ADVERTISEMENT

ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ರಾಜೀನಾಮೆ

‘ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ವಿರುದ್ಧ ಹೋರಾಡುವೆ’

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:14 IST
Last Updated 4 ಜುಲೈ 2024, 14:14 IST
ಪಿ.ಎಂ.ಪ್ರಸನ್ನ
ಪಿ.ಎಂ.ಪ್ರಸನ್ನ   

ಮೈಸೂರು: ಇಲ್ಲಿನ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ  ಪಿ.ಎಂ. ಪ್ರಸನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಜುಲೈ 1ರಂದು ರಾಜೀನಾಮೆ ಸಲ್ಲಿಸಿದ್ದು, ಅಂಗೀಕಾರವಾಗಿಲ್ಲ. ಅಧಿಕಾರಾವಧಿ ಇನ್ನೂ ಒಂದೂವರೆ ವರ್ಷದವರೆಗೆ ಇತ್ತು.‌ ‘ರಾಜೀನಾಮೆ ನೀಡಲು ಪಶುಸಂಗೋಪನಾ ಸಚಿವರು ಕೊಡುತ್ತಿರುವ ತೊಂದರೆ ಕಾರಣ’ ಎಂದು ದೂರಿದ್ದಾರೆ.

‘ವೆಂಕಟೇಶ್‌ ಸಚಿವರಾದಾಗಿನಿಂದಲೂ ಕಿರುಕುಳ ನೀಡಿ, ದಬ್ಬಾಳಿಕೆ ಮಾಡುತ್ತಲೇ ಇದ್ದಾರೆ. ಅವರಿಗೆ ಅಭಿವೃದ್ಧಿ ಮಾಡಬೇಕೆಂಬ ಉದ್ದೇಶವಿಲ್ಲ. ತೊಂದರೆ ಕೊಡುವುದನ್ನೇ ಆದ್ಯತೆಯಾಗಿಟ್ಟುಕೊಂಡಿದ್ದಾರೆ. ಇದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ನಾನು ಜೆಡಿಎಸ್‌ ಪಕ್ಷದವನೆಂದು ತೊಂದರೆ ನೀಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಕೇವಲ ಆರು ತಿಂಗಳಲ್ಲಿ 26 ಬಾರಿ ನೋಟಿಸ್‌ ಕೊಡಿಸಿದ್ದಾರೆ. ಉತ್ತರಿಸಲೂ ಅವಕಾಶ ಕೊಡದೆ, ನೋಟಿಸ್ ಜಾರಿಗೊಳಿಸುತ್ತಿದ್ದಾರೆ. ನನ್ನನ್ನು ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವುದೇ ಅವರ ಉದ್ದೇಶವಾಗಿತ್ತು. ಅವರ ವಿರುದ್ಧ ನನ್ನ ಹೋರಾಟ ಮುಂದುವರಿಸುತ್ತೇನೆ. ನನ್ನಿಂದ ರೈತರ ಸಂಸ್ಥೆಗೆ ತೊಂದರೆಯಾಗಬಾರದೆಂದು ರಾಜೀನಾಮೆ ಕೊಟ್ಟಿದ್ದೇನೆ’ ಎಂದರು.

‘ನನ್ನ ಗಮನಕ್ಕೆ ತಾರದೆಯೇ ಒಕ್ಕೂಟಕ್ಕೆ ಹೊಸದಾಗಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಲಾಗಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೆಲಸ ಮಾಡಲು ಸಾಧ್ಯವಾಗುವುದೇ’ ಎಂದು ಕೇಳಿದರು.

‘ನಮ್ಮ ಅವಧಿಯಲ್ಲಿ ಹಾಲಿಗೆ ಒಳ್ಳೆಯ ಬೆಲೆ ನೀಡಿದ್ದೇವೆ. ಉತ್ತಮ ಯೋಜನೆಗಳನ್ನು ರೂಪಿಸಿದ್ದೇವೆ. ರೈತರಿಗೆ ಒಳ್ಳೊಳ್ಳೆ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಇದನ್ನು ಸಹಿಸಿಕೊಳ್ಳಲು ಪಶುಸಂಗೋಪನಾ ಸಚಿವರಿಗೆ ಆಗುತ್ತಿಲ್ಲ’ ಎಂದು ದೂರಿದರು.

‘ಸ್ವಗ್ರಾಮ ಕಗ್ಗುಂಡಿ ಹಾಲು ಉತ್ಪಾದಕರ ಸಂಘದಲ್ಲಿ ಸದಸ್ಯತ್ವ ಹೊಂದಿದ್ದೇನೆ. ಆದರೂ ವಾಸಸ್ಥಳ ದೃಢೀಕರಣಕ್ಕೆ ಸಂಬಂಧಿಸಿ ನೋಟಿಸ್ ಕೊಡಲಾಗಿದೆ’ ಎಂದು ಆರೋಪಿಸಿದರು.

ಕೆ.ವೆಂಕಟೇಶ್‌

ಪುಣ್ಯದ ಕೆಲಸಕ್ಕೆ ನೋಟಿಸ್‌: ಸಚಿವ ‌

‘ಅವರು ಮಾಡಿರುವ ಪುಣ್ಯದ ಕೆಲಸಗಳ ಕಾರಣಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಅದನ್ನು ಸಂಬಂಧಿಸಿದ ಇಲಾಖೆಯೇ ಕೊಟ್ಟಿದೆ. ನೋಟಿಸ್‌ಗಳನ್ನು ನಾನು ಕೊಡಲಾಗುತ್ತದೆಯೇ? ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಯಾರಾದರೂ ಸುಮ್ಮನೆ ನೋಟಿಸ್‌ ಜಾರಿಗೊಳಿಸುತ್ತಾರೆಯೇ?’ ಎಂದು ಸಚಿವ ವೆಂಕಟೇಶ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.