ADVERTISEMENT

ಉತ್ಪನ್ನದ ಗುಣಮಟ್ಟದಿಂದ ಸುಸ್ಥಿರ ಅಭಿವೃದ್ಧಿ: ವಿಜ್ಞಾನಿ ಟಿ.ನಾಗಮಣಿ

ಭಾರತೀಯ ಮಾನಕ ಬ್ಯೂರೋ ವಿಜ್ಞಾನಿ ಟಿ.ನಾಗಮಣಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 4:04 IST
Last Updated 26 ಸೆಪ್ಟೆಂಬರ್ 2024, 4:04 IST
<div class="paragraphs"><p>ಮೈಸೂರಿನಲ್ಲಿ ‘ಭಾರತೀಯ ಮಾನಕ ಬ್ಯೂರೋ’, ‘ಕಾಸಿಯಾ’ ಬುಧವಾರ ಆಯೋಜಿಸಿದ್ದ ‘ಉತ್ತಮ ಪ್ರಪಂಚಕ್ಕಾಗಿ ದೂರದೃಷ್ಟಿ ಸಿದ್ಧತೆ’ ಕುರಿತ ‘ಗುಣಮಟ್ಟ ಶೃಂಗ– ಮೈಸೂರು’ ಕಾರ್ಯಕ್ರಮಕ್ಕೆ ಬಿಐಎಸ್‌ ಬೆಂಗಳೂರು ಪ್ರಯೋಗಾಲಯದ ವಿಜ್ಞಾನಿ ಟಿ.ನಾಗಮಣಿ ಉದ್ಘಾಟಿಸಿದರು.&nbsp;</p></div>

ಮೈಸೂರಿನಲ್ಲಿ ‘ಭಾರತೀಯ ಮಾನಕ ಬ್ಯೂರೋ’, ‘ಕಾಸಿಯಾ’ ಬುಧವಾರ ಆಯೋಜಿಸಿದ್ದ ‘ಉತ್ತಮ ಪ್ರಪಂಚಕ್ಕಾಗಿ ದೂರದೃಷ್ಟಿ ಸಿದ್ಧತೆ’ ಕುರಿತ ‘ಗುಣಮಟ್ಟ ಶೃಂಗ– ಮೈಸೂರು’ ಕಾರ್ಯಕ್ರಮಕ್ಕೆ ಬಿಐಎಸ್‌ ಬೆಂಗಳೂರು ಪ್ರಯೋಗಾಲಯದ ವಿಜ್ಞಾನಿ ಟಿ.ನಾಗಮಣಿ ಉದ್ಘಾಟಿಸಿದರು. 

   

