ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ನೊಂದವರಿಗೆ ಮಿಡಿದವರು...

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಮೈಸೂರು ಜಿಲ್ಲೆಯ ಕೊರೊನಾ ಸೇನಾನಿಗಳು
ಮೈಸೂರು ಜಿಲ್ಲೆಯ ಕೊರೊನಾ ಸೇನಾನಿಗಳು   

555 ಮೃತ ದೇಹ ಸಾಗಿಸಿದ ನಾಗರಾಜ್‌
ಮೈಸೂರು:
ಜಿಲ್ಲೆಯಲ್ಲಿ ಕೋವಿಡ್‌–19ನಿಂದ ಸಾವಿನ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದಾಗ, ಸೋಂಕಿತರ ಶವಗಳನ್ನು ಅಂತ್ಯಸಂಸ್ಕಾರಕ್ಕಾಗಿ ಆಂಬುಲೆನ್ಸ್‌ನಲ್ಲಿ ಅಂಜಿಕೆಯಿಲ್ಲದೆ ಸಾಗಿಸಿದವರು ಎಸ್‌.ನಾಗರಾಜ್‌.

ಅಂತ್ಯಸಂಸ್ಕಾರಕ್ಕೆ ಕುಟುಂಬದವರಿಗೆ ಅವಕಾಶ ಇಲ್ಲದಿದ್ದ ಸಂದರ್ಭದಲ್ಲಿ ಆಯಾ ಮೃತ ವ್ಯಕ್ತಿಯ ಅಣ್ಣ, ತಮ್ಮ, ಮಗ, ಸಹೋದರ, ಬಂಧುವಾಗಿ ಅಂತ್ಯಕ್ರಿಯೆ ನಡೆಸಿದರು. ತಮ್ಮ ಜೀವವನ್ನೇ ಲೆಕ್ಕಿಸದೆ ಸುಮಾರು ಏಳೆಂಟು ತಿಂಗಳು ಕೊರೊನಾ ವಾರಿಯರ್‌ ಆಗಿ ಹಗಲಿರುಳು ಕಾರ್ಯನಿರ್ವಹಿಸಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 555 ಮಂದಿಯನ್ನು ಅವರು ಈ ವಾಹನದಲ್ಲಿ ಸಾಗಿಸಿದ್ದಾರೆ. ಜೊತೆಗೆ ಶವಸಂಸ್ಕಾರದ ಪ್ರಕ್ರಿಯೆಯಲ್ಲೂ ಕೈಜೋಡಿಸಿದ್ದಾರೆ.

ADVERTISEMENT

ನಾಗರಾಜ್‌ ಅವರು ಮೈಸೂರಿನ ಆರೋಗ್ಯ ಇಲಾಖೆಯ ‘ಶ್ರದ್ಧಾಂಜಲಿ’ ಆಂಬುಲೆನ್ಸ್‌ ಚಾಲಕರಾಗಿದ್ದಾರೆ. 46 ವರ್ಷದ ಇವರು 2016ರಿಂದ ಇಲಾಖೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ತಿಲಕನಗರದಲ್ಲಿ ಮನೆಯಿದ್ದು, ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.

‘ಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡು ಯಾತನೆ ಅನುಭವಿಸಿದೆ. ಕಷ್ಟ ಎಂದರೇನು ಎಂಬುದು ಚೆನ್ನಾಗಿ ಗೊತ್ತಿದೆ. ಕೋವಿಡ್‌ನಿಂದ ಮೃತಪಟ್ಟ ಹಿರಿಯರಿಗೆ ಒಬ್ಬ ಮಗನಾಗಿ, ಕಿರಿಯರಿಗೆ ತಂದೆಯಾಗಿ ಕಾಳಜಿ ವಹಿಸಿ ಅಂತ್ಯಸಂಸ್ಕಾರಕ್ಕೆ ಸಹಕರಿಸಿದ್ದೇನೆ’ ಎಂದು ನಾಗರಾಜ್‌ ಹೇಳುತ್ತಾರೆ.

‘ಆರಂಭದಲ್ಲಿ ತುಸು ಭಯ ಇದ್ದಿದ್ದು ನಿಜ. ಆದರೆ, ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದ್ದರಿಂದ ಆತಂಕ ಕಡಿಮೆ ಆಯಿತು. ವಾಹನದಲ್ಲಿ ಶವ ಇರಿಸಿ, ಪಿಪಿಇ ಕಿಟ್‌ ಧರಿಸಿಯೇ ಚಾಲನೆ ಮಾಡಿದೆ. ಇಲಾಖೆಯ ಸೂಚನೆ ಮೇರೆಗೆ ಮೃತದೇಹವನ್ನು ಎಚ್ಚರಿಕೆಯಿಂದ ಪ್ಯಾಕ್‌ ಮಾಡಿ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಸಿದೆ. 8 ವರ್ಷದ ಮಗುವಿನಿಂದ ಹಿಡಿದು 90 ವರ್ಷ ವಯಸ್ಸಿನವರೆಗಿನ ವೃದ್ಧರನ್ನು ಸಾಗಿಸಿದ್ದೇನೆ’ ಎಂದರು.

