ADVERTISEMENT

ಮೈಸೂರು: ಮಾರ್ಚ್ 1ರಿಂದ ಪಿಯು ಪರೀಕ್ಷೆ, 49 ಕೇಂದ್ರಗಳಲ್ಲಿ ಸಿದ್ಧತೆ

31,628 ವಿದ್ಯಾರ್ಥಿಗಳು ಭಾಗಿ; ವಿದ್ಯಾರ್ಥಿನಿಯರೇ ಅಧಿಕ

ಪ್ರಜಾವಾಣಿ ವಿಶೇಷ
Published 28 ಫೆಬ್ರುವರಿ 2024, 6:23 IST
Last Updated 28 ಫೆಬ್ರುವರಿ 2024, 6:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮೈಸೂರು: ದ್ವಿತೀಯ ಪಿಯು ಪರೀಕ್ಷೆ ಮಾರ್ಚ್‌ 1ರಿಂದ 22ರವರೆಗೆ ನಿಗದಿಯಾಗಿದ್ದು, ಜಿಲ್ಲೆಯ 49 ಕೇಂದ್ರಗಳಲ್ಲಿ ನಡೆಯಲಿದೆ.

1,332 ಖಾಸಗಿ ಹಾಗೂ 1,866 ಪುನರಾವರ್ತಿತರು ಸೇರಿ 31,628 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ 261 ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ADVERTISEMENT

2023ರಲ್ಲಿ ಶೇ 79.96ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ 13ನೇ ಸ್ಥಾನ ಪಡೆದಿದ್ದ ಜಿಲ್ಲೆಯನ್ನು ಈ ಬಾರಿ 10ರೊಳಗೆ ತರುವ ಗುರಿಯನ್ನು ಇಲಾಖೆ ಹೊಂದಿದೆ.

‘ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ, ಅವರ ಪೋಷಕರ ಜತೆಯೂ ಮಾತನಾಡುವಂತೆ ಶಿಕ್ಷಕರಿಗೆ ತಿಳಿಸಲಾಗಿದೆ. ಈ ಬಾರಿ ಗುರಿ ಮುಟ್ಟುವ ನಿರೀಕ್ಷೆಯಿದೆ. ಆಂತರಿಕ ಮೌಲ್ಯಮಾಪನ ಅಂಕಗಳು ವಿದ್ಯಾರ್ಥಿಗಳಿಗೆ ದೊರೆತಿದ್ದು ಫಲಿತಾಂಶ ಹೆಚ್ಚಿಸಲಿದೆ ’ ಎಂದು ಡಿಡಿಪಿಯು ಎಂ.ಮರಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 10 ಮಾರ್ಗಗಳನ್ನು ನಿಗದಿ ಮಾಡಲಾಗಿದ್ದು, ಜಿಲ್ಲಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲಾಗುತ್ತದೆ. ಎಲ್ಲವೂ ಜಿಲ್ಲಾಧಿಕಾರಿ ಮಾರ್ಗಸೂಚನೆಯಲ್ಲಿ ನಡೆಯುತ್ತಿದ್ದು, ಅತ್ಯಂತ ಸುರಕ್ಷಿತವಾಗಿ ಪರೀಕ್ಷೆ ನಡೆಯಲಿದೆ’ ಎಂದರು.

ಆತಂಕ ಬೇಡ: ನಿರಂತರವಾಗಿ ಓದಿನ ಬಗ್ಗೆ ಗಮನ ಇರಿಸಿಕೊಳ್ಳುವುದು ಮತ್ತು ಓದಿದ್ದನ್ನು ಮನನ ಮಾಡುವುದರಿಂದ ಯಶಸ್ಸು ಖಂಡಿತ. ಯಾವುದೇ ಅನುಮಾನಗಳಿದ್ದರೂ ಶಿಕ್ಷಕನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು. ಈ ಬಗ್ಗೆ ಶಿಕ್ಷಕರಿಗೂ ಸೂಚನೆ ನೀಡಿದ್ದೇನೆ. ಆತಂಕವಿಲ್ಲದೆ ಪರೀಕ್ಷೆ ಬರೆಯಬೇಕು’ ಎಂದು ಹೇಳಿದರು.

ವಿದ್ಯಾರ್ಥಿನಿಯರೇ ಅಧಿಕ: ಪರೀಕ್ಷೆ ಬರೆಯುತ್ತಿರುವವರಲ್ಲಿ 14,040 ವಿದ್ಯಾರ್ಥಿಗಳು ಹಾಗೂ 17,578 ವಿದ್ಯಾರ್ಥಿನಿಯರಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ ಕಲಾ ವಿಭಾಗದಲ್ಲಿ 6,967, ವಾಣಿಜ್ಯ ವಿಭಾಗದಲ್ಲಿ 10,679 ಹಾಗೂ ವಿಜ್ಞಾನ ವಿಭಾಗದಲ್ಲಿ 13,982 ಪರೀಕ್ಷೆ ಬರೆಯಲಿದ್ದಾರೆ.

‘ಆಹಾರ ನಿದ್ರೆಗೆ ಒತ್ತು ನೀಡಿ’

‘ಪರೀಕ್ಷೆ ಎಂದಾಕ್ಷಣ ಆತಂಕ ಬೇಡ ಗಡಿಬಿಡಿಯ ಊಟ ನಿದ್ದೆ ಕಡಿಮೆ ಮಾಡಲೇಬಾರದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಹೇಳಿದರು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ಬೇಸಿಗೆ ಕಾಲವಾದ್ದರಿಂದ ಹಣ್ಣು ತರಕಾರಿಗಳು ಹೆಚ್ಚು ಇರುವ ಸರಳ ಆಹಾರವನ್ನು ಸೇವಿಸುವುದು ಉತ್ತಮ. ಕಾದಾರಿದ ನೀರನ್ನು ಕುಡಿಯುವುದು ಒಳ್ಳೆಯದು. ಪರೀಕ್ಷೆ ಕಾರಣಕ್ಕೆ ದಿನನಿತ್ಯ ಜೀವನ ಶೈಲಿಯನ್ನು ಸಂಪೂರ್ಣ ಮಾರ್ಪಾಟು ಮಾಡುವುದು ಉತ್ತಮವಲ್ಲ’ ಎಂದರು.

ಜಿಲ್ಲೆಯನ್ನು ಟಾಪ್‌ 10ಗೆ ತರುವ ಗುರಿ ನಮ್ಮದು. ಉತ್ತಮ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.
–ಎಂ.ಮರಿಸ್ವಾಮಿ, ಡಿಡಿಪಿಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.