ADVERTISEMENT

ಮುಡಾ ಅಕ್ರಮ: ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:17 IST
Last Updated 4 ಜುಲೈ 2024, 14:17 IST

ಮೈಸೂರು: ‘ಮುಡಾದಲ್ಲಿ ಶೇ 50:50 ಅನುಪಾತದ ನೆಪದಲ್ಲಿ ನಿಜವಾಗಿ ಭೂಮಿ ಕಳೆದುಕೊಂಡವರ ಬದಲಿಗೆ ಜಿಪಿಎ ಹೊಂದಿರುವವರಿಗೆ, ರಿಯಲ್ ಎಸ್ಟೇಟ್ ಕುಳಗಳಿಗೆ, ಭೂಮಿಯನ್ನೇ ನೀಡದವರಿಗೆ ಕಿಕ್ ಬ್ಯಾಕ್‌ ಪಡೆದು ಸಾವಿರಾರು ನಿವೇಶನಗಳನ್ನು ವಿತರಿಸಲಾಗಿದೆ. ಇದಕ್ಕೆ ಕಾರಣವಾದ ಅಧಿಕಾರಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಎನ್. ಲಿಂಗರಾಜೇಗೌಡ, ‘ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಬದಲು ಕೇವಲ ವರ್ಗಾವಣೆ ಮಾಡಿರುವುದು ಸರಿಯಲ್ಲ’ ಎಂದರು.

‘ಪವರ್ ಆಫ್ ಅಟಾರ್ನಿ ಹೊಂದಿರುವ ರಿಯಲ್ ಎಸ್ಟೇಟ್‌ದಾರನಿಗೂ ನೂರು ನಿವೇಶನ ವಿತರಿಸಿರುವ ಉದಾಹರಣೆ ಇದೆ. ಇದೇ ರೀತಿ ಹಲವರಿಗೆ 90ಕ್ಕೂ ಹೆಚ್ಚಿನ ನಿವೇಶನ ವಿತರಿಸಲಾಗಿದೆ. ಒಬ್ಬರು ಮುಡಾಗೆ ಭೂಮಿಯನ್ನೇ ನೀಡಿಲ್ಲ. ಆದರೂ ಭೂಮಿ ನೀಡಿದ್ದಾರೆಂದು ದಾಖಲೆ ತೋರಿಸಿ ಅವರಿಗೆ ನಿವೇಶನ ಕೊಡಲಾಗಿದೆ. ಜಮೀನುಗಳನ್ನು ನೀಡಿರುವ ಮೃತ ಮಾಲೀಕರಿಗೆ ವಾರಸುದಾರರೆಂದು ಇತರರನ್ನು ಅಕ್ರಮ ದಾಖಲೆಗಳ ಮೂಲಕ ತೋರಿಸಿ ಅವರ ಹೆಸರಿಗೆ ನಿವೇಶನ ವಿತರಿಸಲಾಗಿದೆ. ಈ ರೀತಿಯ ಅಕ್ರಮಗಳಲ್ಲಿ ಮುಡಾದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ’ ಎಂದು ದೂರಿದರು.

ADVERTISEMENT

ಕಾನೂನು ಸಲಹೆಗಾರ ರವಿಕುಮಾರ್ ಮಾತನಾಡಿ, ‘ಮುಡಾಕ್ಕೆ ಸಾವಿರಾರು ಮಂದಿ ಅರ್ಜಿ ಹಾಕಿ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ಬೆಲೆ ಬಾಳುವ ನಿವೇಶನಗಳನ್ನು ಅಕ್ರಮವಾಗಿ ವಿತರಿಸಲಾಗಿದೆ. ಮುಖ್ಯಮಂತ್ರಿ ಪತ್ನಿಗೆ ನಿವೇಶನ ಹಂಚಿಕೆಯಲ್ಲೂ ನಿಯಮಗಳನ್ನು ಉಲ್ಲಂಘಿಸಲಾಗಿದೆ’ ಎಂದು ಆರೋಪಿಸಿದರು.

ಪಕ್ಷದ ಮುಖಂಡರಾದ ಕೆ.ಎಸ್. ಸೋಮಸುಂದರ್, ನಾಗೇಂದ್ರ, ಸುಂದರ್, ಪ್ರೇಮ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.