ADVERTISEMENT

ಹುಣಸೂರು: 50ರಷ್ಟು ಕಾಮಾಗಾರಿ ಪೂರ್ಣಕ್ಕೆ ತಿಂಗಳ ಗಡುವು

ನಗರೋತ್ಥಾನ ಯೋಜನೆ ಸಂಬಂಧ ಪ್ರಗತಿ ಪರಿಶೀಲನಾ ಸಭೆ, \ಗುತ್ತಿಗೆದಾರ ಪ್ರತಿನಿಧಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 14:00 IST
Last Updated 17 ಜೂನ್ 2024, 14:00 IST
ಹುಣಸೂರು ನಗರಸಭೆಯಲ್ಲಿ ಶಾಸಕ ಹರೀಶ್ ಗೌಡ ಸೋಮವಾರ ನಗರೋತ್ಥಾನ ಯೋಜನೆ ಕಾಮಗಾರಿ ವಿಳಂಬ ಕುರಿತು ಗುತ್ತಿಗೆದಾರ ಮತ್ತು ನಗರಸಭೆ ಸದಸ್ಯರೊಂದಿಗೆ ಸಭೆ ನಡೆಸಿ ಅಧಿಕಾರಿಯಿಂದ ಮಾಹಿತಿ ಪಡೆದರು
ಹುಣಸೂರು ನಗರಸಭೆಯಲ್ಲಿ ಶಾಸಕ ಹರೀಶ್ ಗೌಡ ಸೋಮವಾರ ನಗರೋತ್ಥಾನ ಯೋಜನೆ ಕಾಮಗಾರಿ ವಿಳಂಬ ಕುರಿತು ಗುತ್ತಿಗೆದಾರ ಮತ್ತು ನಗರಸಭೆ ಸದಸ್ಯರೊಂದಿಗೆ ಸಭೆ ನಡೆಸಿ ಅಧಿಕಾರಿಯಿಂದ ಮಾಹಿತಿ ಪಡೆದರು   

ಹುಣಸೂರು: ‘ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಒಂದು ತಿಂಗಳೊಳಗಾಗಿ ಕನಿಷ್ಠ 50ರಷ್ಟು ಕಾಮಗಾರಿ ಪೂರೈಸಬೇಕು. ಇಲ್ಲವಾದಲ್ಲಿ ಬದಲಾವಣೆಗೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡುತ್ತೇನೆ’ ಎಂದು ಶಾಸಕ ಹರೀಶ್ ಗೌಡ ಗುತ್ತಿಗೆದಾರ ಪ್ರತಿನಿಧಿಗೆ ತರಾಟೆಗೆ ತೆಗೆದುಕೊಂಡರು.

ನಗರಸಭೆಯಲ್ಲಿ ಸೋಮವಾರ ನಗರಸಭೆ ಸದಸ್ಯರೊಳಗೊಂಡಂತೆ ಗುತ್ತಿಗೆದಾರನ ಸಮ್ಮುಖದಲ್ಲಿ ಸಭೆ ನಡೆಸಿ ನಗರೋತ್ಥಾನ ಕಾಮಗಾರಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

‘ಪ್ರಜಾವಾಣಿ’ ಪತ್ರಿಕೆಯಲ್ಲಿ ಜೂನ್‌ 14ರ ಸಂಚಿಕೆಯಲ್ಲಿ ನಗರೋತ್ಥಾನ ಕಾಮಗಾರಿ ಕುರಿತಂತೆ ಸಾರ್ವಜನಿಕರ ಆಕ್ರೋಶ ವರದಿಯಾಗಿದ್ದು, ಒಂದೂವರೆ ವರ್ಷದಿಂದ 350 ಕಾಮಗಾರಿಯಲ್ಲಿ ಶೇ 20ರಷ್ಟು ಪೂರೈಸಿಲ್ಲ’ ಎಂದು ಗುಡುಗಿದರು.

ADVERTISEMENT

‘ನಗರಸಭೆ ವ್ಯಾಪ್ತಿಯ 31 ವಾರ್ಡ್‌ನಲ್ಲಿ ₹ 3.25 ಕೋಟಿ ವೆಚ್ಚದಲ್ಲಿ ಕಾಮಗಾರಿ ಗುತ್ತಿಗೆ ಪಡೆದು ಸೂಕ್ತ ಸಿಬ್ಬಂದಿ ಮತ್ತು ಕಾರ್ಮಿಕರನ್ನು ನಿಯೋಜಿಸದೆ ವಿಳಂಬವಾಗುತ್ತಿದೆ’ ಎಂದರು.

ಗುತ್ತಿಗೆದಾರ ಪ್ರತಿನಿಧಿ ತೇಜಸ್ ಮಾತನಾಡಿ, ‘ಕಾಮಗಾರಿ ಪರಿಪೂರ್ಣವಾಗಿ ನಡೆಸಲು ನಗರಸಭೆ ಸಹಕಾರ ಅಗತ್ಯ. ನಗರದ ಬಹುತೇಕ ವಾರ್ಡ್‌ಗಳಲ್ಲಿ ಒಳಚರಂಡಿ ಕಾಮಗಾರಿ ಪೂರ್ಣವಾಗಿಲ್ಲ. ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಬೇಕಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ’ ಎಂದು ಸಮಜಾಯಿಸಿ ನೀಡಿದರು.