***
ಪರ ಊರಿನ ಕಾರ್ಮಿಕರಿಗೆ ಹೆಗಲಾಗಿ...
ಮೈಸೂರು: ಕೋವಿಡ್‌ –19 ಆತಂಕದಿಂದಾಗಿ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಮೈಸೂರಿನಲ್ಲಿದ್ದ ಪರ ಊರಿನ ಹಲವರು ನಿರ್ಗತಿಕರಾದರು. ತಮ್ಮೂರಿಗೆ ಹೋಗಲಾರದಂಥ ಸನ್ನಿವೇಶದಲ್ಲಿ ಅವರಿಗೆ ಆಸರೆ ನೀಡಿದ್ದು ಕ್ರೆಡಿಟ್‌– ಐ ಸ್ವಯಂ ಸೇವಾ ಸಂಸ್ಥೆ. ಇದರ ಮ್ಯಾನೇಜಿಂಗ್‌ ಟ್ರಸ್ಟಿ ಹಾಗೂ ಸಿಇಒ ಡಾ.ಎಂ.ಪಿ.ವರ್ಷ.

ಪಾಲಿಕೆ ಸಹಯೋಗದೊಂದಿಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ ಕೇಂದ್ರ ಆರಂಭಿಸಿದರು. ನಿರ್ಗತಿಕರು, ಅಸಹಾಯಕರಿಗೆ ಆಸರೆ ನೀಡಿ, ಸ್ವಾವಲಂಬಿ ಬದುಕು ಸಾಗಿಸಲು ಬೇಕಾದ ಕೌಶಲ ಕಲಿಸಲಿಕ್ಕಾಗಿ ತರಬೇತಿ ನೀಡಿದರು. ಬದುಕಿನಲ್ಲಿ ಆತ್ಮವಿಶ್ವಾಸ ತುಂಬಿದರು. ಕುಟುಂಬದಿಂದ ದೂರ ಉಳಿದವರನ್ನು ಮತ್ತೆ ಕುಟುಂಬಕ್ಕೆ ಸೇರಿಸಿದರು. ಉದ್ಯೋಗ ಕಂಡುಕೊಳ್ಳಲು ಸಹಾಯ ಮಾಡಿದರು.

ಸಮಾಜ ಸೇವೆ ಉದ್ದೇಶದಿಂದ ಶೈಲಜಾ (ಅಧ್ಯಕ್ಷೆ), ಎಂ.ಆರ್‌.ಮಂಜುನಾಥ್‌ (ಖಜಾಂಚಿ) ಹಾಗೂ ಎಂ.ಪಿ.ವರ್ಷ (ಮ್ಯಾನೇಜಿಂಗ್‌ ಟ್ರಸ್ಟಿ ಹಾಗೂ ಸಿಇಒ) ಸೇರಿ 2007ರಲ್ಲಿ ನಿರ್ಮಿದ ಸಂಸ್ಥೆಯೇ ಕ್ರೆಡಿಟ್‌–ಐ.

‘ಲಾಕ್‌ಡೌನ್‌ಗೂ ಮುನ್ನವೇ ಅಂದರೆ ಮಾರ್ಚ್‌ ಆರಂಭದಲ್ಲೇ ನಾವು ಕಾರ್ಯಾಚರಣೆಗೆ ಇಳಿದಿವು. ಕೋವಿಡ್‌ ಸಂಬಂಧ ಜಾಗೃತಿ ಮೂಡಿಸಲಾರಂಭಿಸಿದೆವು. ಕಾರ್ಮಿಕ ಇಲಾಖೆ ಜೊತೆಗೂಡಿ ವಲಸೆ ಕಾರ್ಮಿಕರಿಗೆ ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ ಮಾಡಿದೆವು’ ಎಂದು ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಎಂ.ಪಿ.ವರ್ಷ.

‘ಪಾಲಿಕೆ ವತಿಯಿಂದ ಆರು ಕಡೆ ಶೆಲ್ಟರ್‌ ಮಾಡಿ ಕಾರ್ಮಿಕರನ್ನು ವಿಂಗಡಿಸಲಾಯಿತು. ನಂಜರಾಜ ಬಹದ್ದೂರ್‌ ಛತ್ರದಲ್ಲಿ 93 ಮಂದಿಯನ್ನು ಇರಿಸಿ ಅವರ ಜವಾಬ್ದಾರಿಯನ್ನು ನಾವು ತೆಗೆದುಕೊಂಡೆವು. ಉಚಿತವಾಗಿ ಸೇವೆ ಒದಗಿಸಿದೆವು’ ಎಂದು ಹೇಳುತ್ತಾರೆ.

‘ಫೆವಾರ್ಡ್‌-ಕೆ, ಧ್ವನಿ ಫೌಂಡೇಷನ್‌ ಜೊತೆಗೂಡಿ ಶೆಲ್ಟರ್‌ ನಡೆಸಿ ಕಾರ್ಮಿಕರಿಗೆ ಧೈರ್ಯ ತುಂಬಿದಿವೆ. ಮಾನಸಿಕ ಮತ್ತು ದೈಹಿಕವಾಗಿ ಅವರನ್ನು ಆರೋಗ್ಯವಾಗಿಡುವುದು ಸವಾಲಾಗಿತ್ತು. ತಜ್ಞರು ಬಂದು ಮಾನಸಿಕ ಸ್ಥೈರ್ಯ ತುಂಬಿದರು. ಯೋಗ, ಧ್ಯಾನ ಮಾಡಿಸಿದೆವು’ ಎಂದು ತಿಳಿಸುತ್ತಾರೆ.

