ADVERTISEMENT

ಮೈಸೂರು | ಜನರ ಆಕ್ರೋಶ: ‘ಬ್ಯಾರಿಕೇಡ್‌ ಕೋಟೆ’ ತೆರವು

ಕಳೆದ ವರ್ಷದ ದಸರಾದಲ್ಲಿನ ಸಂಚಾರ ನಿಯಮವೇ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 4:59 IST
Last Updated 6 ಅಕ್ಟೋಬರ್ 2024, 4:59 IST

ಮೈಸೂರು: ಅರಮನೆ ಸುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಕಡಿವಾಣ ಹಾಕಿರುವುದು ಹಾಗೂ ದೇವರಾಜ ಅರಸು ರಸ್ತೆಯನ್ನು ‘ವಾಕಿಂಗ್‌ ಸ್ಟ್ರೀಟ್‌’ ಆಗಿ ಬದಲಾವಣೆ ಮಾಡಿ ವಾಹನ ಓಡಾಟಕ್ಕೆ ಅವಕಾಶ ನೀಡದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ನಗರ ಪೊಲೀಸ್‌ ಇಲಾಖೆ ಹಿಂದಿನ ವರ್ಷದ ದಸರಾದಲ್ಲಿ ಯೋಜಿಸಲಾಗಿದ್ದ ಸಂಚಾರ ವ್ಯವಸ್ಥೆಯನ್ನೇ ಮುಂದುವರಿಸಲು ನಿರ್ಧರಿಸಿದೆ.

ಶುಕ್ರವಾರ ಸಂಜೆಯಿಂದಲೇ ಪೊಲೀಸರು ಅರಮನೆ ಸುತ್ತಲಿನ ರಸ್ತೆ ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿದ್ದರು. ‘ವಾಕಿಂಗ್‌ ಸ್ಟ್ರೀಟ್‌’ ಯೋಜನೆಯಿಂದ ಜನರ ಓಡಾಟ ಕಡಿಮೆಯಾಗಿ ವ್ಯಾಪಾರಕ್ಕೆ ತೊಂದರೆಯಾಗುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ದೇವರಾಜ ಅರಸು ರಸ್ತೆಯ ಮಳಿಗೆಗಳ ಮಾಲೀಕರು ಮಳಿಗೆ ಮುಚ್ಚಿ ಬೀದಿಗಿಳಿದು ಹೋರಾಟ ಮಾಡಿದ್ದರು.

‘ಜಿಲ್ಲಾಧಿಕಾರಿಯ ಆದೇಶದಂತೆ ಸಂಚಾರ ವ್ಯವಸ್ಥೆಯಲ್ಲಿ ಹೊಸ ಮಾರ್ಪಾಡು ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಬಂದ ಬಳಿಕ ಆ ನಿಯಮಗಳನ್ನು ತೆಗೆದಿದ್ದು, ಹಿಂದಿನಂತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್‌.ಜಾಹ್ನವಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜಿಲ್ಲಾಡಳಿತ ಹಾಗೂ ಪೊಲೀಸರ ನಿರ್ಧಾರ ಸ್ವಾಗತಾರ್ಹ. ಜನರ ಓಡಾಟವಿದ್ದರಷ್ಟೇ ದಸರಾದ ರಂಗು ಹೆಚ್ಚಲು ಸಾಧ್ಯ. ಆರಂಭದಲ್ಲೇ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಶಾಸಕರಾದ ಕೆ.ಹರೀಶ್‌ ಗೌಡ, ತನ್ವೀರ್‌ ಸೇಠ್‌ ಅವರಲ್ಲೂ ಮನವಿ ಮಾಡಿಕೊಂಡಿದ್ದೆವು. ದಸರಾ ಸಮಯದಲ್ಲಿ ಎಂದಿನಂತೆ ಅಧಿಕಾರಿಗಳಿಗೆ ಸಹಕರಿಸುತ್ತೇವೆ’ ಎಂದು ಡಿ.ದೇವರಾಜ ಅರಸು ಟ್ರೇಡರ್ಸ್ ಅಸೋಸಿಯೇಷನ್‌ ಅಧ್ಯಕ್ಷ ವೀರಭದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.