ಹುಣಸೂರು: 'ಪ್ರತಿಯೊಂದು ಸಮುದಾಯವನ್ನು ಗುರುತಿಸುವುದು ಅವರ ಮಾತೃಭಾಷೆ. ಆದಿವಾಸಿ ಗಿರಿಜನರ ಮಾತೃ ಭಾಷೆ ಜೇನುನುಡಿ ಉಳಿಸಬೇಕಾದ ಅನಿವಾರ್ಯತೆ ಎದುರಾಗಿದೆ' ಎಂದು ಮೈಸೂರಿನ ಟಿ.ಆರ್.ಐ. ನಿರ್ದೇಶಕ ಡಾ.ಶ್ರೀನಿವಾಸ್ ಹೇಳಿದರು.
ನಗರದ ಡೀಡ್ ಸಂಸ್ಥೆಯಲ್ಲಿ ವಿವಿಧ ಬುಡಕಟ್ಟು ಸಮುದಾಯಗಳ ತಾಯಿ ಭಾಷೆಗಳ ಸಂರಕ್ಷಣೆ ಕುರಿತ ವಿಚಾರ ಮಂಥನ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಗಿಂತಲೂ ಪ್ರಾಚೀನ ಭಾಷೆಗಳಲ್ಲಿ ಒಂದಾದ ಜೇನುನುಡಿ ಸಂರಕ್ಷಿಸಿ ಅಕ್ಷರದ ರೂಪದಲ್ಲಿ ಹಿಡಿದಿಡಬೇಕಾದ ಪರಿಸ್ಥಿತಿ ನಾಗರಿಕ ಸಮಾಜದ ಹೊಣೆಯಾಗಿದೆ ಎಂದರು.
ಮೈಸೂರಿನ ಐ.ಆರ್.ಐ ವತಿಯಿಂದ 1 ರಿಂದ 3 ನೇ ತರಗತಿವರಗೆ ಗಿರಿಜನ ಸಮುದಾಯದ ಮಕ್ಕಳ ಕಲಿಕೆಗೆ ಜೇನುನುಡಿ ಭಾಷೆಯಲ್ಲೇ ಪಠ್ಯಪುಸ್ತಕ ಹೊರ ತರುವ ಸಿದ್ದತೆ ನಡೆಸಿದೆ. ಈ ಪ್ರಯತ್ನದಿಂದ ಸಮುದಾಯದ ಮಕ್ಕಳು ಮಾತೃಭಾಷೆಯಲ್ಲಿ ಕಲಿಕೆಯಿಂದ ಓದಿನತ್ತ ಆಸಕ್ತಿವಹಿಸುತ್ತಾರೆ. ಎರಡನೆಯದಾಗಿ ಒಂದು ಭಾಷೆಯನ್ನು ಭವಿಷ್ಯದ ಕುಡಿಗಳಿಗೆ ಪರಿಚಯಿಸಿ ಸಂರಕ್ಷಿಸಿದಂತಾಗಲಿದೆ ಎಂದರು.
ಜೇನುನುಡಿ ಭಾಷೆಯಲ್ಲಿ ಪಠ್ಯ ಹೊರತರಲು ಆದಿವಾಸಿ ಗಿರಿಜನ ಸಮುದಾಯದ ಹಿರಿಯರು ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಪದಬಳಕೆ ಮತ್ತು ಅದರ ಅರ್ಥ ತಿಳಿಸುವ ಕೆಲಸಕ್ಕೆ ಕೈ ಜೋಡಿಸಿದಲ್ಲಿ ಮುಂದಿನ ದಿನದಲ್ಲಿ ಆಶ್ರಮ ಶಾಲೆಗಳಲ್ಲಿ ಗಿರಿಜನ ಮಕ್ಕಳು ಅವರ ಮಾತೃ ಭಾಷೆಯಲ್ಲೇ ಕಲಿಕೆ ಆರಂಭಿಸಬಹುದು. ಗಿರಿಜನ ಮಕ್ಕಳ ಕಲಿಕೆಗೆ ಅದೇ ಸಮುದಾಯದ ಶಿಕ್ಷಕ ವರ್ಗವನ್ನು ನಿಯೋಜಿಸುವ ಕೆಲಸವೂ ಆಗಬೇಕು ಎಂದರು.
ನಾಗರಹೊಳೆ ಗದ್ದೆ ಹಾಡಿ ನಿವಾಸಿ ಜೆ.ಕೆ.ತಿಮ್ಮ ಜೇನುನುಡಿ, ಬೆಟ್ಟಕುರುಬ ಸಮುದಾಯದ ಜೆ.ಕೆ.ಚಿಕ್ಕಬೊಮ್ಮ, ಪಂಜರ ಯರವ ಸಮುದಾಯದ ಜೆ.ಕೆ. ಉದಯ, ಇರುಳಿಗ ಸಮುದಾಯದ ಅರ್ಪಟ್ಟಯ್ಯ ತಮ್ಮ ಸಮುದಾಯದ ಭಾಷೆ ಕುರಿತು ಮಾತನಾಡಿದರು.
ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್ ಮಾತನಾಡಿ, 2006 ರಲ್ಲಿ ವಿಶೇಷ ಶಿಕ್ಷಣ ಕಾರ್ಯಕ್ರಮದಲ್ಲಿ ಜೇನುನುಡಿ ಭಾಷೆಯಲ್ಲಿ ಹಲವು ಪ್ರಯೋಗ ನಡೆಸಿದೆ ಎಂದರು. ವೇದಿಕೆಯಲ್ಲಿ ಪ್ರೊ.ಸಿದ್ದೇಗೌಡ, ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಹರಿಹರ ಆನಂದಸ್ವಾಮಿ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು, ಐಟಿಡಿಪಿ ಅಧಿಕಾರಿ ಬಸವರಾಜ್, ಎ.ಪ್ರಕಾಶ್ , ವಿವಿಧ ಹಾಡಿಗಳ ಗಿರಿಜನ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.