ಅಷ್ಟೇ ಅಲ್ಲ; ಸ್ವಯಂ ಉದ್ಯೋಗದ ದಾರಿ ಕಂಡುಕೊಳ್ಳಲು ಕೌಶಲ ಹೇಳಿಕೊಟ್ಟೆವು. ಅದಕ್ಕಾಗಿ ಪೇಪರ್‌ ಬ್ಯಾಗ್‌ ಮಾಡುವ ತರಬೇತಿ ನೀಡಲಾಯಿತು. ಹಳೆ ಪತ್ರಿಕೆಗಳನ್ನು ದಾನಿಗಳು ತಂದುಕೊಟ್ಟರು. ಈ ಕಾರ್ಮಿಕರು ತಯಾರಿಸಿದ ಬ್ಯಾಗ್‌ಗಳನ್ನು ಮಾರಾಟ ಮಾಡಿ, ಬಂದ ಹಣವನ್ನು ಅವರಿಗೇ ಕೊಡಲಾಯಿತು ಎಂದು ಖುಷಿಯಿಂದ ಹೇಳುತ್ತಾರೆ.

***
ಸ್ವಯಂ ಸೇವಕಿಯ ಮನದಾಳ...
ಮೈಸೂರು:
ನಗರದಲ್ಲಿ ಕೋವಿಡ್‌ ಶುರುವಾಗುತ್ತಿದ್ದಂತೆ ಸ್ವಯಂ ಸೇವಕಿಯಾಗಿ ಬೀದಿಗಿಳಿದವರು ನಿಶಿತಾ ಕೃಷ್ಣಸ್ವಾಮಿ. ಯುವ ಸಮೂಹದ ತಂಡವನ್ನೇ ಕಟ್ಟಿದರು. ಅಗತ್ಯವಿದ್ದವರ ಮನೆ ಬಾಗಿಲಿಗೆ ತೆರಳಿ ಸೇವೆ ಒದಗಿಸಿದರು. ನೆರೆ ಹೊರೆಯ ಜಿಲ್ಲೆಗೂ ಇವರ ಸೇವಾ ವ್ಯಾಪ್ತಿ ವಿಸ್ತರಿಸಿತು. ಏಳೆಂಟು ತಂಡಗಳನ್ನು ಮುನ್ನಡೆಸಿದರು. ಲಾಕ್‌ಡೌನ್‌ ತೆರವಿನ ಬಳಿಕವೂ ಇವರ ಸೇವೆ ಅಬಾಧಿತವಾಗಿತ್ತು.

ನಿಶಿತಾ ಕೃಷ್ಣಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಡಾ.ನಿರಂಜನ ಅವರ ಮಾರ್ಗದರ್ಶನದಲ್ಲಿ ಪಿಎಚ್‌.ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಕೋವಿಡ್‌ ಪರಿಸ್ಥಿತಿಯಿಂದ ಆತಂಕ ನಿರ್ಮಾಣವಾಗಿದ್ದ ಸಮಯದಲ್ಲಿ ಸ್ವಯಂ ಸೇವಕಿಯಾಗಿ ಕಾರ್ಯನಿರ್ವಹಿಸಲು ವಾರ್ತಾ ಇಲಾಖೆಗೆ ತಮ್ಮ ಹೆಸರು ನೋಂದಣಿ ಮಾಡಿದರು. ಜಿಲ್ಲಾ ಸಮನ್ವಯಕಿಯಾಗಿ ಕೆಲಸ ಮಾಡಿದರು.

‘ಲಾಕ್‌ಡೌನ್‌ ಇದ್ದ ಕಾರಣ ಯಾರು ಹೊರಗಡೆ ಹೋಗಲು ಸಾಧ್ಯವಾಗಲಿಲ್ಲ. ಆಹಾರದ ಸಮಸ್ಯೆ ಎದುರಾಯಿತು. ಇಂಥ ಸಮಯದಲ್ಲಿ ಆಹಾರ ಪೊಟ್ಟಣ ತಲುಪಿಸಿದೆವು. ಆರಂಭದ‌ಲ್ಲಿ ನಮ್ಮ ಖರ್ಚಿನಲ್ಲೇ ಹಂಚಿದೆವು. ಬಳಿಕ ದಾನಿಗಳ ನೆರವಿನಿಂದ ವಿತರಿಸಿದೆವು. ರೇಷನ್‌ ಕಾರ್ಡ್‌ ಇಲ್ಲದವರನ್ನು ಗುರುತಿಸಿ ರೇಷನ್‌ ಪೂರೈಸಿದೆವು. ಬೇರೆ ಊರಿನಿಂದ ಬಂದ ವಲಸೆ ಕಾರ್ಮಿಕರಿಗೂ ಆಹಾರ ಪೊಟ್ಟಣ ಹಂಚಿದೆವು. ಬೀದಿ ನಾಯಿಗಳಿಗೆ, ಚಾಮುಂಡಿಬೆಟ್ಟ ಹಾಗೂ ತಪ್ಪಲಿನಲ್ಲಿ ಕೋತಿಗಳಿಗೆ ಆಹಾರ ಹಾಕಿದೆವು’ ಎಂದು ಅವರು ಹೇಳುತ್ತಾರೆ.

