ADVERTISEMENT

ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಸೆ.17ರಿಂದ ಪಾದಯಾತ್ರೆ: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 13:52 IST
Last Updated 14 ಆಗಸ್ಟ್ 2024, 13:52 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಪಕ್ಷದ ನೇತಾರ, ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಈಚೆಗೆ ನಡೆಸಿದ್ದು ಬಿಜೆಪಿ ಅತೃಪ್ತರ ಅಥವಾ ಬಂಡಾಯಗಾರರ ಸಭೆಯಲ್ಲ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣ ಖಂಡಿಸಿ ಸೆ.‌17ರಿಂದ ಪಾದಯಾತ್ರೆಗೆ ನಿರ್ಧರಿಸಿದ್ದೇವೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೈಸೂರು ಚಲೋ ಪಾದಯಾತ್ರೆಯ ಅನುಭವವನ್ನು ಅಲ್ಲಿ ಹಂಚಿಕೊಂಡೆ. ನಿಗಮದ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಅಲುಗಾಡುತ್ತದೆ. ಯತ್ನಾಳ್ ಅವರಂಥ ದೊಡ್ಡ ನಾಯಕ ಕರೆದಿದ್ದರಿಂದ ಹೋಗಿದ್ದೆ’ ಎಂದರು.

‘ಪಾದಯಾತ್ರೆಯು ಯಾರದ್ದೇ ಮೇಲಾಟದ ಕಾರ್ಯಕ್ರಮವಲ್ಲ; ನಾಯಕತ್ವ ಪ್ರದರ್ಶನವೂ ಅಲ್ಲ. ಅದಕ್ಕೆ ಹೈಕಮಾಂಡ್ ಅನುಮತಿ ಕೊಡುತ್ತದೆ. ವರಿಷ್ಠರ ಅನುಮತಿಯೊಂದಿಗೇ ನಡೆಸುತ್ತೇವೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಎಲ್ಲರನ್ನೂ ಆಹ್ವಾನಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ADVERTISEMENT

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯನ್ನು ಭೇಟಿಯಾದ ತಮ್ಮನ್ನು ಟೀಕಿಸಿದ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ತಿರುಗೇಟು ನೀಡಿದ ಪ್ರತಾಪ, ‘ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆಯಾಗುವುದಿಲ್ಲ. ದಿನೇಶ್ ವಿಚಾರದಲ್ಲೂ ಅದೇ ಆಗಿದೆ. ಆರೋಪಿಯನ್ನು ಮಾತನಾಡಿಸುವುದೇ ತಪ್ಪಾ? ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದ ವಿಚಾರದಲ್ಲಿ ಆರೋಪಿಗಳಾಗಿದ್ದರೂ, ಕಾಂಗ್ರೆಸ್‌ ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಕಾಲಿಗೇಕೆ ಬೀಳುತ್ತಾರೆ?’ ಎಂದು ಕೇಳಿದರು. ‘ತಿಳಿಗೇಡಿ ಹೇಳಿಕೆಗಳನ್ನು ನಿಲ್ಲಿಸಬೇಕು’ ಎಂದರು.

‘ರಾಜ್ಯದಲ್ಲೇ ಇರಬೇಕೆಂದು ವರಿಷ್ಠರು ಹೇಳಿದ್ದರಿಂದ ಇಲ್ಲೇ ಇದ್ದೇನೆ. ನಾನು ಅನ್ಯಾಯದ ವಿರುದ್ಧ ಮಾತ್ರವೇ ರೆಬಲ್‌; ಪಕ್ಷದ ವಿರುದ್ಧವಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತಲೂ ನಾನು ಸೀನಿಯರ್. ಏಕೆಂದರೆ, ನನ್ನಪ್ಪ ಆರ್‌ಎಸ್ಎಸ್‌ನಲ್ಲಿದ್ದರು. ನಾನು ಪಕ್ಷದ ಕಾರ್ಯಕ್ರಮಗಳಲ್ಲಿ ಬ್ಯಾನರ್, ಬಂಟಿಂಗ್ ಕಟ್ಟಿಲ್ಲದಿರಬಹುದು. ಆದರೆ, ಯುವಜನರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ಸಮರ್ಥಿಸಿಕೊಂಡರು.

‘ನಾನು ಯಾರನ್ನೋ ಓಲೈಸಲು ಅಥವಾ ಮೆಚ್ಚಿಸಲು ರಾಜಕಾರಣ ಮಾಡುವುದಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟುವುದಿಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಆರ್‌ಎಸ್‌ಎಸ್‌. ಬಿಜೆಪಿ ಅಲ್ಲ. ಕ್ಷೇತ್ರ, ಜಾತಿಯಿಂದಾಚೆ ಜನಪ್ರಿಯತೆಯುಳ್ಳ ಯತ್ನಾಳ್ ಅಂಥವರಲ್ಲಿ ನಾನೂ ಒಬ್ಬ. ಈ ಬಗ್ಗೆ ಯಾರಿಗಾದರೂ ಅನುಮಾನ ಇದೆಯೇ? ಮೈಸೂರು ನೆಲೆ ಹಾಗೂ ಪ್ರೀತಿ ಕೊಟ್ಟಿದೆ. ಆದ್ದರಿಂದ ಮೈಸೂರಿನಲ್ಲೇ ಇರುತ್ತೇನೆ’ ಎಂದರು.

ಬಿ.ಎಸ್. ಯಡಿಯೂರಪ್ಪ ಅಂಥವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ಪಕ್ಷಕ್ಕೆ ನನ್ನಂತಹ ಯಂಗ್ ಬ್ಲಡ್ ಬರಬೇಕಿದೆ. ಹೀಗಾಗಿ ನನ್ನನ್ನು ರಾಜ್ಯದಲ್ಲೇ ಉಳಿಸಿದ್ದಾರೆ
ಪ್ರತಾಪ ಸಿಂಹ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.