ADVERTISEMENT

ಸಿ.ಎಂ ಭೇಟಿಯಾದ ಪ್ರಸಾದ್‌ ಅಳಿಯ ಮೋಹನ್‌

ಚಾಮರಾಜನಗರ ಕ್ಷೇತ್ರ: ಬಿಜೆಪಿ ಟಿಕೆಟ್‌ ಕೈತಪ್ಪಿದ ಬಳಿಕ ಕಾಂಗ್ರೆಸ್‌ ಟಿಕೆಟ್‌ಗಾಗಿ ಲಾಬಿ?

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 15:54 IST
Last Updated 15 ಮಾರ್ಚ್ 2024, 15:54 IST
ಡಾ.ಎನ್‌.ಎಸ್‌.ಮೋಹನ್‌
ಡಾ.ಎನ್‌.ಎಸ್‌.ಮೋಹನ್‌   

ಮೈಸೂರು/ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈ ತಪ್ಪಿದ ಬಳಿಕ, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಕಿರಿಯ ಅಳಿಯ ಡಾ. ಎನ್‌.ಎಸ್‌.ಮೋಹನ್‌ ಅವರು ಕಾಂಗ್ರೆಸ್‌ ಕದ ತಟ್ಟುತ್ತಿದ್ದು, ಶುಕ್ರವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು. 

ಎಸ್‌.ಬಾಲರಾಜ್‌ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆಯಾದ ಮಾರನೇ ದಿನವೇ (ಗುರುವಾರ) ಅವರು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. 

ಶುಕ್ರವಾರ ಬೆಳಿಗ್ಗೆ ಮೋಹನ್‌ ಅವರು ಸಿದ್ದರಾಮಯ್ಯ ಮಗ ಯತೀಂದ್ರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾಗಿದ್ದು, ಬಳಿಕ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಸಿ.ಎಂ ನಿವಾಸಕ್ಕೆ ಎಚ್‌.ಡಿ.ಕೋಟೆ ಶಾಸಕ ಶಾಸಕ ಅನಿಲ್‌ ಚಿಕ್ಕಮಾದು, ಬಿಜೆಪಿ ಮುಖಂಡ, ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೋಟೆ ಎಂ.ಶಿವಣ್ಣ ಅವರೊಂದಿಗೆ ಭೇಟಿ ನೀಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದರು. 

ADVERTISEMENT

ಭೇಟಿ ಬಳಿಕ ಮೋಹನ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಕ್ಕಿಲ್ಲ. ಮುಖ್ಯಮಂತ್ರಿಯೊಂದಿಗಿನ ಮಾತುಕತೆ ಮಾಹಿತಿ ಲಭ್ಯವಾಗಿಲ್ಲ. 

‘ಚಾಮರಾಜನಗರ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಅಂತಿಮಗೊಳ್ಳದಿರುವುದರಿಂದ ತಮಗೆ ಅವಕಾಶ ನೀಡುವಂತೆ ಮೋಹನ್‌ ಮನವಿ ಮಾಡಿದ್ದಾರೆ’ ಎಂದು ಹೇಳಲಾಗುತ್ತಿದೆ.  

ಸಿದ್ದರಾಮಯ್ಯ ಮತ್ತು ಶ್ರೀನಿವಾಸ ಪ್ರಸಾದ್‌ ನಡುವಿನ ಸಂಬಂಧ ಹಳಸಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಅಳಿಯನ ಕಾಂಗ್ರೆಸ್‌ ಸೇರ್ಪಡೆ ಮತ್ತು ಸ್ಪರ್ಧೆಗೆ ಸಂಸದರು ಸಮ್ಮತಿಸುತ್ತಾರೆಯೇ? ಪಕ್ಷದಲ್ಲಿ ಈಗಾಗಲೇ ಹಲವು ಆಕಾಂಕ್ಷಿಗಳು ಇರುವುದರಿಂದ ಬೇರೆ ಪಕ್ಷದಿಂದ ಬಂದವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್‌ ನೀಡಲು ಸಿದ್ದರಾಮಯ್ಯ ಒಪ್ಪುತ್ತಾರೆಯೇ ಎಂಬ ಕುತೂಹಲ ಮೂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.