ADVERTISEMENT

ರೋಗ ನಿಯಂತ್ರಣಕ್ಕೆ ಮುಂಜಾಗ್ರತೆಯೇ ಮದ್ದು: ಉಮಾಶಂಕರ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:07 IST
Last Updated 7 ಜುಲೈ 2024, 14:07 IST
ನಾಗಮಂಗಲ ತಾಲ್ಲೂಕಿನ ಚೀಣ್ಯ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಡೆಂಗಿ ಜ್ವರ ಹರಡುವ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶಪಡಿಸುವ ಮತ್ತು ಜಾಗೃತಿ ಜಾಥಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ನಾಗಮಂಗಲ ತಾಲ್ಲೂಕಿನ ಚೀಣ್ಯ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಡೆಂಗಿ ಜ್ವರ ಹರಡುವ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶಪಡಿಸುವ ಮತ್ತು ಜಾಗೃತಿ ಜಾಥಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.   

ನಾಗಮಂಗಲ: ನಮ್ಮ ಸುತ್ತಮುತ್ತಲ ಪರಿಸರದ ಸ್ವಚ್ಛತೆ ಕಾಪಾಡಿಕೊಂಡು ಮುಂಜಾಗ್ರತೆಯಿಂದ ಇರುವುದೇ ರೋಗ ನಿಯಂತ್ರಣಕ್ಕೆ ಮದ್ದು ಎಂದು ಚೀಣ್ಯ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಉಮಾಶಂಕರ್ ಕಿವಿಮಾತು ಹೇಳಿದರು.

ತಾಲ್ಲೂಕಿನ ಹೊಣಕೆರೆ ಹೋಬಳಿಯ ಚೀಣ್ಯ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ ಮತ್ತು ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶಪಡಿಸುವ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮದಲ್ಲಿ ನೀರನ್ನು ಸಂಗ್ರಹಿಸುವ ತೊಟ್ಟಿಗಳು ಸೇರಿದಂತೆ ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡದಂತೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಎಚ್ಚರವಹಿಸಬೇಕು ಎಂದರು.

ADVERTISEMENT

ಶಿಕ್ಷಕ ಪಿ.ತೇಜಸ್ವಿನಿ ಮಾತನಾಡಿ, ‘ಡೆಂಗಿ, ಚಿಕುನ್‌ ಗುನ್ಯಾ ಕಾಣಿಸಿಕೊಂಡಾಗ ಆತಂಕಪಡುವ ಅಗತ್ಯವಿಲ್ಲ. ತಕ್ಷಣವೇ ವೈದ್ಯರ ಬಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ದೃಢಪಟ್ಟರೆ ಸೂಕ್ತ ಚಿಕಿತ್ಸೆ ಪಡೆದು ಔಷಧ ತೆಗೆದುಕೊಳ್ಳುವ ಮೂಲಕ ರೋಗವನ್ನು ಗುಣಪಡಿಸಿಕೊಳ್ಳಬಹುದು’ ಎಂದು ಹೇಳಿದರು.

‘ರೋಗವು ಸೊಳ್ಳೆಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಜನರು ಸ್ವಚ್ಛತೆ ಕಾಪಾಡಿಕೊಂಡು ಸೊಳ್ಳೆಗಳು ಸಂತಾನೋತ್ಪತ್ತಿ ಮಾಡದಂತೆ ಎಚ್ಚರ ವಹಿಸಬೇಕು. ಜೊತೆಗೆ ಆರೋಗ್ಯದ ಕುರಿತು ಮುಂಜಾಗೃತೆ ವಹಿಸುವುದು ಅತ್ಯಂತ ಮುಖ್ಯ’ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಗ್ರಾಮಕ್ಕೆ ತೆರಳಿ ಜಾಗೃತಿ ಜಾಥಾ ನಡೆಸಿ ಡೆಂಗಿ ಮತ್ತು ಚಿಕೂನ್ ಗುನ್ಯಾ ಕುರಿತು ಜಾಗೃತಿ ಮೂಡಿಸಿದರು. ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಘೋಷಣೆ ಕೂಗಿದರು.

ಶಿಕ್ಷಕರಾದ ಬಸವೇಗೌಡ, ಬಸವರಾಜು, ಶ್ರೀಧರ್, ಪ್ರಕಾಶ್, ಶೃತಿ, ರಿಹಾನಾ, ಶಾಜಿಯಾ, ರುದ್ರೇಶ್ ಮತ್ತು ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.