ಹುಣಸೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಟ್ಟೆನೋವು ಎಂದು ಮಂಗಳವಾರ ರಾತ್ರಿ ಚಿಕಿತ್ಸೆ ಪಡೆದ ರೋಗಿ ರಾಹುಲ್ ಜೈನ್ ಬುಧವಾರ ಬೆಳಿಗ್ಗೆ ಎದ್ದೇಳದೆ ಸಾವನ್ನಪ್ಪಿದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜೈನ್ ಸಮುದಾಯದವರು ಗುರುವಾರ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಂಜುನಾಥ್ ಆಕ್ರೋಶಗೊಂಡ ಸಮುದಾಯದ ಮುಖಂಡರು ಮತ್ತು ನಗರಸಭೆ ಕೆಲವು ಸದಸ್ಯರೊಂದಿಗೆ ಚರ್ಚಿಸಿ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ನೊಂದ ಕುಟುಂಬದವರು ಮತ್ತು ಸ್ಥಳೀಯರು ಪ್ರತಿಭಟನೆ ಹಿಂಪಡೆದು ಶವಸಂಸ್ಕಾರಕ್ಕೆ ತೆರಳಿದರು.
ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್, ಉಪವಿಭಾಗಾಧಿಕಾರಿ ವೀಣಾ, ತಹಶೀಲ್ದಾರ್ ಬಸವರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಮತ್ತು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜೇ ಅರಸು ಭಾಗವಹಿಸಿದ್ದರು.
‘ಯುವಕನ ನಿಗೂಢ ಸಾವಿನ ಬಗ್ಗೆ ಚರ್ಚಿಸಿದ ಸಭೆ, ಹೊಟ್ಟೆ ನೋವಿಗೆ ವೈದ್ಯರು ನೀಡಿರುವ ಔಷಧಿ ಪ್ರಾಣ ತೆಗೆಯುವಂತಹದ್ದಲ್ಲ, ಲಕ್ಷಕ್ಕೆ ಒಬ್ಬರಿಗೆ ಈ ಔಷಧಿ ವ್ಯತಿರಿಕ್ತ ಪರಿಣಾಮ ಬೀರಿ ಪ್ರಾಣ ಹಾನಿ ಆಗುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ಹೇಳಿದರು.
‘ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಯಾವ ಕಾರಣದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿಯಲಿದ್ದು, ಆ ಬಳಿಕ ವೈದ್ಯರ ಮೇಲೆ ಕಾನೂನಾತ್ಮಕ ಹೋರಾಟ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುವ ಭರವಸೆ’ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.