತ್ತರ’
ಜೆಡಿಎಸ್–ಬಿಜೆಪಿಯ ಅನೈತಿಕ ಮೈತ್ರಿಗೆ ಈ ಫಲಿತಾಂಶ ಉತ್ತರ ಕೊಟ್ಟಿದೆ. ವಾಲ್ಮೀಕಿ ನಿಗಮ, ವಕ್ಫ್, ಪಡಿತರ ಚೀಟಿ ಮೊದಲಾದ ಸಂಗತಿಗಳನ್ನು ಮುಂದಿಟ್ಟುಗೊಂಡು ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿತ್ತು. ಮುಡಾದಲ್ಲಿ ಸಾವಿರಾರು ನಿವೇಶನ ಹಂಚಿಕೆ ಆಗಿದ್ದರೂ ಕೇವಲ 14 ನಿವೇಶನ ಗುರಿ ಮಾಡಿಕೊಂಡು ತನಿಖೆ ನೆಪದಲ್ಲಿ ಕಿರುಕುಳ ನೀಡಲಾಗಿತ್ತು, ಚುನಾವಣೆ ನೆಪಕ್ಕೆ ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿದರು. ಈಗ ಅವರಿಗೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ.
–ತನ್ವೀರ್ ಸೇಠ್, ಕಾಂಗ್ರೆಸ್ ಶಾಸಕ
‘ಗ್ಯಾರಂಟಿ ಪರಿಣಾಮಕಾರಿ’
ನಾವು ನಿರೀಕ್ಷೆ ಮಾಡಿದಂತೆ ಜನ ಆಶೀರ್ವಾದ ಮಾಡಿದ್ದಾರೆ. ಗ್ಯಾರಂಟಿ ಹೆಚ್ಚು ಪರಿಣಾಮಕಾರಿಯಾಗಿ ಜನಪರವಾಗಿ ಎಂಬುದು ಸಾಕ್ಷಿಯಾಗಿದೆ. ಸುಳ್ಳನ್ನು ಸತ್ಯ ಮಾಡಲು ರಾಜಕೀಯ ಟೀಕೆ ಮಾಡುವುದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಮುಡಾ ಎಂಬುದು ಹಗರಣವೇ ಅಲ್ಲ, ಇದೊಂದು ರಾಜಕೀಯ ಷಡ್ಯಂತ್ರವಾಗಿದೆ. ಈ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
-ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
‘ದೇವೇಗೌಡರ ಕುಟುಂಬಕ್ಕೆ ಪಾಠ’
ಮುಡಾ ವಿಚಾರದಲ್ಲಿ ಬಿಜೆಪಿಯವರು ಸುಳ್ಳನ್ನೇ ಸತ್ಯ ಮಾಡುವ ಕೆಲಸ ಮಾಡಿದರು. ಸುಳ್ಳನ್ನು ಜನರು ತಿರಸ್ಕಾರ ಮಾಡಿದ್ದಾರೆ. ದೇವೇಗೌಡರನ್ನು ಜನ ಒಪ್ಪಿಲ್ಲ. ಜನ ಈಗ ಬುದ್ಧಿ ಕಲಿತಿದ್ದಾರೆ. ದೇವೇಗೌಡರು ಕುಟುಂಬಕ್ಕೋಸ್ಕರ ರಾಜಕಾರಣ ಮಾಡುತ್ತಾರೆ ಎಂಬುದು ಜನರಿಗೆ ಗೊತ್ತಾಗಿದೆ.
- ಕೆ. ವೆಂಕಟೇಶ್, ಪಶು ಸಂಗೋಪನೆ ಸಚಿವ
‘ಸಿದ್ದರಾಮಯ್ಯರ ನೈತಿಕ ಗೆಲವು’
ಕೆಲವು ಸಮೀಕ್ಷೆಗಳಲ್ಲಿ ಒಂದು ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲುತ್ತದೆ ಅಂತ ಇತ್ತು. ಆದರೆ ಕಾರ್ಯಕರ್ತರ ಶ್ರಮದಿಂದ ಮೂರು ಕಡೆ ಗೆದ್ದಿದ್ದೇವೆ. ಜನರು ಕೋಮುವಾದಿ ಬಿಜೆಪಿ– ಜೆಡಿಎಸ್ ಅನ್ನು ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಎಂದು ಬಿಂಬಿಸಲು ಹೊರಟಿದ್ದರು. ಸುಳ್ಳು ಹಾಗು ವಾಮ ಮಾರ್ಗದ ಮೂಲಕ ಸರ್ಕಾರವನ್ನು ಬೀಳಿಸಲು ಮುಂದಾಗಿದ್ದರು. ಇದಕ್ಕೆಲ್ಲ ಜನರು ಉತ್ತರ ಕೊಟ್ಟಿದ್ದಾರೆ.ಇದು ಸಿದ್ದರಾಮಯ್ಯನವರ ನೈತಿಕ ಗೆಲುವು.
– ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ
‘ಗೆದ್ದವರು ಬೀಗುವ ಅಗತ್ಯವಿಲ್ಲ’
ಇದು ಸಿದ್ದರಾಮಯ್ಯ ಆಡಳಿತಕ್ಕೆ ಜನರು ಕೊಟ್ಟ ತೀರ್ಪಲ್ಲ. ಈ ತೀರ್ಪಿನಿಂದ ಹಗರಣಗಳು ಮುಚ್ಚಿ ಹೋಗುವುದಿಲ್ಲ. ಗೆದ್ದವರು ಬೀಗುವ ಅಗತ್ಯವೂ ಇಲ್ಲ. ಹಣ, ಹೆಂಡ, ಶಿಫಾರಸ್ಸು ಇಂತಹದರ ಮೇಲೆಯೇ ಚುನಾವಣೆ ನಡೆಯುವುದು. ಈ ಚುನಾವಣೆಯೂ ಅದೇ ರೀತಿ ನಡೆದಿದೆ.
ಮುಡಾ ಹಗರಣ ಮೈಸೂರು ವ್ಯಾಪ್ತಿಯದು. ಹೀಗಾಗಿ ಅದು ಚನ್ನಪಟ್ಟಣದಲ್ಲಿ ವರ್ಕ್ ಆಗುತ್ತದೆ ಅಂದುಕೊಳ್ಳುವುದು ಬೇಡ. ಹಗರಣದ ಆರೋಪ ಹೊತ್ತವರು ಈ ತೀರ್ಪಿನಿಂದ ಖುಷಿ ಪಡುವ ಅಗತ್ಯ ಇಲ್ಲ. ನಿಖಿಲ್ ಸೋತಿದ್ದಾರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ. ಬಿಜೆಪಿ-ಜೆಡಿಎಸ್ ನವರು ಒಟ್ಟಾಗಿ ಕೆಲಸ ಮಾಡಿದರು. ಆದರೂ ಅದು ಫಲ ಕೊಟ್ಟಿಲ್ಲ. ಬಿಜೆಪಿಯಲ್ಲಿ ನಾಲ್ಕು ಗುಂಪುಗಳು ಇರುವುದು ಸತ್ಯ. ಬಿಜೆಪಿಯವರಿಗೆ ಜನರು ಮತ್ತೆ ಮತ್ತೆ ಅವಕಾಶ ಕೊಟ್ಟಿದ್ದಾರೆ. ಇದು ತಪ್ಪನ್ನು ತಿದ್ದಿಕೊಳ್ಳುವ ಅವಕಾಶ.
– ಎಚ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.