ADVERTISEMENT

ಗುಣಮಟ್ಟ, ಅಧಿಕ ಇಳುವರಿಯ ತಂಬಾಕು

ವಿಜ್ಞಾನಿಗಳ 10 ವರ್ಷದ ಪರಿಶ್ರಮ ಎಫ್.ಸಿ.ಎಚ್ 248 ಹೊಸ ತಳಿ

​ಪ್ರಜಾವಾಣಿ ವಾರ್ತೆ
Published 18 ಮೇ 2023, 5:18 IST
Last Updated 18 ಮೇ 2023, 5:18 IST
ಹುಣಸೂರು ತಾಲ್ಲೂಕಿನ ಉಯಿಗೌಡನಹಳ್ಳಿ ಪ್ರಗತಿಪರ ರೈತ ಉಮೇಶ್ ಕಳೆದ ಸಾಲಿನಲ್ಲಿ ಪ್ರಾಯೋಗಿಕವಾಗಿ ಬೆಳೆದ ಎಫ್.ಸಿ.ಎಚ್ 248 ಹೊಸ ತಳಿ ಜೊತೆಗೆ ವಿಜ್ಞಾನಿ ಡಾ.ನಂದಿನಿ ಮತ್ತು ತಂಡದವರು
ಹುಣಸೂರು ತಾಲ್ಲೂಕಿನ ಉಯಿಗೌಡನಹಳ್ಳಿ ಪ್ರಗತಿಪರ ರೈತ ಉಮೇಶ್ ಕಳೆದ ಸಾಲಿನಲ್ಲಿ ಪ್ರಾಯೋಗಿಕವಾಗಿ ಬೆಳೆದ ಎಫ್.ಸಿ.ಎಚ್ 248 ಹೊಸ ತಳಿ ಜೊತೆಗೆ ವಿಜ್ಞಾನಿ ಡಾ.ನಂದಿನಿ ಮತ್ತು ತಂಡದವರು   

ಎಚ್.ಎಸ್.ಸಚ್ಚಿತ್

ಹುಣಸೂರು: ತಂಬಾಕು ಬೆಳೆಗಾರರಿಗೆ ಹೆಚ್ಚು ಇಳುವರಿ ಮತ್ತು ಉತ್ಕೃಷ್ಟ ಗುಣಮಟ್ಟದಿಂದ ಕೂಡಿದ ‘ಎಫ್.ಸಿ.ಎಚ್ 248’ ಹೊಸ ತಂಬಾಕು ತಳಿ ಬಿಡುಗಡೆ ಮಾಡಿ ಆರ್ಥಿಕ ಲಾಭ  ಸೃಷ್ಟಿಸುವಲ್ಲಿ ಹುಣಸೂರು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ ನಾಂದಿ ಹಾಡಿದೆ.

ಹುಣಸೂರು ಉಪವಿಭಾಗದಲ್ಲಿ 66 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರಿಗೆ ತಳಿ ನೀಡುವ ದಿಕ್ಕಿನಲ್ಲಿ ಕೇಂದ್ರ ಕಳೆದ 10 ವರ್ಷದಿಂದ ನಡೆಸಿದ ಸಂಶೋಧನೆಯ ಫಲ ಈ ಸಾಲಿನಲ್ಲಿ ರೈತರಿಗೆ ಖುಷಿ ತಂದಿದೆ.

ADVERTISEMENT

ಕಳೆದ 20 ವರ್ಷದಿಂದ ಕಾಂಚನ ತಳಿಯನ್ನು ಬೆಳೆಯುತ್ತಿದ್ದು, ಈ ತಳಿಗೆ ಪರ್ಯಾಯವಾಗಿ ಮತ್ತಷ್ಟು ಇಳುವರಿ, ಬಣ್ಣ ಹಾಗೂ ಗುಣಮಟ್ಟದ ಹೊಸ ತಳಿಯನ್ನು ಕಳೆದ ಎರಡು ವರ್ಷದಿಂದ ಆಯ್ದ ರೈತರ ಹೊಲದಲ್ಲಿ ಪ್ರಾಯೋಗಿಕ ವಾಗಿ ಬೆಳೆಯಲಾಗಿದೆ. ಅದರ ಗುಣಮಟ್ಟ, ಇಳುವರಿ ಹಾಗೂ ಉತ್ಪಾದನಾ ವೆಚ್ಚವನ್ನು ಕೇಂದ್ರದಲ್ಲಿ ಪರಿಶೀಲಿಸಿದ ಬಳಿಕ ಈ ಸಾಲಿನಲ್ಲಿ ಉಪವಿಭಾಗದ 100 ರೈತರಿಗೆ ಹೊಸತಳಿ ಬೆಳೆಯಲು ಬಿತ್ತನೆ ಬೀಜ ವಿತರಿಸಲಾಗಿದೆ.

