ಮೈಸೂರು: ಈ ಬಾರಿಯ ಫಲಪ್ರದ ಮುಂಗಾರು ಕೃಷಿಕರ ನಿರೀಕ್ಷೆ ಹೆಚ್ಚಿಸಿದ್ದು, ಸಸಿ ಮಡಿ ಮಾಡುವ ಮೂಲಕ ಭತ್ತದ ಕೃಷಿಯತ್ತ ರೈತರು ಮುಖ ಮಾಡಿದ್ದಾರೆ.
ಕಳೆದ ವರ್ಷ ಮುಂಗಾರು ಕೈ ಕೊಟ್ಟ ಕಾರಣಕ್ಕೆ ಭತ್ತದ ಕೃಷಿ ಕಳೆಗುಂದಿತ್ತು. ಪ್ರಸ್ತುತ ಕಬಿನಿ ಜಲಾಶಯ ಈಗಾಗಲೇ ಭರ್ತಿ ಆಗಿದ್ದು, ಕೆಆರ್‌ಎಸ್ ಸಹ ಶೀಘ್ರದಲ್ಲೇ ತುಂಬುವ ನಿರೀಕ್ಷೆ ಇದೆ. ನಾಲೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿದಿದ್ದು, ಈ ಬಾರಿ ಬೆಳೆಗಳಿಗೆ ಪೂರ್ತಿ ಕಾಲುವೆ ನೀರು ಸಿಗುವುದು ಖಚಿತವಾದ ಕಾರಣ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ.
ಜಿಲ್ಲೆಯಲ್ಲಿ ಈಗಾಗಲೇ ನಂಜನಗೂಡು, ಕೆ.ಆರ್.ನಗರ, ತಿ.ನರಸೀಪುರ, ಹಾಗೂ ಮೈಸೂರು ತಾಲ್ಲೂಕಿನ ಭಾಗದಲ್ಲಿ ಸಸಿ ಮಡಿ ಕಾರ್ಯ ಆರಂಭ ಆಗಿದೆ. ಕಾಲುವೆಗೆ ನೀರು ಸಿಕ್ಕ ಕೂಡಲೇ ನಾಟಿ ಕಾರ್ಯವೂ ಆರಂಭ ಆಗಲಿದೆ.
ಜುಲೈನಲ್ಲಿ ಸರಾಸರಿ 121.7 ಮಿ.ಮೀ ವಾಡಿಕೆ ಮಳೆ ನಿರೀಕ್ಷೆ ಇದೆ. ಈವರೆಗೆ 82.9 ಮಿ.ಮೀ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ, ಮುಸುಕಿನ ಜೋಳ, ರಾಗಿ ಪ್ರಮುಖ ಬೆಳೆಯಾಗಿದೆ. 89,200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 41,100 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 77,500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿದೆ.
‘ನಾಟಿ ಪೂರ್ವದಲ್ಲಿ ಭತ್ತದ ಗದ್ದೆಯಲ್ಲಿ ಕೆಸರು ನಿಂತಿರುವ ಹಾಗೆ ಮಳೆ ಆಗಿರಬೇಕು. ನಾಟಿ ನಂತರವೂ ಉತ್ತಮ ಮಳೆಯಾಗಬೇಕು ಎಂಬುದು ರೈತರ ನಿರೀಕ್ಷೆ. ಈ ಬಾರಿ ಅಂತಹ ವಾತಾವರಣ ಇದೆ. ಉತ್ತಮ ತಳಿ ಬೀಜ ಖರೀದಿಸಿ ಭೂಮಿ ಉಳುಮೆ ಮಾಡಿ ಅಗೆ ಸಿದ್ಧಪಡಿಸಿಕೊಂಡು ಬೀಜ ಹಾಕಿ ಮೊಳಕೆ ಭರಿಸಲಾಗುತ್ತದೆ. 5–6 ದಿನ ಮೊಳಕೆ ಕಟ್ಟಿಸಿ ನಂತರ ಗದ್ದೆಯಲ್ಲಿ ಮಡಿ ಮಾಡಲಾಗುತ್ತದೆ. 18ರಿಂದ 20ದಿನಗಳ ನಂತರ ಭತ್ತದ ಪೈರುಗಳು ನಾಟಿ ಮಾಡಲು ಸಿದ್ಧವಾಗುತ್ತವೆ. ನಮ್ಮ ಭಾಗದಲ್ಲಿ ಕೃಷಿ ಚುಟುವಟಿಕೆ ಬಹುಪಾಲು ಬಿರುಸುಗೊಂಡಿದೆ’ ಎನ್ನುತ್ತಾರೆ ಕೆ.ಆರ್.ನಗರ ತಾಲ್ಲೂಕಿನ ಕೃಷಿಕ ಅರ್ಜುನಹಳ್ಳಿ ರಾಮ್ ಪ್ರಸಾದ್.
ಭತ್ತವನ್ನು ಹೊರತುಪಡಿಸಿದರೆ, ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬೆಳೆ ಮುಸುಕಿನ ಜೋಳ ಹಾಗೂ ರಾಗಿ. ಈ ಬೆಳೆಗೆ ಅಗತ್ಯವಿರುವ ಹದವಾದ ಮಳೆಯಾಗಿದ್ದು, ಉತ್ತಮ ಫಸಲು ಬರುವ ನಿರೀಕ್ಷೆ ಇದೆ.
‘ಜಿಲ್ಲೆಯಲ್ಲಿ ಸದ್ಯ ನಿರಂತರವಾಗಿ ಮಳೆಯಾಗುತ್ತಿದೆ. ನಾಲೆಗಳ ಮೂಲಕ ಇದೀಗ ನೀರು ಹರಿಸಲಾಗಿದೆ. ಈ ತಿಂಗಳಾಂತ್ಯಕ್ಕೆ ಸಿದ್ಧತೆ ಪೂರ್ಣಗೊಳ್ಳಲಿದ್ದು ಆಗಸ್ಟ್–ಸೆಪ್ಟೆಂಬರ್‌ವರೆಗೂ ನಾಟಿ ಕಾರ್ಯ ನಡೆಯಲಿದೆ. ಮಳೆ ಹೀಗೆ ಮುಂದುವರಿದರೆ ಒಟ್ಟು ಗುರಿಯ ಶೇ 100ರಷ್ಟು ಪ್ರದೇಶದಲ್ಲಿ ಭತ್ತ ಬಿತ್ತನೆ ಆಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್.
ಕೆ.ಆರ್.ನಗರ ತಾಲ್ಲೂಕು ಭತ್ತದ ಕಣಜವಾಗಿದೆ. ನಾನು 8 ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದು ಸಸಿ ಮಡಿಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿರುವೆ.–ರಾಮ್ ಪ್ರಸಾದ್, ಕೃಷಿಕ ಅರ್ಜುನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.