ಯಾವುದೇ ಅಪೇಕ್ಷೆ ಇಲ್ಲದೆ ಕೆಲಸ ಮಾಡಿದೆವು. ಆರಂಭಿಕ ದಿನಗಳಲ್ಲಿ ನಾವು ಓಡಾಡಲೂ ಕಷ್ಟವಿತ್ತು. ಜೊತೆಗೆ ಕೊರೊನಾ ಸೋಂಕಿನ ಆತಂಕವಿತ್ತು. ಆದರೆ, ಸೇವೆಯ ಉದ್ದೇಶದಿಂದ ಅಡೆತಡೆಗಳನ್ನು ಮೆಟ್ಟಿ ನಿಂತು ಕೆಲಸ ಮಾಡಿದೆವು ಎಂದು ನುಡಿಯುತ್ತಾರೆ.

‘ಸರ್ಕಾರವೇ ಎಲ್ಲಾ ಮಾಡಲಿ ಎಂದು ನಿರೀಕ್ಷೆ ಇಟ್ಟುಕೊಳ್ಳಬಾರದು. ಹೀಗಾಗಿ, ನಮ್ಮಿಂದ ಏನಾದರೂ ಸಹಾಯವಾಗಲಿ ಎಂದು ಸ್ವಯಂ ಸೇವಕರಾಗಿ ಕೆಲಸ ಮಾಡಿದೆವು’ ಎಂದರು.

***
ಸಿಬ್ಬಂದಿಗೆ ಸ್ಫೂರ್ತಿ ತುಂಬಿದ ಡಾ.ರವಿ
ಮೈಸೂರು: ನಗರದಲ್ಲಿನಲ್ಲಿ ಕೋವಿಡ್‌–19 ದಿನೇ ದಿನೇ ಉಲ್ಭಣಿಸುತ್ತಿದ್ದ ಕಾಲಘಟ್ಟವದು. ಎಲ್ಲರಲ್ಲೂ ಆತಂಕ ಮನೆ ಮಾಡಿದ್ದ ಸಮಯ. ಅಂತಹ ಹೊತ್ತಲ್ಲಿ ಕೊರೊನಾ ವೈರಸ್‌ ಸೋಂಕಿತರು, ಅವರ ಸಂಪರ್ಕಿತರು, ಶಂಕಿತರ ಆರೋಗ್ಯದ ನಿಗಾ ವಹಿಸುವ ಜೊತೆಗೆ, ಚಿಕಿತ್ಸಾ ಸೇವೆ ಒದಗಿಸಲು ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ ನಿಯೋಜಿಸುವ ಹೊಣೆಗಾರಿಕೆ ಹೊತ್ತಿದ್ದವರು ಡಾ.ಪಿ.ರವಿ.

ಶಂಕಿತರ ಗಂಟಲು ದ್ರವದ ಮಾದರಿ ತೆಗೆಯುವುದರಿಂದ ಹಿಡಿದು, ಪ್ರಯೋಗಾಲಯದ ವರದಿ ಬಂದೊಡನೆ, ಕೋವಿಡ್ ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲು ಅಗತ್ಯವಿರುವ ಮಾನವ ಸಂಪನ್ಮೂಲವನ್ನು ನಿಯೋಜಿಸುವ ಹೊಣೆಗಾರಿಕೆಯನ್ನು ಆಗಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಇವರಿಗೆ ವಹಿಸಿದ್ದರು.

ಡಾ.ಪಿ.ರವಿ

ಕರ್ತವ್ಯಕ್ಕೆ ಹಾಜರಾಗಲು ಹಿಂಜರಿಯುತ್ತಿದ್ದ ಸಿಬ್ಬಂದಿಗೆ ಮನೋಸ್ಥೈರ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದರು ಈಗಿನ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿರುವ ರವಿ. ಸಿಬ್ಬಂದಿ ಜೊತೆಗೆ ಆರಂಭದಿಂದಲೂ ತಾವು ಸಹ ಪುರುಸೊತ್ತಿಲ್ಲದಂತೆ ರಜೆ ಹಾಕದೆ ಕರ್ತವ್ಯ ನಿರ್ವಹಿಸಿದರು. ಮನೆಗೂ ಹೋಗದೆ ಕೋವಿಡ್‌ ಆಸ್ಪತ್ರೆಯಲ್ಲೇ ಕೆಲಸ ಮಾಡಿದರು. ಸ್ವತಃ ಕೋವಿಡ್‌ ಪೀಡಿತರಾದರೂ, ವಿಶ್ರಾಂತಿ ತೆಗೆದುಕೊಳ್ಳದೇ ಮೊಬೈಲ್‌ ಮೂಲಕವೇ ತಮಗೊಪ್ಪಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಹೆಗ್ಗಳಿಕೆ ಇವರದ್ದು.

