ADVERTISEMENT

ಮರಣದ ನಂತರವೂ ಪುನೀತ್‌ ಜೀವಂತ: ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 13:54 IST
Last Updated 28 ಅಕ್ಟೋಬರ್ 2024, 13:54 IST
ಮಲೆಮಹದೇಶ್ವರ ಸೇವಾ ಸಂಸ್ಥೆಯಿಂದ ಮೈಸೂರಿನ ವಿಜಯನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಪುನೀತ್ ರಾಜಕುಮಾರ್ ಅವರ 3ನೇ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಪುನೀತ್‌ ರಾಜರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು
ಮಲೆಮಹದೇಶ್ವರ ಸೇವಾ ಸಂಸ್ಥೆಯಿಂದ ಮೈಸೂರಿನ ವಿಜಯನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಪುನೀತ್ ರಾಜಕುಮಾರ್ ಅವರ 3ನೇ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಪುನೀತ್‌ ರಾಜರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು   

ಮೈಸೂರು: ‘ಸಿನಿಮಾಗಳ ಮೂಲಕ ಜನರನ್ನು ರಂಜಿಸುವ ಜೊತೆಗೆ ಅಪಾರ ಸೇವಾ ಕಾರ್ಯಗಳನ್ನು ಮಾಡಿದ್ದ ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಿಧನದ ನಂತರವೂ ಜೀವಂತವಾಗಿದ್ದಾರೆ’ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.

ಮಲೆಮಹದೇಶ್ವರ ಸೇವಾ ಸಂಸ್ಥೆಯಿಂದ ಸೋಮವಾರ ಇಲ್ಲಿನ ವಿಜಯನಗರದ ಖಾಸಗಿ ಹೋಟೆಲ್‌ನಲ್ಲಿ ಪುನೀತ್ ರಾಜಕುಮಾರ್ ಅವರ 3ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹುಟ್ಟಿದ ಮೇಲೆ ಸಾವು ನಿಶ್ಚಿತ. ನಾವು ಹೋದ ಮೇಲೂ ಜನರ ಮನಸ್ಸಿನಲ್ಲಿ ಜೀವಂತವಾಗಿರುವಂತೆ ಬದುಕಬೇಕು. ಅಂತಹ ಬದುಕು ಪುನೀತ್‌ ಅವರದ್ದಾಗಿತ್ತು. ಶ್ರೀಮಂತಿಕೆ ಅಥವಾ ಎಷ್ಟು ವರ್ಷ ಬದುಕಿದ್ದೆವು ಎಂಬುದು ಮುಖ್ಯವಲ್ಲ. ಹೇಗೆ ಬದುಕಿದ್ದೆವು ಎಂಬುದಷ್ಟೆ ಮುಖ್ಯವಾಗುತ್ತದೆ’ ಎಂದರು.

ADVERTISEMENT

ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.  ಪ್ರಕಾಶ್, ‘ಪುನೀತ್ ರಾಜಕುಮಾರ್ ಅದ್ಭುತ ನಟ. ಬಾಲ್ಯದಿಂದಲೇ ನಟನೆಯಲ್ಲಿ ತೊಡಗಿಕೊಂಡಿದ್ದ ಅವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಅಭಿಮಾನದ ವಿದಾಯ ಎಲ್ಲರಿಗೂ ಸಿಗುವುದಿಲ್ಲ’ ಎಂದು ಹೇಳಿದರು.

ಮುಖಂಡ ಕೆ. ರಘುರಾಮ್ ವಾಜಪೇಯಿ, ‘ಪುನೀತ್ ಸೇವಾ ಕಾರ್ಯದ ಮೂಲಕ ಯುವಪೀಳಿಗೆಗೆ ಆದರ್ಶವಾಗಿದ್ದಾರೆ’ ಎಂದರು.

ಡಾ.ರೇಖಾ ಮನಃಶಾಂತಿ (ಸಂಗೀತ, ವೈದ್ಯಕೀಯ), ಮಂಜು ಸಿ. ಶಂಕರ್ (ನಿರೂ‍ಪಕ), ರಿಷಿ ವಿಶ್ವಕರ್ಮ (ಸಹಕಾರ ಕ್ಷೇತ್ರ), ರೂಪಾ ಎಚ್. ಗೌಡ, ಕಾಡನಹಳ್ಳಿ ಡಿ. ಸ್ವಾಮಿಗೌಡ (ಸಂಘಟನೆ), ಅಲೋಕ್ ಆರ್. ಜೈನ್ (ಕ್ರೀಡೆ), ಸ್ಮಿತಾ ಬಿ. (ಚಿತ್ರರಂಗ) ಅವರಿಗೆ ‘ಪುನೀತ್ ರಾಜರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿದರು. ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ‍ಪಿಸಿಸಿ ಸದಸ್ಯ ನಜರ್‌ಬಾದ್‌ ನಟರಾಜ್, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ. ರಾಘವೇಂದ್ರ, ಮಲೆ ಮಹದೇಶ್ವರ ಸೇವಾ ಸಂಸ್ಥೆ ಸಂಸ್ಥೆಯ ಅಧ್ಯಕ್ಷ ಮಹಾನ್ ಶ್ರೇಯಸ್, ರಾಕೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.