ಮೈಸೂರು: ‘ಉತ್ಪನ್ನದಲ್ಲಿ ಗುಣಮಟ್ಟ ಕಾಯ್ದುಕೊಂಡರೆ ಮಾತ್ರ ಮಾರುಕಟ್ಟೆ ವಿಸ್ತರಣೆ ಹಾಗೂ ಉದ್ಯಮದ ಸುಸ್ಥಿರ ಅಭಿವೃದ್ಧಿ ಸಾಧ್ಯ’ ಎಂದು ಭಾರತೀಯ ಮಾನಕ ಬ್ಯೂರೋದ (ಬಿಐಎಸ್‌) ಬೆಂಗಳೂರು ಪ್ರಯೋಗಾಲಯದ ವಿಜ್ಞಾನಿ ಟಿ.ನಾಗಮಣಿ ಪ್ರತಿಪಾದಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಐಎಸ್‌, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ಬುಧವಾರ ‘ಉತ್ತಮ ಪ್ರಪಂಚಕ್ಕಾಗಿ ದೂರದೃಷ್ಟಿ ಸಿದ್ಧತೆ; ಕೃತಕ ಬುದ್ಧಿಮತ್ತೆ ಮೂಲಕ ಉದ್ಯಮ, ನಾವೀನ್ಯತೆ ಮತ್ತು ಮೂಲಸೌಕರ್ಯ ಸಾಧನೆ’ ಕುರಿತು ಆಯೋಜಿಸಿದ್ದ ‘ಗುಣಮಟ್ಟ ಶೃಂಗ– ಮೈಸೂರು’ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ಆಟೊಮೊಬೈಲ್‌, ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯಲ್ಲಿ ಮೈಸೂರು ಮುಂಚೂಣಿಯಲ್ಲಿದೆ. ಕಂಪನಿಗಳಿಗೆ ಪೂರೈಸುವ ಬಿಡಿಭಾಗಗಳು ಗುಣಮಟ್ಟದ ಕಚ್ಚಾ ವಸ್ತುಗಳಿಂದ ತಯಾರಾಗಿರಬೇಕು. ಗುಣಮಟ್ಟದ ಪರೀಕ್ಷೆಯನ್ನು ನಿರಂತರವಾಗಿ ನಡೆಸಬೇಕು. ಆಗ ಮಾತ್ರ ಉದ್ಯಮಗಳು ಆದಾಯದ ಜೊತೆಗೆ ದೀರ್ಘ ಕಾಲ ಉಳಿಯುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಗುಣಮಟ್ಟ ಪರೀಕ್ಷೆಯಲ್ಲಿ ಭಾರತೀಯ ಮಾನಕ ಹಾಗೂ ಸಂಘ– ಸಂಸ್ಥೆಗಳ ಮಾನಕವೆಂಬ ವಿಭಾಗಗಳಿವೆ. ಆಹಾರದ ಗುಣಮಟ್ಟ ಪರೀಕ್ಷೆಗೆ ಫೆಸಾಯ್ ಇರುವಂತೆಯೇ, ಕೈಗಾರಿಕಾ ಉತ್ಪನ್ನಗಳಿಗೆ ಐಎಸ್‌ಐ ಇರುತ್ತದೆ. ಮಾನದಂಡಗಳನ್ನು ಅನುಸರಿಸಿದ ಉದ್ಯಮಗಳು ಲಾಭದಾಯಕ ಅಷ್ಟೇ ಅಲ್ಲ ದೇಶ ಕಟ್ಟುವ ಉದ್ಯಮಗಳಾಗುತ್ತವೆ’ ಎಂದರು.

‘ಲಾಭದಾಯಕ ಆಗಿದ್ದರೆ ಬಂಡವಾಳ ಹೂಡಿಕೆ ಹರಿದು ಬರುತ್ತದೆ. ಸೂಕ್ಷ್ಮ, ಸಣ್ಣ ಕೈಗಾರಿಕೆಗಳೂ ಸಂಶೋಧನೆ ಹಾಗೂ ಅಭಿವೃದ್ಧಿಗೆ ಹಣವನ್ನು ಮೀಸಲಿಡಬೇಕು. ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬೇಕು. 9ನೇ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸಲು ಇದು ಅವಶ್ಯಕ’ ಎಂದು ತಿಳಿಸಿದರು.

‘ದೇಶವು ಜಾಗತಿಕವಾಗಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಹೀಗಾಗಿಯೇ ಕೈಗಾರಿಕೋದ್ಯಮಗಳು ಬಂಡವಾಳ ಹೂಡುತ್ತಿವೆ. ಉದ್ಯಮಗಳ ನಡುವೆ ಪೈಪೋಟಿಯೂ ಏರ್ಪಟ್ಟಿದೆ. ಸವಾಲುಗಳನ್ನು ಎದುರಿಸಿ ಉದ್ಯಮ ಉಳಿಸಿಕೊಳ್ಳಬೇಕೆಂದರೆ ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುವ ಗುಣಮಟ್ಟವನ್ನು ಉತ್ಪನ್ನಗಳಲ್ಲಿ ನೀಡಬೇಕಾಗುತ್ತದೆ. ಮೂಲಸೌಕರ್ಯ ಅಭಿವೃದ್ಧಿ, ಆವಿಷ್ಕಾರಕ್ಕೂ ಪ್ರಾಧಾನ್ಯತೆ ಕೊಡಬೇಕಿದೆ’ ಎಂದರು.

‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಎಲ್ಲ ಕ್ಷೇತ್ರಗಳಿಗೂ ಬಳಕೆಯಾಗುತ್ತಿದೆ. ಕೋವಿಡ್‌ಗೂ ಮೊದಲು ಮನೆಯಲ್ಲಿ ಎರಡು ಮೊಬೈಲ್‌ಗಳಷ್ಟೇ ಇದ್ದವು. ಇಂದು ಎಲ್ಲ ಸದಸ್ಯರ ಬಳಿಯೂ ಮೊಬೈಲ್‌ ಇದೆ. ದಶಕದ ಹಿಂದಿನ ಮೊಬೈಲ್‌ಗೂ ಈಗಿನದ್ದಕ್ಕೂ ಬಹಳ ವ್ಯತ್ಯಾಸವಿದೆ. ಇದು ವಿಸ್ತರಣೆಗೊಳ್ಳಲು ಗ್ರಾಹಕರ ಲಭ್ಯತೆ, ಗುಣಮಟ್ಟದ ಹೆಚ್ಚಳವೇ ಕಾರಣವಾಗಿದೆ’ ಎಂದು ವಿಶ್ಲೇಷಿಸಿದರು. 

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ, ವಿಜ್ಞಾನಿ ಎಚ್‌.ಎನ್‌.ಗಿರೀಶ್‌, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಉಪಾಧ್ಯಕ್ಷ ಬಿ.ಆರ್.ಗಣೇಶ್‌ ರಾವ್, ಪ್ರಧಾನ ಕಾರ್ಯದರ್ಶಿ ಸುರೇಶ್‌ ಎನ್‌.ಸಾಗರ್, ಜಂಟಿ ಕಾರ್ಯದರ್ಶಿ ಎನ್‌.ಸತೀಶ್‌, ಪ್ರಾದೇಶಿಕ ಅಭಿವೃದ್ಧಿ ಸಮಿತಿ ಮುಖ್ಯಸ್ಥ ಸಿ.ಎಂ.ಸುಬ್ರಹ್ಮಣ್ಯನ್‌ ಹಾಜರಿದ್ದರು.

ಲಾಭದಾಯಕವಾಗಲು ಗುಣಮಟ್ಟ ಅಗತ್ಯ ಬಂಡವಾಳ ಹೂಡಿಕೆಯೂ ಹೆಚ್ಚಳ ಗ್ರಾಹಕರನ್ನು ತೃಪ್ತಿ ಪಡಿಸಬೇಕು

‘ರಾಜ್ಯಕ್ಕೆ ಮೊದಲ ಸ್ಥಾನ’

‘ಪ್ರತಿ ರಾಜ್ಯದ ಉತ್ಪಾದನೆಗೆ ರ‍್ಯಾಂಕಿಂಗ್ ನೀಡುತ್ತಿದ್ದು ರಾಜ್ಯವು 6ನೇ ಸ್ಥಾನದಲ್ಲಿದೆ. ಸ್ವಚ್ಛ ಇಂಧನ ಪರಿಸರ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ’ ಎಂದು ನಾಗಮಣಿ ಹೇಳಿದರು. ‘ಕೈಗಾರಿಕೆ ಬೆಳವಣಿಗೆಗೆ ಮೂಲಸೌಕರ್ಯ ಕಲ್ಪಿಸುವುದು ಅಗತ್ಯ. ಉತ್ತಮ ರಸ್ತೆಗಳು ನಿಯಮಿತ ವಿದ್ಯುತ್‌ ಪೂರೈಕೆ ನೀರು ಸಾರಿಗೆ ಎಲ್ಲವೂ ಇರಬೇಕು. ಪ್ರತಿ ಗ್ರಾಮಕ್ಕೂ ಇಂಥ ಸೌಲಭ್ಯವಿದ್ದರೆ ಎರಡು ಮೂರನೇ ಹಂತದ ನಗರಗಳಲ್ಲದೇ ಗ್ರಾಮಗಳಿಗೂ ಉದ್ಯಮ ಕೈಗಾರಿಕೆಗಳು ವಿಸ್ತರಣೆಯಾಗುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.