ಪ್ರಯೋಗಾಲಯದ ಉಸ್ತುವಾರಿಯೂ ಇವರದ್ದೇ ಆಗಿತ್ತು. ಕೊರೊನಾ ವೈರಸ್‌ನ ತಪಾಸಣೆಗೊಳಪಟ್ಟವರ ವರದಿ ಬರುವ ತನಕವೂ, ಬಂದ ಬಳಿಕ ತೆಗೆದುಕೊಳ್ಳಬೇಕಾದ ಕ್ರಮಗಳು ಯಾವುವು ಎಂಬುದನ್ನು ನಿರ್ಧರಿಸಬೇಕಾದ ಮಹತ್ವದ ಹೊಣೆಗಾರಿಕೆಯೂ ರವಿ ಹೆಗಲಿಗಿತ್ತು. ಒಂದೊಂದು ದಿನ ಕೆಲಸ ಮುಗಿದಿದ್ದು ಮುಂಜಾವಿನ ಮೂರು ಗಂಟೆಯಾಗಿದ್ದು ಇದೆ.

ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ಮನೆಗೆ ಹೋಗಿದ್ದು ಅಪರೂಪ. ವಿಶ್ರಾಂತಿ, ಊಟ–ತಿಂಡಿ, ನಿದ್ದೆ ಎಲ್ಲವನ್ನೂ ಕೋವಿಡ್‌ ಆಸ್ಪತ್ರೆಯಲ್ಲೇ ಮಾಡುತ್ತಿದ್ದರು ರವಿ.

***
ಅಪಸ್ವರಕ್ಕೆ ಅವಕಾಶ ನೀಡದ ಅನಿಲ್
ಮೈಸೂರು:
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಕೋವಿಡ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದು ಮೈಸೂರು ಜಿಲ್ಲೆಯಲ್ಲಿ. ಒಂದು ಸಾವಿರಕ್ಕೂ ಹೆಚ್ಚು ಜನರು ಕೋವಿಡ್‌–19ನಿಂದ ಮೃತರಾಗಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ನಿರ್ವಹಣೆಯನ್ನು ಮೈಸೂರಿನಲ್ಲಿ ಮಹಾನಗರ ಪಾಲಿಕೆ ಆಡಳಿತವೇ ನಿಭಾಯಿಸುತ್ತಿದೆ. ಪಾಲಿಕೆಯ ಜನನ–ಮರಣ ವಿಭಾಗದ ಸಹಾಯಕ ಸಾಂಖ್ಯಿಕ ಅಧಿಕಾರಿ ಅನಿಲ್‌ ಕ್ರಿಸ್ಟಿ ನೋಡೆಲ್‌ ಅಧಿಕಾರಿಯಾಗಿದ್ದು, ಶವ ಸಂಸ್ಕಾರದಲ್ಲಿ ಒಂದಿನಿತು ಅಪಸ್ವರಕ್ಕೆ ಅವಕಾಶವಿಲ್ಲದಂತೆ ತಮ್ಮ ಕರ್ತವ್ಯ ನಿರ್ವಹಿಸಿದ್ದು ಹೆಗ್ಗಳಿಕೆಯ ವಿಷಯ.

ಅನಿಲ್‌ ಕ್ರಿಸ್ಟಿ

ಆಗಸ್ಟ್‌ ತಿಂಗಳಲ್ಲಿ ಒಂದೇ ದಿನ 27 ಕೋವಿಡ್‌ ಪೀಡಿತರ ಶವ ಸಂಸ್ಕಾರ ನಡೆಸಿರುವುದು ಅನಿಲ್‌ ಕ್ರಿಸ್ಟಿ ನೇತೃತ್ವದ ತಂಡ. ಮೂವರು ಆಂಬುಲೆನ್ಸ್‌ ಚಾಲಕರು, ಏಳು ಜನ ಸಹಾಯಕರೊಂದಿಗೆ ಅನಿಲ್‌ ದಿನವಿಡಿ ಅಂತ್ಯಸಂಸ್ಕಾರದ ಧಾರ್ಮಿಕ ವಿಧಿ–ವಿಧಾನಗಳಲ್ಲಿ ಭಾಗಿಯಾಗಿದ್ದಾರೆ.

ಮುಂಜಾನೆ 7 ಗಂಟೆಗೆ ಶವ ಸಂಸ್ಕಾರ ಆರಂಭವಾದರೆ, ಕೆಲವೊಮ್ಮೆ ಪೂರ್ಣಗೊಳ್ಳುತ್ತಿದ್ದು ತಡರಾತ್ರಿ. ಸಾವಿನ ಪ್ರಮಾಣ ಹೆಚ್ಚಿದ್ದ ದಿನಗಳಲ್ಲಿ ದಿನವೊಂದಕ್ಕೆ ಸರಾಸರಿ 15 ಮೃತದೇಹಗಳಿಗೆ ಅಂತ್ಯ ಸಂಸ್ಕಾರದ ವಿಧಿ–ವಿಧಾನ ನೆರವೇರಿಸಿದೆ ಈ ತಂಡ. ಪ್ರತಿಯೊಂದು ಜಾತಿ/ಧರ್ಮದ ಕುಟುಂಬದ ಭಾವನೆಗಳಿಗೆ ಧಕ್ಕೆಯಾಗದಂತೆ, ಅವರವರ ಸಂಪ್ರದಾಯದಂತೆ ಶವ ಸಂಸ್ಕಾರ ನಡೆಸಿದೆ. ಕಠಿಣ ಪರಿಸ್ಥಿತಿಯಲ್ಲೂ ಪಿಪಿಇ ಕಿಟ್‌ ಧರಿಸಿಕೊಂಡು, 10 ಅಡಿ ಅಂತರದಿಂದ ಅಂತಿಮ ದರ್ಶನ ಹಾಗೂ ಪೂಜಿಸಲು ಅವಕಾಶ ಕಲ್ಪಿಸಿ ಮಾನವೀಯತೆ ಮೆರೆದಿದೆ.

ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆಯ ನಡುವೆಯೂ ಅನಿಲ್‌ ಮಾನವೀಯತೆ ಮೆರೆದಿದ್ದಾರೆ. ಪ್ರತಿಯೊಂದು ಶವವನ್ನು ದಹಿಸಿದ ಬಳಿಕ, ಅದರ ಬೂದಿಯನ್ನು ಮಡಕೆ/ಕುಡಿಕೆಗಳಲ್ಲಿ ಸಂಗ್ರಹಿಸಿಟ್ಟು, ಧಾರ್ಮಿಕ ವಿಧಿ–ವಿಧಾನ ನೆರವೇರಿಸಲಿಕ್ಕಾಗಿ ಆಯಾ ಕುಟುಂಬ ವರ್ಗದವರಿಗೆ ತಲುಪಿಸಿದ ಸಾರ್ಥಕ ಸೇವೆ ಇವರ ತಂಡದ್ದಾಗಿದೆ.

***
ಖಾಕಿಯಲ್ಲಿ ಮಿಡಿದ ಮಾನವೀಯತೆ
ಮೈಸೂರು:
ಕೋವಿಡ್‌–19ನ ಸಂಕಷ್ಟದ ಕಾಲದಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ವಿವಿಧೆಡೆ ಅಸಹಾಯಕರಿಗೆ ಒಂದೊತ್ತಿನ ಊಟಕ್ಕೂ ತಪ್ಪದ ಪರದಾಟ. ಹಸಿವಿನಿಂದ ಜನರು ಬಳಲುವುದು ಗೊತ್ತಾಗುತ್ತಿದ್ದಂತೆ ನೆರವಿಗೆ ಧಾವಿಸಿದ್ದು ಎಎಸ್‌ಐ ಎಸ್‌.ದೊರೆಸ್ವಾಮಿ. ಕಂಗಾಲಾಗಿದ್ದ ಕುಟುಂಬಗಳಿಗೆ ಆಹಾರ ಕಿಟ್‌ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಿ ಮಾನವೀಯತೆ ಮೆರೆದರು.

ಬೀದಿ ಬದಿ ವ್ಯಾಪಾರಿಗಳು, ಅಲೆಮಾರಿ ಜನರು, ನಿರ್ಗತಿಕರು ಸೇರಿದಂತೆ ಸಂಕಷ್ಟದಲ್ಲಿ ಸಿಲುಕಿಕೊಂಡ ಜನರನ್ನು ಗುರುತಿಸಿ, ಆಹಾರ ಕಿಟ್‌, ಮಾಸ್ಕ್, ಸ್ಯಾನಿಟೈಸರ್‌ ನೀಡಿದರು. ಈ ಎಲ್ಲ ಸೇವೆಯನ್ನು ತಮ್ಮ ದುಡಿಮೆಯಲ್ಲೇ ಮಾಡಿದ್ದು ವಿಶೇಷ.

ಎಎಸ್‌ಐ ಎಸ್‌.ದೊರೆಸ್ವಾಮಿ

ಶಿರಮಹಳ್ಳಿ ಗ್ರಾಮದ ಇಬ್ಬರು ಅನಾಥ ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಇತರೆ ಮೂಲ ಸೌಲಭ್ಯ ಕಲ್ಪಿಸಿ, ಆನ್‌ಲೈನ್‌ ಶಿಕ್ಷಣಕ್ಕಾಗಿ ಮೊಬೈಲ್ ಕೊಡಿಸಿದ್ದು, ಶೈಕ್ಷಣಿಕ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಳೆಯಿಂದ ಬಿದ್ದು ಹೋಗಿದ್ದ ಮನೆಯನ್ನು ₹ 3 ಲಕ್ಷ ವೆಚ್ಚದಲ್ಲಿ ಸ್ವಂತ ಖರ್ಚಿನಲ್ಲೇ ದುರಸ್ತಿ ಮಾಡಿಸಿಕೊಟ್ಟಿದ್ದಾರೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಉಚಿತವಾಗಿ ನೀಡಿದರು. ಆಟೊ ಚಾಲಕರು ಮತ್ತು ಇತರೆ ಕಡು ಬಡವರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದರು. ಹಾಡಿ ಮಕ್ಕಳಿಗೂ ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಆಹಾರ ಕಿಟ್‌, ಪುಸ್ತಕ ಕೊಡಿಸಿದ್ದಾರೆ.

ಹಂಪಾಪುರ ಪೊಲೀಸ್ ಠಾಣೆಯ ಹೊರ ಠಾಣೆಗೆ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಅಪಘಾತದ ಚಿತ್ರಣ ಪೊಲೀಸರಿಗೆ ಅಧಿಕೃತವಾಗಿ ಸಿಗಲಿ ಎಂಬ ಸದುದ್ದೇಶ ಇದರ ಹಿಂದಿದೆ.