ಲಾಭ: ಪ್ರಸ್ತುತ ಬೆಳೆಯುತ್ತಿರುವ ಕಾಂಚನ ತಳಿಗಿಂತಲೂ ಶೇ 10ರಷ್ಟು ಅಧಿಕ ಇಳುವರಿ ಇದ್ದು, 20 ರಿಂದ 22 ಎಲೆ ಬರಲಿದೆ. ಶೇ 60ರಿಂದ 70ರಷ್ಟು ಹಳದಿ (ಚಿನ್ನದ) ಬಣ್ಣದಿಂದ ಕೂಡಿದ ಹದಗೊಳಿಸಿದ ತಂಬಾಕು ಎಲೆ (ಬ್ರೈಟ್ ಲೀಫ್ ) ರೈತನ ಕೈ ಸೇರಲಿದೆ. ಉತ್ತಮ ಸುವಾಸನೆ ಹೊಂದಿದೆ. ತರಗು ಅಥವಾ ಹುಡಿ (ಬಿಟ್ಸ್) ಕಡಿಮೆ ಇದ್ದು, ಆರ್ಥಿಕವಾಗಿ ಲಾಭದಾಯಕ ತಳಿಯಾಗಿದೆ ಎಂದು ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ರಾಮಕೃಷ್ಣ ಹೇಳಿದರು.

ರೋಗ ನಿರೋಧಕ: ‘ಕಳೆದ 10 ವರ್ಷದಿಂದ ಎಫ್.ಸಿ.ಎಚ್ 248 ತಳಿ ಸಂಶೋಧನೆ ನಡೆಸಿ, ಕಳೆದ ಎರಡು ವರ್ಷದಿಂದ ಆಯ್ದೆ ರೈತರ ಹೊಲದಲ್ಲಿ ಬೆಳೆಯಲಾಗಿದೆ. ಇಳುವರಿ ಮತ್ತು ರೋಗ ನಿರೋಧಕ ಶಕ್ತಿ ಕುರಿತಂತೆ ಪರೀಕ್ಷೆ ನಡೆದಿದೆ. ಹೆಕ್ಟೇರ್‌ಗೆ 2400 ಕೆ.ಜಿ ಇಳುವರಿ ಬಂದಿದ್ದು, ಕರಿಕಡ್ಡಿ ರೋಗ, ಸೊರಗು ರೋಗ ನಿರೋಧಕ ಶಕ್ತಿ ಹೊಂದಿದೆ. ಈ ತಳಿಯಲ್ಲಿ ನಿಕೋಟಿನ್ ಪ್ರಮಾಣ ಶೇ 1.8ರಿಂದ 2 ಹಾಗೂ ಸಕ್ಕರೆ ಅಂಶ ಶೇ 15ರಿಂದ 20ರಷ್ಟಿದ್ದು ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸಿಗಲಿದೆ’ ಎಂದು ಹೊಸತಳಿ ಸಂಶೋಧನೆ ನಡೆಸಿದ ಕೇಂದ್ರದ ವಿಜ್ಞಾನಿ ಡಾ.ನಂದಿನಿ ತಿಳಿಸಿದರು.

‘ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹೊಸ ತಳಿ ಬಿತ್ತನೆ ಬೀಜ ನೀಡಿದ್ದು, ಈಗಾಗಲೇ ಸಸಿ ಬೆಳೆದು ಹೊಲದಲ್ಲಿ ನಾಟಿ ಪ್ರಕ್ರಿಯೆ ಮುಗಿದಿದೆ. ಉತ್ತಮ ಉಳುವರಿ ಸಿಗುವ ನಿರೀಕ್ಷೆಯಲ್ಲಿದ್ದೇನೆ’ ಎಂದು ಉಯಿಗೌಡನಹಳ್ಳಿಯ ರೈತ ನಾಗೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.