ಮೈಸೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿ 20 ದಿನವಾದರೂ ತಾಂತ್ರಿಕ ಸಮಸ್ಯೆಯಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಕುಂಟುತ್ತಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಖಾಸಗಿ, ಸರ್ಕಾರಿ ಪದವಿ ಕಾಲೇಜಿಗೆ ದಾಖಲಾಗಲು ಕಾಲೇಜು ಶಿಕ್ಷಣ ಇಲಾಖೆಯ https://uucms.karnataka.gov.in/Login/OnlineStudentRegistration Form ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳ ವೈಯಕ್ತಿಕ ವಿವರ, ವಿಳಾಸ, ಮೊಬೈಲ್ ಸಂಖ್ಯೆ ಯೊಂದಿಗೆ ದಾಖಲಿಸಬೇಕು. ನಂತರ ಬರುವ ಒಟಿಪಿ ನಮೂದಿಸಬೇಕು. ಬಳಿಕ ಭಾವಚಿತ್ರ, ಡಿಜಿಟಲ್ ಸಹಿ ಸೇರ್ಪಡೆ, ಮೀಸಲಾತಿ, ಹಿಂದಿನ ವಿದ್ಯಾಭ್ಯಾಸದ ವಿವರಗಳನ್ನು ನೀಡಬೇಕು.
ಆದರೆ, ‘ವೈಯಕ್ತಿಕ ವಿವರ ದಾಖಲಿಸುವಷ್ಟರಲ್ಲಿ ಸರ್ವರ್ ಕೈ ಕೊಡುವುದು ಮಾಮೂಲಿಯಾಗಿದೆ. ಕೆಲವೊಮ್ಮೆ ಮಾಹಿತಿ ದಾಖಲಿಸಿದರೂ ನೆಟ್‌ವರ್ಕ್ ಸಮಸ್ಯೆಯಿಂದ ಮೊಬೈಲ್‌ಗೆ ಒಟಿಪಿ ಬರುವುದಿಲ್ಲ. ಸೈಬರ್ ಕೇಂದ್ರಕ್ಕೆ ಹೋಗಿ ಗಂಟೆಗಟ್ಟಲೆ ಕೂತರೂ, ಸಮಸ್ಯೆ ಕಾಡುತ್ತಿರುತ್ತದೆ’ ಎಂದು ಹುಣಸೂರು ತಾಲ್ಲೂಕಿನ ಚಿಲ್ಕುಂದದ ವಿದ್ಯಾರ್ಥಿನಿ ಸರಿತಾ ಅಳಲು ತೋಡಿಕೊಂಡರು.
‘ಇದರಿಂದ ಕನಿಷ್ಠ ಮೂರು ಬಾರಿ ಅರ್ಜಿ ಹಾಕಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆನ್‌ಲೈನ್ ವ್ಯವಸ್ಥೆ ಬಳಕೆದಾರರ ಸ್ನೇಹಿಯಾಗಿಲ್ಲ’ ಎಂದು ದೂರಿದರು.
ಹಣ ಪಡೆದು ಅವಕಾಶ: ‘ಖಾಸಗಿ ಕಾಲೇಜುಗಳೂ ಇದೇ ಮಾದರಿಯಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬೇಕು ಎಂಬುದು ನಿಯಮ. ಆದರೆ, ಕಾಲೇಜಿನ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ಹಣ ಮುಂಗಡ ಪಡೆದು, ಸೀಟು ಖಾತ್ರಿಪಡಿಸಿ, ತಮ್ಮ ಸಿಬ್ಬಂದಿ ಮೂಲಕವೇ ದಾಖಲಾತಿ ಪ್ರಕ್ರಿಯೆ ನಡೆಸುತ್ತಿವೆ.
‘ಪ್ರವೇಶ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯ, ಕಾಲೇಜು ಹಂತ ಹಾಗೂ ಯುಯುಸಿಎಂಎಸ್ ಮೂರು ಹಂತದಲ್ಲಿ ಮಾಹಿತಿ ದಾಖಲಿಸಬೇಕು. ಈ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಾತ್ಕಲಿಕವಾಗಿ ಹಣ ಪಡೆದು, ಮಕ್ಕಳ ಪ್ರವೇಶಾತಿ ಖಾತ್ರಿಪಡಿಸಿಕೊಳ್ಳುತ್ತಿದ್ದೇವೆ’ ಎಂದು ಕಾಲೇಜೊಂದರ ಆಡಳಿತ ಮಂಡಳಿ ಸದಸ್ಯರೊಬ್ಬರು ತಿಳಿಸಿದರು.
ತಾಂತ್ರಿಕ ತೊಂದರೆ ಗಮನಕ್ಕೆ ಬಂದಿದೆ. ನಮ್ಮ ವ್ಯಾಪ್ತಿಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಕೇಂದ್ರ ಕಚೇರಿಯಲ್ಲೇ ಸರಿಪಡಿಸಬೇಕು–ಡಾ.ಗಿರಿಧರ್ ರಾವ್ ಎಂ.ಎಸ್.ಜಂಟಿ ನಿರ್ದೇಶಕ ಕಾಲೇಜು ಶಿಕ್ಷಣ ಇಲಾಖೆ ಮೈಸೂರು
ಮೇ ತಿಂಗಳಾಂತ್ಯದವರೆಗೂ ಅವಕಾಶ
‘ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಬಿಎಸ್ಸಿಗೆ 1100 ಬಿಸಿಎ ಪದವಿಗೆ 200 ಸೀಟುಗಳಿವೆ. ಮೈಸೂರು ಮಂಡ್ಯ ಹಾಸನ ಚಾಮರಾಜನಗರದ ಜೊತೆಗೆ ಬೇರೆ ಜಿಲ್ಲೆಗಳ ವಿದ್ಯಾರ್ಥಿನಿಯರು ಇಲ್ಲಿ ಪ್ರವೇಶ ಪಡೆಯಲು ಹಾತೊರೆಯುತ್ತಾರೆ. ಆದರೆ ಇದುವರೆಗೂ 100 ಮಂದಿಯಷ್ಟೇ ಅರ್ಜಿ ಸಲ್ಲಿಸಿದ್ದಾರೆ’ ಎಂದು ಪ್ರಾಂಶುಪಾಲ ಡಾ.ಡಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹಲವರು ಸಿಇಟಿ ನೀಟ್ ಪರೀಕ್ಷೆ ಬರೆದು ಅಲ್ಲಿ ಸೀಟು ಸಿಗದಿದ್ದರೆ ಮತ್ತೆ ವಿಜ್ಞಾನ ಪದವಿಗೆ ಸೇರಲು ಬರುತ್ತಾರೆ. ಹೀಗಾಗಿ ಮೇ ಕೊನೆವರೆಗೂ ಅವಕಾಶ ಕಲ್ಪಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.