ದಾಳೇಗೌಡ ಹುಂಡಿ ಗ್ರಾಮದ ಶಾಲೆಯ ಮಕ್ಕಳಿಗೆ ಪುಸ್ತಕ ಮತ್ತು ಬರವಣಿಗೆ ಸಾಮಗ್ರಿ ಕೊಟ್ಟಿದ್ದು, ಹಾಳಾಗಿದ್ದ ಗದ್ದಿಗೆ ರಸ್ತೆ ದುರಸ್ತಿ ಮಾಡಿಸಿದ್ದಾರೆ. ದೊರೆಸ್ವಾಮಿಯ ಈ ಎಲ್ಲ ಸಮಾಜಮುಖಿ ಕೆಲಸವನ್ನು ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಶ್ಲಾಘಿಸಿದ್ದಾರೆ.

***
ಸಂಕಷ್ಟಕ್ಕೀಡಾದವರ ಸಹಾಯಕ್ಕೆ ಎಸ್‌ಎಂಪಿ
ಮೈಸೂರು:
ಬಡವರು, ನಿರ್ಗತಿಕರು, ಅಸಹಾಯಕರು ಸೇರಿದಂತೆ ಸಾಮಾನ್ಯ ಜನರಿಗೆ ಸಂಕಷ್ಟ ಎದುರಾದ ತಕ್ಷಣವೇ ನೆರವಿಗೆ ಧಾವಿಸುವವರು ಮೈಸೂರಿನ ಸಮಾಜ ಸೇವಕ ಎಸ್‌.ಎಂ.ಶಿವಪ್ರಕಾಶ್‌.

‘ಎಸ್‌ಎಂಪಿ ಡೆವಲಪರ್ಸ್‌’ ಮೂಲಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಶಿವಪ್ರಕಾಶ್‌, ತಮ್ಮ ದುಡಿಮೆಯ ಭಾಗವೊಂದನ್ನು ಎಸ್‌ಎಂಪಿ ಫೌಂಡೇಶನ್ ಮೂಲಕ ಸಮಾಜ ಸೇವೆಗೆ ಮೀಸಲಿಟ್ಟಿರುವುದು ಶ್ಲಾಘನೀಯ.

-ಎಸ್‌.ಎಂ.ಶಿವಪ್ರಕಾಶ್‌

ನೆರೆ–ಬರ, ಅಘೋಷಿತ ತುರ್ತು ಪರಿಸ್ಥಿತಿ ಎದುರಾದಾಗ ಸ್ವಯಂಪ್ರೇರಿತರಾಗಿ ಸೇವೆಗೆ ಮುಂದಾಗುವ ಶಿವಪ್ರಕಾಶ್‌, ನೊಂದವರಿಗೆ ನೆರವಿನ ಅಭಯ ನೀಡುವ ಜತೆಗೆ, ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಜನಾನುರಾಗಿಯಾಗಿದ್ದಾರೆ. ಇವರ ಸೇವೆ ಮೈಸೂರಿಗಷ್ಟೇ ಸೀಮಿತವಾಗಿಲ್ಲ. ನೆರೆಯ ಚಾಮರಾಜನಗರಕ್ಕೂ ಸಂದಿದೆ. ದೂರದ ಹಾವೇರಿಗೂ ಮುಟ್ಟಿದೆ.

₹ 10ಕ್ಕೆ ತರಕಾರಿ; ₹ 20ಕ್ಕೆ ಅಕ್ಕಿ: ಯಾವುದೇ ತರಕಾರಿ ಖರೀದಿಸಿದರೂ ಒಂದು ಕೆ.ಜಿ.ಯ ಬೆಲೆ ₹ 10. ಮಧ್ಯಮ ದರ್ಜೆಯ ಅಕ್ಕಿಯ ಧಾರಣೆ ₹ 20... ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರಿಗಷ್ಟೇ ಅಲ್ಲ; ಲಾಕ್‌ಡೌನ್‌ ಸಂಕಷ್ಟದ ಸಮಯದಲ್ಲಿ ಶಿವಪ್ರಕಾಶ್‌ ಅವರು ಎಲ್ಲ ವರ್ಗದವರಿಗೂ ಇದೇ ದರದಲ್ಲಿ ಅಕ್ಕಿ ಪೂರೈಸಿದರು, ಅದೂ ಅವರವರ ಮನೆ ಬಾಗಿಲಿಗೇ ತೆರಳಿ!

ಮೈಸೂರು ಹಾಗೂ ಸುತ್ತಮುತ್ತಲಿನ‌ ಹಲವು ಗ್ರಾಮಗಳಿಗೆ ಲಾಕ್‌ಡೌನ್‌ ಅವಧಿಯಲ್ಲಿ ಈ ಕೊಡುಗೆ ಕೊಟ್ಟರು.

ರೈತರು ಬೆಳೆದ ತರಕಾರಿಗೆ ಬೆಲೆ ಸಿಗದೆ ರಸ್ತೆಯಲ್ಲೇ ಬಿಸಾಡುವುದು ನಿತ್ಯವೂ ನಡೆದಿತ್ತು ಕೋವಿಡ್‌ನ ಲಾಕ್‌ಡೌನ್‌ ಅವಧಿಯಲ್ಲಿ. ಈ ಕುರಿತಂತೆ ಸ್ನೇಹಿತರು–ರೈತರ ಜತೆ ಚರ್ಚಿಸಿ, ಬೇಡಿಕೆ ಇರುವಷ್ಟು ತರಕಾರಿಯನ್ನು ನಿತ್ಯವೂ ಮಾರುಕಟ್ಟೆ ಬೆಲೆಗೆ ಖರೀದಿಸಿ, ರೈತರ ನೆರವಿಗೂ ಧಾವಿಸಿದ್ದು ಶ್ಲಾಘನಾರ್ಹ.

