ಮೈಸೂರು: ರಸಗೊಬ್ಬರದ ಬೆಲೆ ಏರಿಕೆ ವಿರುದ್ಧ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
‘ರಸಗೊಬ್ಬರದ ಬೆಲೆ ಇಳಿಸಿ’ ಎಂಬ ಘೋಷಣೆಗಳನ್ನು ಮೊಳಗಿಸುವ ಮೂಲಕ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘ರಸಗೊಬ್ಬರದ ಬೆಲೆಯನ್ನು ಏರಿಕೆ ಮಾಡುವ ಮೂಲಕ ರೈತರ ಮೇಲೆ ಸರ್ಕಾರ ಗದಾಪ್ರಹಾರ ನಡೆಸಿದೆ’ ಎಂದು ಹರಿಹಾಯ್ದರು.
ರಸಗೊಬ್ಬರವಾದ ಡಿಎಪಿ ಬೆಲೆ ₹ 1,200ರಿಂದ ₹ 1,900ರವರೆಗೆ ಏರಿಕೆಯಾಗಿದೆ. ಇನ್ನುಳಿದ ರಸಗೊಬ್ಬರದ ಬೆಲೆಯೂ ಹೆಚ್ಚಾಗಿದೆ. ಇದರಿಂದ ರೈತರು ಇವುಗಳನ್ನು ಖರೀದಿಸಲಾಗದೇ ಪರದಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನ್ಯಾಯಯುತವಾಗಿ ನೀಡದೇ ರಸಗೊಬ್ಬರದ ಬೆಲೆಯನ್ನು ಏರಿಕೆ ಮಾಡಿರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದ ಅವರು, ‘ಬೆಂಬಲ ಬೆಲೆಯನ್ನು ಕೇವಲ ಶೇ 2ರಿಂದ ಶೇ 3ರಷ್ಟು ಮಾತ್ರವೇ ಹೆಚ್ಚಿಸಿ, ರಸಗೊಬ್ಬರದ ಬೆಲೆಯನ್ನು ಶೇ 60ರಿಂದ ಶೇ 70ರಷ್ಟು ಹೆಚ್ಚಿಸಲಾಗಿದೆ’ ಎಂದು ಕಿಡಿಕಾರಿದರು.
‘ಇದೊಂದು ರೈತರನ್ನು ನಾಶ ಮಾಡುವ ಹುನ್ನಾರ. ಸರ್ಕಾರವನ್ನು ನಾವು ರೈತ ದ್ರೋಹಿ ಎನ್ನಬೇಕೇ, ರೈತ ಪರ ಎನ್ನಬೇಕೇ ಎಂಬುದನ್ನು ಜನರೇ ನಿರ್ಧರಿಸಬೇಕು’ ಎಂದರು.
ಹಳೆಯ ದಾಸ್ತಾನಿಗೆ ಮಾತ್ರವೇ ಹಳೆಯ ದರ ಎಂಬ ತಮ್ಮ ನಾಟಕೀಯ ವರ್ತನೆಯನ್ನು ಸರ್ಕಾರ ಕೈಬಿಡಬೇಕು. ಮುಂಬರುವ ದಿನಗಳಲ್ಲಿ ಯಾವುದೇ ರಸಗೊಬ್ಬರದ ಬೆಲೆಯನ್ನು ಹೆಚ್ಚಿಸಬಾರದು. ಒಂದು ವೇಳೆ ಹೆಚ್ಚಿಸುವುದೇ ಆದರೆ, ರೈತರಿಗೆ ಸಹಾಯಧನವನ್ನೂ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಜಿಲ್ಲಾಧ್ಯಕ್ಷ ಸೋಮಶೇಖರ್, ಮುಖಂಡರಾದ ಕುರುಬೂರು ಸಿದ್ದೇಶ್, ಗಣಿಗರಹುಂಡಿ ವೆಂಕಟೇಶ್, ಹಾಡ್ಯ ರವಿ, ದೇವೇಂದ್ರಕುಮಾರ್, ಬರಡನಪುರ ನಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.