ADVERTISEMENT

ಮುಡಾ ಹಗರಣ | ಸಿದ್ದರಾಮಯ್ಯಗೆ ಸಮನ್ಸ್ ನೀಡಲು ಇ.ಡಿ ಸಿದ್ಧತೆ: ಎಂ.ಲಕ್ಷ್ಮಣ ಆರೋಪ

ಚುನಾವಣೆ ಪ್ರಚಾರ ತಡೆಯಲು ವಿರೋಧ ಪಕ್ಷಗಳಿಂದ ಸಂಚು: ಎಂ.ಲಕ್ಷ್ಮಣ ಆರೋಪ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 7:09 IST
Last Updated 24 ಅಕ್ಟೋಬರ್ 2024, 7:09 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ‘ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ನಡೆಯುವ ಚುನಾವಣೆ ಹಾಗೂ ವಿವಿಧ ಉಪ ಚುನಾವಣೆಗಳ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳದಂತೆ ಬಿಜೆಪಿ, ಜೆಡಿಎಸ್ ಪಿತೂರಿ ನಡೆಸಿದ್ದು, ಜಾರಿ ನಿರ್ದೇಶನಾಲಯದ (ಇಡಿ) ಮೂಲಕ ನವೆಂಬರ್ 7 ಅಥವಾ 8ರಂದು ಸಮನ್ಸ್ ನೀಡಲು ಸಿದ್ಧತೆ ನಡೆಸಿವೆ’ ಎಂದು ಕೆಪಿಸಿಸಿ ನಗರ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮುಡಾ ನಿವೇಶನ ಹಂಚಿಕೆ ಪ್ರಕರಣವನ್ನು ಲೋಕಾಯುಕ್ತ ತನಿಖೆ ಮಾಡುತ್ತಿರುವಾಗ, ಇ.ಡಿ ಪರ್ಯಾಯ ತನಿಖೆ ಮಾಡುವುದು ಕಾನೂನು ಸಮ್ಮತವೇ? ಮಿಲಿಟರಿ ರೀತಿ ಒಳನುಗ್ಗಿ, ಗನ್ ಪಾಯಿಂಟ್‌ನಲ್ಲಿ ಸಿಬ್ಬಂದಿಯನ್ನು ಬೆದರಿಸಿ, ರಾತ್ರೋರಾತ್ರಿ ಕಡತಗಳನ್ನು ಹೊತ್ತೊಯ್ದಿದ್ದಾರೆ. ಈ ಅಕ್ರಮ ತನಿಖಾ ನಡೆಯನ್ನು ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ ಎಂದರು.

‘ಬಿಜೆಪಿ ಮತ್ತು ಜೆಡಿಎಸ್ ನಿರ್ದೇಶನದಂತೆ ಇಡಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಸಿದ್ದರಾಮಯ್ಯ ಅವರನ್ನು ಸಿಕ್ಕಿಸುವುದಕ್ಕಾಗಿ ಸಾಕ್ಷ್ಯಗಳನ್ನು ಸೃಷ್ಟಿಸುವ ಕೆಲಸ ನಡೆದಿದೆ. ಅವರ ವರ್ಚಸ್ಸನ್ನು ಹಾಳು ಮಾಡುವುದು, ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ಪ್ರಚಾರ ಸಿಗದಂತೆ ನೋಡಿಕೊಳ್ಳುವುದೇ ಉದ್ದೇಶ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮುಡಾದಲ್ಲಿ 5 ಸಾವಿರ ನಿವೇಶನಗಳ ₹8 ಸಾವಿರ ಕೋಟಿ ಹಗರಣವನ್ನು ಹೊರತಂದೆ, ಭ್ರಷ್ಟಾಚಾರ ತೊಳೆದುಬಿಟ್ಟೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸ್ಟೇಟಸ್ ಹಾಕಿಕೊಳ್ಳುವ ಕೆ.ಆರ್.ಕ್ಷೇತ್ರದ ಬಿಜೆಪಿ ಮುಖಂಡ, ಸಿದ್ದರಾಮಯ್ಯ ಪತ್ನಿ ನಿವೇಶನಗಳನ್ನು ವಾಪಸ್ ಮಾಡಿದ ಬಳಿಕ ಉಳಿದ ಸೈಟ್‌ಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಪರೋಕ್ಷವಾಗಿ ಶಾಸಕ ಟಿ.ಎಸ್.ಶ್ರೀವತ್ಸ ಅವರನ್ನು ಟೀಕಿಸಿದರು. ಕಾಂಗ್ರೆಸ್ ಮುಖಂಡ ಶಿವಣ್ಣ ಮಾತನಾಡಿದರು.

ಸಿದ್ದರಾಮಯ್ಯ ₹350 ಕೋಟಿ‌ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನುವ ವಿಧಾನಪರಿಷತ್ ಸದಸ್ಯ ಎ.ಎಚ್‌.ವಿಶ್ವನಾಥ್‌ ಇ.ಡಿ ಲೋಕಾಯುಕ್ತಕ್ಕೆ ದೂರು ಕೊಡಲಿ
ಎಂ.ಲಕ್ಷ್ಮಣ ಕೆಪಿಸಿಸಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.