***
ನಿವೇದಿತಾ ಸೇವೆಗೆ ನೀತಿ ಆಯೋಗದ ಮೆಚ್ಚುಗೆ
ಮೈಸೂರು:
ಲಾಕ್‌ಡೌನ್‌ ಆರಂಭಗೊಳ್ಳುತ್ತಿದ್ದಂತೆ ಎಲ್ಲವೂ ಸ್ತಬ್ಧ. ಒಂದೆರಡು ದಿನ ಕಳೆಯುವಷ್ಟರಲ್ಲಿ ಬೀದಿ ನಾಯಿಗಳಿಗೆ ತುತ್ತು ಆಹಾರವೂ ಸಿಗದೆ ಸಂಕಷ್ಟಕ್ಕೀಡಾಗಿದ್ದವು. ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದವು. ಈ ಪ್ರಾಣಿಗಳ ಮೂಕ ವೇದನೆಗೆ ಸ್ಪಂದಿಸಿದ ಮೈಸೂರಿನ ಶಾರದಾ ವಿದ್ಯಾ ಮಂದಿರದ ಉಪನ್ಯಾಸಕಿ ಎಸ್‌.ನಿವೇದಿತಾ, ನಿತ್ಯವೂ ನಿಗದಿತ ಸಮಯಕ್ಕೆ ಆಹಾರ ನೀಡಿ ಮಾನವೀಯತೆ ಮೆರೆದರು.

ಬೆಳಿಗ್ಗೆ 10 ಗಂಟೆಯೊಳಗೆ ಕನಿಷ್ಠ 50ರಿಂದ ಗರಿಷ್ಠ 100ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಮೊಸರನ್ನ, ಪೆಡಿಗ್ರಿ ಮಿಶ್ರಣದ ಊಟ ಹಾಕುತ್ತಿದ್ದರು. ಒಂದೊಂದು ದಿನವೂ ಬೇರೆ ಬೇರೆ ಮಾರ್ಗದಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಪತಿಯೊಟ್ಟಿಗೆ ಊಟ ಹೊತ್ತೊಯ್ಯುತ್ತಿದ್ದರು. ಇವರ ಬರುವಿಕೆಗಾಗಿಯೇ ಕಾದಿರುತ್ತಿದ್ದವು ಹಸಿವಿನಿಂದ ಕಂಗಾಲಾಗಿರುತ್ತಿದ್ದ ಬೀದಿ ನಾಯಿಗಳು.

ಮನೆಯಲ್ಲೇ ಅನ್ನ ಮಾಡಿಕೊಳ್ಳುತ್ತಿದ್ದರು. ಕಾಲೇಜಿನ ಸಹೋದ್ಯೋಗಿಗಳು, ಸಾಮಾಜಿಕ ಜಾಲತಾಣದ ಫೇಸ್‌ಬುಕ್‌ ಸ್ನೇಹಿತರು ಲಾಕ್‌ಡೌನ್‌ ದಿನಗಳಲ್ಲಿ ಇವರ ಸೇವೆಗೆ ಸಾಥ್‌ ನೀಡಿದರು. ಅನ್ನಕ್ಕೆ ಮಿಶ್ರಣ ಮಾಡಲು ಹಾಲು, ಮೊಸರು ಕೊಟ್ಟರು. ಸವಿತಾ ನಾಗಭೂಷಣ್ ಪೆಡಿಗ್ರಿ ನೀಡಿದರು. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ತನಕವೂ ನಿವೇದಿತಾ ಸೇವೆ ಅಬಾಧಿತವಾಗಿತ್ತು. ಈಗಲೂ ವಾರಾಂತ್ಯದ ದಿನಗಳಲ್ಲಿ ಪತಿಯೊಟ್ಟಿಗೆ ಬೀದಿ ನಾಯಿಗಳಿಗೆ ಮೊಸರನ್ನದ ಊಟ ಉಣ ಬಡಿಸುತ್ತಿದ್ದಾರೆ.

ಬೀದಿ ನಾಯಿಗಳಿಗೆ ಊಟ ನೀಡಿದ ನಂತರ, ಅಸಹಾಯಕರು–ನಿರಾಶ್ರಿತರಿದ್ದಲ್ಲಿಗೆ ತೆರಳಿ ಆಹಾರ ಕಿಟ್‌ಗಳನ್ನು ಪೂರೈಸಿದರು. ಸಂಘ–ಸಂಸ್ಥೆಗಳು ತಯಾರಿಸಿದ್ದ ಊಟದ ಪೊಟ್ಟಣಗಳನ್ನು ಹಸಿದವರ ಕೈಗಿತ್ತು, ಹಲವರ ಹಸಿವು ನೀಗಿಸಲು ಶ್ರಮಿಸಿದರು. ನಿವೇದಿತಾ ಸೇವಾ ಕೈಂಕರ್ಯಕ್ಕೆ ನೀತಿ ಆಯೋಗವೂ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.