ಆಯುಕ್ತೆ ಮಾನಸ ಪ್ರತಿಕ್ರಿಯಿಸಿ, ‘ಗುತ್ತಿಗೆದಾರರು ಈವರೆಗೆ ಒಮ್ಮೆಯೂ ತಮ್ಮನ್ನು ಭೇಟಿ ಮಾಡಿ ಕಾಮಗಾರಿ ಕುರಿತು ಮಾಹಿತಿ ನೀಡಿಲ್ಲ. ಸಭೆಯಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಕಿಡಿಕಾರಿದರು.

ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ ಮಾತನಾಡಿ, ‘ವಾರ್ಡ್‌ನಲ್ಲಿ ಅರ್ಧಕ್ಕೆ ರಸ್ತೆ ಕಾಮಗಾರಿ ನಿಂತು ಸಾರ್ವಜನಿಕರು ಓಡಾಡದಂತಹ ಸ್ಥಿತಿ ಎದುರಾಗಿದೆ. ಇಂದಿನ ಸಭೆಗೆ ಗುತ್ತಿಗೆದಾರರನ್ನು ಆಹ್ವಾನಿಸಿತ್ತು. ಈ ಸಭೆಗೂ ಗೈರಾಗಿದ್ದು, ಶಾಸಕರು ಆತನ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳಬೇಕು’ ಎಂದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೃಷ್ಣರಾಜ ಗುಪ್ತ, ನಗರೋತ್ಥಾನ ಯೋಜನೆ ಆರಂಭವಾದಾಗಿನಿಂದ ಸದಸ್ಯರು ವಾರ್ಡ್‌ಗೆ ಹೋಗಲಾಗುತ್ತಿಲ್ಲ. ನಿವಾಸಿಗರಿಂದ ಬೈಗುಳು ಎದುರಿಸಬೇಕಾಗಿದೆ’ ಎಂದು ತಿಳಿಸಿದರು.

2 ತಿಂಗಳಲ್ಲಿ ಪೂರ್ಣ: ಗುತ್ತಿದಾರರ ಪರವಾಗಿ ಸಭೆಯಲ್ಲಿ ಹಾಜರಿದ್ದ ತೇಜಸ್ 2 ತಿಂಗಳ ಗಡುವು ನೀಡುವಂತೆ ಮನವಿ ಮಾಡಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಈ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರಿಸುತ್ತೇವೆ’ ಎಂದರು.

ಶಾಸಕರು ಉತ್ತರಿಸಿ, ‘ಜುಲೈ 17ರೊಳಗಾಗಿ ಶೇ 75ರಷ್ಟು ಗುಣಮಟ್ಟದ ಕಾಮಗಾರಿ ಪೂರೈಸಿರಬೇಕು. ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಿಮಗೆ ಕಾಮಗಾರಿ ಬಿಲ್ ಪಾವತಿಸಲಾಗುವುದು’ ಎಂದು ತಾಕೀತು ಮಾಡಿದರು.

ಅಮೃತ್ ಯೋಜನೆ: ನಗರದ ನಿವಾಸಿಗಳಿಗೆ ನೀರಿನ ಸವಲತ್ತು ಕಲ್ಪಿಸಲು ₹ 20 ಕೋಟಿ ವೆಚ್ಚದಲ್ಲಿ ಅಮೃತ್ ಯೋಜನೆ ಅನುಷ್ಠಾನವಾಗಲಿದೆ. ಆರಂಭದಲ್ಲಿ 500 ಮನೆಗಳಿಗೆ ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಸಿ ಪರಿಶೀಲಿಸಿದ ಬಳಿಕ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲಿದೆ’ ಎಂದು ನಗರಸಭೆ ಎಇಇ ಶರ್ಮಿಳಾ ತಿಳಿಸಿದರು.

ನಗರಸಭೆ ಸದಸ್ಯರಾದ ವಿವೇಕ್, ದೇವರಾಜ್, ಹರೀಶ್, ನಗರೋತ್ಥಾನ ಯೋಜನೆ ಅಧಿಕಾರಿ ಚೇತನ್, ಪರಿಸರ ಎಂಜಿನಿಯರ್ ರೂಪಾ ಭಾಗವಹಿಸಿದ್ದರು.

ನಗರೋತ್ಥಾನ ಯೋಜನೆಗೆ ನಿಯೋಜಿಸಿದ್ದ ನಗರಸಭೆ ಎಂಜಿನಿಯರ್ ಲೋಕೇಶ್ ಅವರನ್ನು ತೆರವುಗೊಳಿಸಿ ಆ ಸ್ಥಳಕ್ಕೆ ಶಮಂತ್ ನಿಯೋಜಿಸಿ ಕಾಮಗಾರಿ ತ್ವರಿತಗತಿ ನಡೆಸಲು ಕ್ರಮವಹಿಸಿ
- ಹರೀಶ್ ಗೌಡ ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.