ADVERTISEMENT

ಸರಗೂರು | 'ನಾಲ್ಕು ವರ್ಷದ ಪದವಿ ಕೋರ್ಸ್‌ ಹಿಂಪಡೆಯಿರಿ'

ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ಪದವಿ ವಿದ್ಯಾರ್ಥಿ ಪ್ರತಿಭಟನೆ: ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 14:03 IST
Last Updated 5 ಮಾರ್ಚ್ 2024, 14:03 IST
ಸರಗೂರು ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಸರಗೂರು ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಸರಗೂರು: ನಾಲ್ಕು ವರ್ಷದ ಪದವಿ ಕೋರ್ಸ್‌ ಹಿಂಪಡೆಯಬೇಕೆಂದು ಆಗ್ರಹಿಸಿ ಮಂಗಳವಾರ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ಪದವಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಸರ್ಕಾರ ಅತ್ಯಂತ ತರಾತುರಿಯಲ್ಲಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಎನ್‌ಇಪಿ-2020 ಜಾರಿ ಮಾಡಿತು. ಇದರ ಭಾಗವಾಗಿದ್ದ ನಾಲ್ಕು ವರ್ಷದ ಪದವಿಯನ್ನು ಅಪ್ರಜಾತಾಂತ್ರಿಕವಾಗಿ ಹೇರಿಕೆ ಮಾಡಿ, ವಿದ್ಯಾರ್ಥಿಗಳಿಗೆ ಕಂಟಕ ಉಂಟುಮಾಡಿದೆ ಎಂದು ಕಿಡಿಕಾರಿದರು.

ಜನಪರ ಶಿಕ್ಷಣ ನೀತಿ ರೂಪಿಸಲು ಆಗ್ರಹಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯದ 32 ಸಾವಿರಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಲಾಯಿತು. ನಡೆಸಿದ ಸಮೀಕ್ಷೆಯಲ್ಲಿ ಶೇ83ರಷ್ಟು ವಿದ್ಯಾರ್ಥಿಗಳು ನಾಲ್ಕು ವರ್ಷದ ಪದವಿ ಬೇಡವೆಂದು ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರ ರಚಿಸಿರುವ ರಾಜ್ಯ ಶಿಕ್ಷಣ ಆಯೋಗವು ರಾಜ್ಯ ಶಿಕ್ಷಣ ನೀತಿ ಕುರಿತಾದ ಅಂತಿಮ ವರದಿಯನ್ನು ಆಗಸ್ಟ್‌ನಲ್ಲಿ ನೀಡುವುದಾಗಿ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. 4 ವರ್ಷದ ಪದವಿಯನ್ನು ಹಿಂಪಡೆಯುವ ಕುರಿತು ಸರಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಸರ್ಕಾರದ ವಿಳಂಬವು ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೆ ದೂಡಿದೆ ಎಂದು ಪ್ರತಿಭಟನಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘6ನೇ ಸೆಮಿಸ್ಟರ್ ಪ್ರವೇಶಿಸಲಿರುವ ಪದವಿ ವಿದ್ಯಾರ್ಥಿಗಳಿಗೆ, ಇದೇ ಅಂತಿಮ ವರ್ಷವೇ? ಇನ್ನೊಂದು ವರ್ಷ ಓದಬೇಕೇ? ಎಂಬುದರ ಕುರಿತು ಯಾವ ಸ್ಪಷ್ಟತೆಯು ನೀಡಲಾಗಿಲ್ಲ. ಈ ವಿಳಂಬದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಕುರಿತಾಗಿಯೇ ಸ್ಪಷ್ಟತೆ ಇಲ್ಲದಂತಾಗಿದೆ. ಇನ್ನೂ 2-3ತಿಂಗಳಲ್ಲಿ ಮೂರನೇ ವರ್ಷದ ಪದವಿ ಮುಗಿಯಲಿದ್ದು, ಅವರ ಭವಿಷ್ಯ ಅತಂತ್ರದಲ್ಲಿದೆ. ಹೀಗಾಗಿ 4 ವರ್ಷದ ಪದವಿ ಕೋರ್ಸ್ ಕುರಿತ ನಿರ್ಧಾರ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು’ ಎಂದು ಆಗ್ರಹಿಸಿದರು.

ಎಐಡಿಎಸ್‌ಒ ಕಾರ್ಯಕರ್ತರಾದ ಚಂದ್ರಿಕಾ, ಮಧು, ಹೇಮಂತ್, ವಿಜಯ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.