ADVERTISEMENT

ಬಸ್‌ ಸೇವೆಗೆ ಆಗ್ರಹಿಸಿ ಪ್ರತಿಭಟನೆ

ಮಹಾರಾಣಿ ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 5:27 IST
Last Updated 8 ಸೆಪ್ಟೆಂಬರ್ 2023, 5:27 IST
ಬಸ್‌ ಸೇವೆಗೆ ಆಗ್ರಹಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ನೇತೃತ್ವದಲ್ಲಿ ಪಡುವಾರಹಳ್ಳಿ ಮಹಾರಾಣಿ ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಯರು ಗುರುವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಬಸ್‌ ಸೇವೆಗೆ ಆಗ್ರಹಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ನೇತೃತ್ವದಲ್ಲಿ ಪಡುವಾರಹಳ್ಳಿ ಮಹಾರಾಣಿ ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಯರು ಗುರುವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಪ್ರಜಾವಾಣಿ ಚಿತ್ರ

ಮೈಸೂರು: ‘ಕೆಎಸ್‌ಆರ್‌ಟಿಸಿ ಗ್ರಾಮೀಣ ಹಾಗೂ ನಗರ ಬಸ್‌ ನಿಲುಗಡೆ ಹಾಗೂ ಹೊಸ ಬಸ್‌ಗಳನ್ನು ಕಾಲೇಜು ಮಾರ್ಗದಲ್ಲಿ ನಿಯೋಜಿಸಬೇಕು’ ಎಂದು ಆಗ್ರಹಿಸಿ ಮಹಾರಾಣಿ ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಯರು ಗುರುವಾರ ಪ್ರತಿಭಟನೆ ನಡೆಸಿದರು.

ಪಡುವಾರಹಳ್ಳಿಯ ಕಾಲೇಜು ಮುಂಭಾಗ ‘ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ’ (ಎನ್‌ಎಸ್‌ಯುಐ) ನೇತೃತ್ವದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿನಿಯರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ADVERTISEMENT

ಎನ್‌ಎಸ್‌ಯುಐನ ರಫೀಕ್‌ ಅಲಿ ಮಾತನಾಡಿ, ‘ಕಾಲೇಜು ಆರಂಭವಾದಾಗಿನಿಂದಲೂ ಸೂಕ್ತ ಬಸ್‌ ಸೌಲಭ್ಯವನ್ನು ನೀಡಿಲ್ಲ. ಸಮಯಕ್ಕೆ ಸರಿಯಾಗಿ ಬಸ್‌ ಸೇವೆ ಸಿಗುತ್ತಿಲ್ಲ. ಹುಣಸೂರು ಕಡೆಯಿಂದ ಬರುವ ಬಸ್‌ಗಳನ್ನು ನಿಲ್ಲಿಸಬೇಕು. ನಗರ ಬಸ್‌ ನಿಲ್ದಾಣದಿಂದ ಕಾಲೇಜು ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ನಿಯೋಜಿಸಬೇಕು’ ಎಂದು ಒತ್ತಾಯಿಸಿದರು.

‘ವಿದ್ಯಾರ್ಥಿನಿಯರು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾರೂ ಸ್ಪಂದಿಸುತ್ತಿಲ್ಲ. ನಿತ್ಯ ನಡಿಗೆಯಲ್ಲಿಯೇ ಮನೆಗಳಿಗೆ ವಾಪಸ್‌ ಹೋಗುವಂತಾಗಿದೆ. ಬೆಳಗೊಳ ಕಡೆಯಿಂದ ಬರುವವರು ಕೆಆರ್‌ಎಸ್‌ ರಸ್ತೆಯ ಆಕಾಶವಾಣಿ ನಿಲ್ದಾಣಕ್ಕೆ ಹೋಗಬೇಕಿದೆ. ಹುಣಸೂರು ಕಡೆಯಿಂದ ಬರುವವರು ಪಡುವಾರಹಳ್ಳಿ, ಮೆಟ್ರೊಪೋಲ್‌ ವೃತ್ತದವರೆಗೂ ನಡೆದುಕೊಂಡೇ ಹೋಗಬೇಕು’ ಎಂದರು.

ವಿದ್ಯಾರ್ಥಿನಿ ಪಲ್ಲವಿ ಮಾತನಾಡಿ, ‘ನಿತ್ಯ 2 ಕಿ.ಮೀ ನಡೆಯಬೇಕಿದೆ. ಬಸ್‌ ನಿಲ್ದಾಣವಿದ್ದರೂ ಕಾಲೇಜು ಸಮಯಕ್ಕೆ ಬಸ್‌ ಸೌಕರ್ಯವಿಲ್ಲ. 2 ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದ್ದೇವೆ. ಯಾರೊಬ್ಬರು ನಮ್ಮ ದನಿಯನ್ನು ಆಲಿಸುತ್ತಿಲ್ಲ. ಹೀಗೆ ಮುಂದುವರಿದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಂಘಟನೆ ಜಿಲ್ಲಾ ಉಪಾಧ್ಯಕ್ಷ ರಜತ್‌, ಅಭಯ್‌, ಕಾರ್ಯದರ್ಶಿಗಳಾದ ಯೋಗೇಶ್‌, ಪರಮೇಶ್ವರ್‌, ಸೂಫಿಯಾನ್‌, ರವೀಶ್‌, ರೋಹಿತ್‌, ಇದಾಯತ್‌, ಮನೋಜ್, ವಿದ್ಯಾರ್ಥಿನಿಯರಾದ ಶರಧಿ, ರಕ್ಷಿತಾ, ವೈಷ್ಣವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.