ನಂಜನಗೂಡು: ನಗರದ ದೇವಿರಮ್ಮನಹಳ್ಳಿ ಬಡಾವಣೆಯ ಬಸವೇಶ್ವರ ವೃತ್ತದಲ್ಲಿ ವೈನ್ ಸ್ಟೋರ್ ತೆರೆಯುವುದನ್ನು ವಿರೋಧಿಸಿ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಂಜನಗೂಡು –ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಿಂಧೂವಳ್ಳಿ ಕೆಂಪಣ್ಣ ಮಾತನಾಡಿ, ಬಸವೇಶ್ವರ ವೃತ್ತದ ಸಮೀಪದ ಕಟ್ಟಡದಲ್ಲಿ ವೈನ್ ಸ್ಟೋರ್ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಸ್ಥಳದ ಸುತ್ತಮುತ್ತ ಮಠ, ಕಾಲೇಜು, ಕಲ್ಯಾಣ ಮಂಟಪ, ಬಸ್ ನಿಲ್ದಾಣಗಳಿವೆ. ಬಸವೇಶ್ವರ ವೃತ್ತ ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿನಿಯರು ಬಸ್ ಹತ್ತಲು ಕಾಯುವ ಸ್ಥಳ ಜನಸಂದಣಿಯಿಂದ ಕೂಡಿದೆ. ಈ ಪ್ರದೇಶದಲ್ಲಿ ವೈನ್ ಸ್ಟೋರ್ ತೆರೆದರೆ ಸಾರ್ವಜನಿಕರಿಕೆ, ಮಹಿಳೆಯರಿಗೆ ಕುಡುಕರಿಂದ ತೊಂದರೆ ಉಂಟಾಗುವ ಪರಿಸ್ಥಿತಿ ಇದೆ ಎಂದು ದೂರಿದರು.
ಈ ಸ್ಥಳದಲ್ಲಿ ಪರಿಶೀಲನೆ ನಡೆಸದೆ ಅಬಕಾರಿ ಇಲಾಖೆ ವೈನ್ ಸ್ಟೋರ್ ತೆರೆಯಲು ಲೈಸೈನ್ಸ್ ನೀಡಿದೆ. ತಾಲ್ಲೂಕು ಆಡಳಿತ ಹಾಗೂ ಸರ್ಕಾರ ವಿದ್ಯಾರ್ಥಿಗಳ ಮನವಿ ಪುರಸ್ಕರಿಸಿ ವೈನ್ ಸ್ಟೋರ್ ತೆರೆಯಲು ನೀಡಿರುವ ಲೈಸೈನ್ಸ್ ರದ್ದುಪಡಿಸಬೇಕು ಎಂದರು.
ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಜೇಂದ್ರ ಮಾತನಾಡಿ, ಮನವಿ ಪರಿಗಣಿಸಿ ವೈನ್ ಸ್ಟೋರ್ ತೆರೆಯಲು ನೀಡಿರುವ ಪರವಾನಗಿ ರದ್ದುಪಡಿಸದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಎನ್.ಸಿ.ಬಸವಣ್ಣ, ಮಹೇಶ್, ನಾಗರಾಜು, ಯೋಗೇಶ್, ನಗರಸಭೆ ಸದಸ್ಯ ಮಹದೇವಪ್ರಸಾದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.