ADVERTISEMENT

ಖಾಸಗಿ ಬಡಾವಣೆ ನಗರಸಭೆ, ಪ.ಪಂಚಾಯಿತಿಗೆ ಹಸ್ತಾಂತರ: ಕೆ. ‌ಮರೀಗೌಡ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 7:38 IST
Last Updated 22 ಜೂನ್ 2024, 7:38 IST
ಮುಡಾ ಅಧ್ಯಕ್ಷ ಐಶ್ವರ್ಯ ಬಡಾವಣೆಯಲ್ಲಿ ಪರಿಶೀಲನೆ ನಡೆಸುವ ವೇಳೆ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರೊಂದಿಗೆ ಚರ್ಚಿಸಿದರು
ಮುಡಾ ಅಧ್ಯಕ್ಷ ಐಶ್ವರ್ಯ ಬಡಾವಣೆಯಲ್ಲಿ ಪರಿಶೀಲನೆ ನಡೆಸುವ ವೇಳೆ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರೊಂದಿಗೆ ಚರ್ಚಿಸಿದರು   

ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರವಾಗಿರುವ ಖಾಸಗಿ ಬಡಾವಣೆಗಳನ್ನು ಆಯಾ ವ್ಯಾಪ್ತಿಯ ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗೆ ವಹಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಡಾ ಅಧ್ಯಕ್ಷ ಕೆ.ಮರೀಗೌಡ ತಿಳಿಸಿದರು.

ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‍ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಸೋಮನಾಥನಗರ, ಆರ್.ಟಿ. ನಗರ, ಸಿದ್ದರಾಮಯ್ಯ ಬಡಾವಣೆ, ಐಶ್ವರ್ಯ ನಗರ, ಎಸ್.ಬಿ.ಎಂ ಲೇಔಟ್, ಚಾಮುಂಡಿಬೆಟ್ಟದ ಬಳಿ ಇರುವ ವಿದ್ಯುತ್ ಚಿತಾಗಾರವನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಸೋಮನಾಥನಗರ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಸೆಪ್ಟಿಕ್ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಕೇರ್ಗಳ್ಳಿ ಕೆರೆಯಿಂದ ಬರುವ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಲಿಂಗಾಬುದ್ದಿಪಾಳ್ಯದ ಸಿದ್ದರಾಮಯ್ಯ ಬಡಾವಣೆಗೆ ಒಳಚರಂಡಿ, ಕುಡಿಯುವ ನೀರು ಒದಗಿಸುವುದರೊಂದಿಗೆ ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಆರ್.ಟಿ ನಗರದಲ್ಲಿ ನಿಜವಾದ ಭೂಮಾಲೀಕರಿಗೆ ತಲುಪಬೇಕಾದ ಹಣ ತಲುಪಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

‘ಎಸ್.ಬಿ.ಎಂ ಲೇಔಟ್‌ನ 36 ಮನೆಗಳಿಗೆ ಸಂಪರ್ಕಿಸಲು ರಸ್ತೆ ಇಲ್ಲದೇ ತೊಂದರೆಯಾಗಿದೆ ಎಂದು ಜನಸ್ಪಂದನ ಕಾರ್ಯಕ್ರಮದಲ್ಲಿ ದೂರು ಬಂದಿದೆ. ಕಾಂಪೌಂಡ್ ಹಾಕಲು ಮುಂದಾಗಿರುವ ವ್ಯಕ್ತಿಗೆ ನೋಟಿಸ್ ನೀಡಿ, ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ, ಮುಡಾ ಎಸ್‌ಇ ಧರಣೇಂದ್ರ, ಕಾರ್ಯದರ್ಶಿ ಶೇಖರ್, ಇಇ ನಾಗೇಶ್, ತಹಶೀಲ್ದಾರ್ ಮೋಹನ ಕುಮಾರಿ, ಎಇಇ ಸಮೀನ, ಮೀನಾಕ್ಷಿ, ಸಹಾಯಕ ನಿರ್ದೇಶಕರಾದ ರೂಪಾ, ಪ್ರಶಾಂತ್, ಆಪ್ತ ಸಹಾಯಕ ಗಂಗಾಧರ್, ಮುಖಂಡರಾದ ಜಿ.ವಿ.ಸೀತಾರಾಂ, ಬಿ.ರವಿ, ಪ್ರಕಾಶ್, ಜವರೇಗೌಡ, ಲಕ್ಷ್ಮಯ್ಯ, ದೇವಯ್ಯ, ಬಂಗಾರಪ್ಪ, ಮಹದೇವ್, ಬಡಗಲಹುಂಡಿ ರವಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.