ಮೈಸೂರು: ‘ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ವಸ್ತ್ರಸಂಹಿತೆ ಇಲ್ಲವೆಂದು ಸರ್ಕಾರ ಹೇಳಿದಾಗ ಯಾರೂ ಪ್ರಶ್ನಿಸಲಿಲ್ಲವೇಕೆ? ಹೇಗೆ ಬೇಕಾದರೂ ಬಟ್ಟೆ ಧರಿಸಿಕೊಂಡು ದೇವಸ್ಥಾನಕ್ಕೆ ಬರುವುದಾದರೆ ಧಾರ್ಮಿಕ ಸ್ವಾತಂತ್ರ್ಯ ಉಳಿಯುವುದಾದರೂ ಹೇಗೆ’ ಎಂದು ಚಿಂತಕ ಹಿರೇಮಗಳೂರು ಕಣ್ಣನ್ ಕೇಳಿದರು.
ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ವತಿಯಿಂದ ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ‘ಹಿಂದೂ ದೇವಾಲಯ ಭಕ್ತ ಮಂಡಳಿ’ ಸದಸ್ಯರ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.
‘ದೇವಾಲಯ ಸಾರ್ವಜನಿಕರ ಸ್ವತ್ತೇ ಹೊರತು ಸರ್ಕಾರದಲ್ಲ. ಅವು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸಲು ಪೂರ್ವಿಕರು ಬಿಟ್ಟು ಹೋದ ಆಸ್ತಿಗಳಾಗಿವೆ. ಅವುಗಳನ್ನು ನಿರ್ವಹಣೆಗಾಗಿ ಸರ್ಕಾರಕ್ಕೆ ನೀಡಿದ್ದೇವೆಯಷ್ಟೆ. ಅವು ಸಂಸ್ಕಾರದ ಕೇಂದ್ರಗಳು ಎಂಬುದನ್ನು ನಾವು ಮರೆಯಬಾರದು’ ಎಂದು ಹೇಳಿದರು.
‘ನಮ್ಮ ಸಂಸ್ಕೃತಿ ಮತ್ತು ಜನರ ಸಂಸ್ಕಾರದ ಉಳಿವಿಗೆ ದೇವಸ್ಥಾನದ ಅರ್ಚಕ ವೃತ್ತಿಯನ್ನು ಪುರುಷರಿಗೆ ಮಾತ್ರವೇ ಮೀಸಲಿಡಬೇಕು. ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ನಿರ್ಧಾರಗಳೂ ಸೂಕ್ತವಲ್ಲ’ ಎಂದರು.
‘ಮಠಗಳು ಒಂದು ಸಮುದಾಯ ಮತ್ತು ಜಾತಿಯ ಪ್ರತಿನಿಧಿಯಾಗುತ್ತವೆ. ಆದರೆ, ದೇವಾಲಯಗಳು ಇಡೀ ಸಮಾಜದ ಪ್ರತಿನಿಧಿಯಾಗುತ್ತವೆ. ಅದು ಜಾತ್ಯತೀತವಾಗಿರಬೇಕು. ಸಂಪ್ರದಾಯ– ಸಂಪ್ರದಾಯಗಳ ನಡುವೆ ಜಗಳ ಮಾಡಬಾರದು. ಪ್ರತಿ ದೇವಾಲಯವೂ ಇರುವುದು ಮಾನವನ ಉದ್ಧಾರಕ್ಕಾಗಿಯೇ. ನಾನು ಕನ್ನಡದಲ್ಲಿ ಮಂತ್ರ ಹೇಳುತ್ತೇನೆ ಎಂದು ಕೆಲ ಸಂಪ್ರದಾಯಸ್ಥರಿಗೆ ಸಿಟ್ಟಿದೆ. ನಾವು ಹೇಳುವ ಮಂತ್ರ ಎಲ್ಲರಿಗೂ ಅರ್ಥವಾದರೆ ಮಾತ್ರ ಒಳಗೊಳ್ಳುವಿಕೆ ಸಾಧ್ಯ. ದೇವಸ್ಥಾನವು ಧರ್ಮದರ್ಶಿಗಳ ಪ್ರತಿಷ್ಠೆಗೆ ವೇದಿಕೆಯಾಗಬಾರದು’ ಎಂದು ನುಡಿದರು.
ಸಮಿತಿಯ ಸಂಯೋಜಕ ಮನೋಹರ ಮಠದ ಮಾತನಾಡಿ, ‘ರಾಜ್ಯದಲ್ಲಿ 33,563 ಮುಜರಾಯಿ ದೇವಸ್ಥಾನ ಹಾಗೂ 2.5 ಲಕ್ಷ ಖಾಸಗಿ ದೇವಸ್ಥಾನಗಳಿವೆ. ಈ ಎಲ್ಲವೂ ಸಮಾಜದ ಸುರಕ್ಷೆ, ಸಂಸ್ಕಾರ, ಧಾರ್ಮಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಸಮಿತಿಯ ಉದ್ದೇಶ. ಇವುಗಳ ಕಾರ್ಯಾಚರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.