ಮೈಸೂರು: ಖ್ಯಾತ ಚಲನಚಿತ್ರ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ‘ಪುನೀತ್ ರಾಜ್‌ಕುಮಾರ್ ಸಮಾಜ ಸೆವಾ ಸಮಿತಿ’ಯಿಂದ ಭಾನುವಾರ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
8 ಜೋಡಿ ಹೊಸ ಬಾಳಿಗೆ ಕಾಲಿರಿಸಿದರು. ವರನಿಗೆ ಪಂಚೆ, ಶರ್ಟ್ ಹಾಗೂ ವಧುವಿಗೆ ಸೀರೆ, ಚಿನ್ನದ ತಾಳಿ, ಕಾಲುಂಗುರ ನೀಡಲಾಯಿತು. ಸಾಮೂಹಿಕ ವಿವಾಹಕ್ಕೆ ಆಗಮಿಸಿದ್ದ ವಧು-ವರ ಮತ್ತು ಅವರ ಬಂಧುಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಮದ್ದೂರು, ಚನ್ನರಾಯಪಟ್ಟಣ, ಹುಣಸೂರು, ತಿ.ನರಸೀಪುರ, ಎಚ್.ಡಿ.ಕೋಟೆ ಸೇರಿದಂತೆ ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಿಂದ ನೋಂದಣಿ ಮಾಡಿಕೊಂಡಿದ್ದ ಯುವಕ–ಯುವತಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅರ್ಚಕ ಉದಯಗಿರಿಯ ಗುರುಪ್ರಸಾದ್ ನೇತೃತ್ವದ ತಂಡದವರು ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಮಾತನಾಡಿ, ‘ಪುನೀತ್ ರಾಜ್‌ಕುಮಾರ್ ಇಂದಿನ ಪೀಳಿಗೆಗೆ ಆದರ್ಶವಾಗಿದ್ದಾರೆ. ಸಾಂಸ್ಕೃತಿಕ ನಗರಿಯಲ್ಲಿ ಅವರ ಅಭಿಮಾನಿಗಳು ಸೇವಾ ಕಾರ್ಯದಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಸಮಿತಿಯಿಂದ ಎರಡನೇ ಬಾರಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.
ಸಾನ್ನಿಧ್ಯ ವಹಿಸಿದ್ದ ನಾರಾಯಣಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಮಾತನಾಡಿ, ‘ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ನವ ದಂಪತಿ ಸುಖ, ಶಾಂತಿ, ನೆಮ್ಮದಿ ಹಾಗೂ ಒಗ್ಗಟ್ಟಿನಿಂದ ಬಾಳ್ವೆ ನಡೆಸಬೇಕು’ ಎಂದು ಸಲಹೆ ನೀಡಿದರು.
ದಸರಾ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ‘ಪುನೀತ್ ಸೇವಾ ಕಾರ್ಯವನ್ನು ಮುಂದುವರಿಸುವ ಕೆಲಸವನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಬೇಕು. ಎಲ್ಲರಿಗೂ ಆದರ್ಶಪ್ರಾಯವಾದ, ಸಮಾಜಕ್ಕೆ ಮಾದರಿಯಾದ ಕಾರ್ಯಕ್ರಮವಿದು. ಸಮಿತಿಯಿಂದ ಪುನೀತ್ ಹುಟ್ಟುಹಬ್ಬವನ್ನು ಸಮಾಜಕ್ಕೆ ಮೀಸಲಿರಿಸಿ ಜನರ ಶ್ಲಾಘನೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಷಯ’ ಎಂದರು.
ಚಲನಚಿತ್ರ ನಟ ಧೀರನ್ ರಾಮ್‌ಕುಮಾರ್, ‘ಅಪ್ಪು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಈ ರೀತಿಯ ಕಾರ್ಯಕ್ರಮ ಹೆಚ್ಚು ನಡೆಯಲಿ. ನವ ದಂಪತಿಗಳು ಸುಖ ಸಂತೋಷದಿಂದ ಬಾಳ್ವೆ ನಡೆಸಲಿ’ ಎಂದು ಹಾರೈಸಿದರು.
‘ಸರಳ ವಿವಾಹ ತುಂಬಾ ಖುಷಿ ತಂದಿದೆ. ನೆಚ್ಚಿನ ನಟರಾದ ಪುನೀತ್ ಅವರ ಹುಟ್ಟಹಬ್ಬದ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾವು ಭಾಗಿಯಾಗಿರುವುದಕ್ಕೆ ಹೆಮ್ಮೆ ಇದೆ’ ಎಂದು ಮೈಸೂರಿನ ಅಳವಾಡಿಯ ವಿಷ್ಣು ಮತ್ತು ದೇವಿಕಾ ಹಾಗೂ ಮದ್ದೂರು ಚಾಮನಹಳ್ಳಿಯ ಅಂದಾನಿ ಮತ್ತು ವಿದ್ಯಾ ನವದಂಪತಿ ಅನಿಸಿಕೆ ಹಂಚಿಕೊಂಡರು.
ಮುಖಂಡರಾದ ಮಾವಿನಹಳ್ಳಿ ಸಿದ್ದೇಗೌಡ, ಎಚ್.ವಿ.ರಾಜೀವ್, ಹರೀಶ್ ಗೌಡ, ಎಸ್.ಚಂದ್ರಶೇಖರ್, ನಗರ ಪಾಲಿಕೆ ಸದಸ್ಯ ರಾಮು, ಮೈಸೂರು ಹೋಟೆಲ್ ಕಾಂಪ್ಲೆಕ್ಸ್ ಮಾಲೀಕ ವಿಜೇಂದ್ರ, ಸಮಾಜ ಸೇವಕರಾದ ಸೂರ್ಯಕುಮಾರ್, ಕೆ.ದಿನೇಶ್, ಸಮಿತಿಯ ಅಧ್ಯಕ್ಷ ಎನ್.ರಾಜು, ಉಪಾಧ್ಯಕ್ಷ ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.