ಮೈಸೂರು: ಆಶಾ ಕಾರ್ಯಕರ್ತೆಯರ ಪರವಾಗಿ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಬೃಹತ್ ಜನಾಂದೋಲನ ರೂಪಿಸಲಾಗುವುದು ಎಂದು ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ತಿಳಿಸಿದರು.
ಆಶಾ ಕಾರ್ಯಕರ್ತೆಯರು ಕಳೆದ 6 ದಿನಗಳಿಂದಲೂ ನಡೆಸುತ್ತಿರುವ ಮುಷ್ಕರದ ದನಿಯನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಎಮ್ಮೆ ಚರ್ಮದ ಸರ್ಕಾರ ಎನಿಸಿದೆ. ಸಚಿವರು, ಶಾಸಕರು ಮನೆಯಿಂದ ಆಚೆ ಬರುತ್ತಲೇ ಇಲ್ಲ. ಇನ್ನಾದರೂ ಇವರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೊರನಾ ವಾರಿಯರ್ಸ್ ಎಂದು ಇವರನ್ನು ಕರೆಯುತ್ತಾರೆ. ಹೂ ಮಳೆಗರೆಯುತ್ತಾರೆ, ಚಪ್ಪಾಳೆ ಹೊಡೆಯುತ್ತಾರೆ, ಸನ್ಮಾನಿಸುತ್ತಾರೆ. ಆದರೆ, ಇವರಿಗೆ ಇವುಗಳೆಲ್ಲದಕ್ಕಿಂತ ಸೇವೆಗೆ ತಕ್ಕ ವೇತನ ಬೇಕಾಗಿದೆ. ಈ ಕುರಿತು ಗಮನ ಹರಿಸಬೇಕು ಎಂದು ಹೇಳಿದರು.
ಸರ್ಕಾರ ಘೋಷಿಸಿದ ₹ 3 ಸಾವಿರ ಪ್ರೋತ್ಸಾಹ ಧನ ಕೇವಲ ಶೇ 10ರಷ್ಟು ಮಂದಿಗೆ ಮಾತ್ರವೇ ತಲುಪಿದೆ. ಇದು ಕೇವಲ ಘೋಷಣೆಯಾಗಿ ಮಾತ್ರವೇ ಉಳಿದಿದೆ ಎಂದು ಹರಿಹಾಯ್ದರು.
ಸಮುದಾಯದ ಆರೋಗ್ಯ ಕಾಪಾಡುವ ಆಶಾ ಕಾರ್ಯಕರ್ತೆಯರನ್ನು ಕಾಪಾಡುವುದು ಸರ್ಕಾರದ ಕರ್ತವ್ಯ. ಸೇವೆಯನ್ನು ಸ್ಥಗಿತಗೊಳಿಸಿ ಹೋರಾಟ ನಡೆಸುತ್ತಿದ್ದರೂ ತಿರುಗಿ ನೋಡದ ಸಚಿವರು, ಬಿಜೆಪಿಯಲ್ಲಿರುವ ಶೋಭಾ ಕರಾಂದ್ಲಾಜೆ ಮತ್ತು ಶಶಿಕಲಾ ಜೊಲ್ಲೆ ಈಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
‘ಈಗಲಾದರೂ ಸರ್ಕಾರ ಎಚ್ಚೆತ್ತು ಇವರ ಬೇಡಿಕೆ ಈಡೇರಿಸಬೇಕು. ನಾವು ಬೀದಿಗಿಳಿದು ಇವರ ಪರವಾಗಿ ಹೋರಾಟ ನಡೆಸುವ ಹಂತಕ್ಕೆ ಸಮಸ್ಯೆಯನ್ನು ಬಿಡಬಾರದು’ ಎಂದು ಒತ್ತಾಯಿಸಿದರು.
ಕೆಪಿಸಿಸಿ ಮಹಿಳಾ ಐಟಿ ಸೆಲ್‌ಗೆ ಪ್ರತಿಯೊಬ್ಬರು ಆಶಾ ಕಾರ್ಯಕರ್ತೆಯರ ಪರ ಹಕ್ಕೋತ್ತಾಯದ ನಾಮಫಲಕ ಹಿಡಿದು ವಿಡಿಯೊ ಶೇರ್ ಮಾಡುವಂತೆ ಪ್ರೇರೇಪಿಸುತ್ತಿದ್ದೇವೆ. ಈ ಮೂಲಕ ಇವರ ಬೆಂಬಲಕ್ಕೆ ಕಾಂಗ್ರೆಸ್ ನಿಲ್ಲಲಿದೆ ಎಂದರು.
ಜಿಲ್ಲಾ ಮಹಿಳಾ ಘಟಕದ ನಗರ ಘಟಕದ ಅಧ್ಯಕ್ಷರಾದ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷರಾದ ಪುಷ್ಪವಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.