ಮೈಸೂರು: ಪ್ರಯಾಣ ದರದಿಂದ ಬರುವ ವರಮಾನದ ಹೊರತಾದ ಆದಾಯದ ಮೂಲ ಕಂಡುಕೊಳ್ಳಲು ಮುಂದಾಗಿರುವ ನೈರುತ್ಯ ರೈಲ್ವೆ ಮೈಸೂರು ವಿಭಾಗವು ‘ರೈಲ್ ಕೋಚ್ ರೆಸ್ಟೋರೆಂಟ್’ ಯೋಜನೆ ರೂಪಿಸಿದ್ದು, ನಗರದಲ್ಲೂ ಅನುಷ್ಠಾನಕ್ಕೆ ಕ್ರಮ ವಹಿಸಿದೆ.
ಇಲ್ಲಿನ ಒಂಟಿಕೊಪ್ಪಲಿನ ವಿ.ವಿ. ಪುರಂ ಸಂಚಾರ ಪೊಲೀಸ್ ಠಾಣೆ ಎದುರಿನಲ್ಲಿರುವ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿರುವ ‘ಸ್ವಾಮಿ ವಿವೇಕಾನಂದ ಉದ್ಯಾನ’ದಲ್ಲಿ ರೆಸ್ಟೋರೆಂಟ್ ಶುರುವಾಗಲಿದೆ. ಹರಾಜು ಪ್ರಕ್ರಿಯೆಯಲ್ಲಿ ಅತ್ಯಧಿಕ ಬಿಡ್ ಮಾಡಿದವರಿಗೆ ಅಲ್ಲಿ ಜಾಗ ಹಾಗೂ ರೈಲ್ ಕೋಚ್ ಒದಗಿಸಲಾಗುವುದು. ಈ ಮೂಲಕ ‘ಬಳಕೆಗೆಯಾದ ಕೋಚ್’ಗಳನ್ನು ಗುಜರಿಗೆ ಹಾಕುವ ಬದಲಿಗೆ, ಕೆಲವನ್ನು ಆದಾಯ ತರುವ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ಯೋಜಿಸಲಾಗಿದೆ.
ರೈಲ್ ಕೋಚ್ ಇಡಲು ಉದ್ಯಾನದ ಅಂಚಿನಲ್ಲಿ ಜಾಗ ಗುರುತಿಸಲಾಗಿದ್ದು, ಅಲ್ಲಿ ಹಳಿಯನ್ನು ಹಾಕಿಕೊಡಲಾಗಿದೆ. ಇದು, ಕೆಲವೇ ದಿನಗಳಲ್ಲಿ ಸಾರ್ವಜನಿಕರನ್ನು ಆಕರ್ಷಿಸಲಿದೆ.
ಹರಾಜು ಮೂಲಕ: ‘ರೈಲ್ ಕೋಚ್ ರೆಸ್ಟೋರೆಂಟ್ ನಡೆಸಲು ಬಯಸುವವರು ನ.13ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಇ–ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಹೋಟೆಲ್ ಮಾಲೀಕರು, ಇತರ ಆತಿಥ್ಯ ಕ್ಷೇತ್ರದ ಬ್ರ್ಯಾಂಡ್‌ನವರು ಅಥವಾ ಇತರರು ಕೂಡ ಪಾಲ್ಗೊಳ್ಳಬಹುದಾಗಿದೆ. ಆಯ್ಕೆಯಾದವರಿಗೆ ಐಸಿಎಫ್ ಬ್ರಾಡ್‌ಗೇಜ್ ಪ್ಯಾಸೆಂಜರ್ ಟ್ರೇನ್ ಕೋಚ್ ಕೊಡಲಾಗುವುದು’ ಎಂದು ನೈರುತ್ಯ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇ–ಹರಾಜು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಐದು ವರ್ಷಗಳವರೆಗೆ ಗುತ್ತಿಗೆಗೆ ಕೊಡಲಾಗುವುದು. ನಿಲ್ದಾಣದಿಂದ ಕೋಚ್ ಸಾಗಿಸುವುದನ್ನು ಬಿಡ್‌ದಾರರೇ ನೋಡಿಕೊಳ್ಳಬೇಕು. ಹೇಗೆ ಬೇಕೋ ಹಾಗೆ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸವನ್ನು ಮಾಡಿಕೊಳ್ಳಲು ಅವರಿಗೆ ಅವಕಾಶವಿದೆ. ಅಂದಾಜು 22ರಿಂದ 23 ಮೀಟರ್ ಉದ್ದ, 3 ಮೀಟರ್ ಎತ್ತರದ ಕೋಚ್ ಕೊಡಲಾಗುವುದು. ಉದ್ಯಾನದಲ್ಲಿ 30 ಮೀಟರ್ ಉದ್ದದ ಜಾಗ ನೀಡಲಾಗುವುದು. ಮೆನು ಕೂಡ ಅವರಿಷ್ಟದ್ದೆ ಮಾಡಿಕೊಳ್ಳಬಹುದು. ಸಸ್ಯಾಹಾರ ಅಥವಾ ಮಾಂಸಾಹಾರದ ರೆಸ್ಟೋರೆಂಟನ್ನು ಅವರು ನಡೆಸಬಹುದು. ವರ್ಷಕ್ಕೆ ಇಂತಿಷ್ಟು ಲೈಸನ್ಸ್ ಶುಲ್ಕವನ್ನು ಅವರು ಕಟ್ಟಬೇಕು’ ಎಂದು ಮಾಹಿತಿ ನೀಡಿದರು.
ನಗರದ ಕೇಂದ್ರ ರೈಲು ನಿಲ್ದಾಣದ ಆವರಣದಲ್ಲೇ ರೆಸ್ಟೋರೆಂಟ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ನಿಲ್ದಾಣವನ್ನು ಮರುಅಭಿವೃದ್ಧಿಪಡಿಸುವ ಉದ್ದೇಶ ಇರುವುದರಿಂದ ಸ್ವಾಮಿ ವಿವೇಕಾನಂದ ಉದ್ಯಾನದ ಜಾಗವನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಪಾರ್ಕಿಂಗ್‌ಗೆ ಜಾಗದ ವ್ಯವಸ್ಥೆಯನ್ನು ರೆಸ್ಟೋರೆಂಟ್‌ನವರೇ ಮಾಡಿಕೊಳ್ಳಬೇಕು. ಆ ಉದ್ಯಾನದಲ್ಲಿ ಇದಕ್ಕೆಂದು ಜಾಗ ಕೊಡಲಾಗುವುದಿಲ್ಲ. ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಇಲಾಖೆಯಿಂದಲೇ ಕಲ್ಪಿಸಲಾಗುವುದು. ನಿಗದಿತ ಶುಲ್ಕವನ್ನು ಅವರೇ ಕಟ್ಟಿಕೊಳ್ಳಬೇಕು. ಆ ಕೋಚ್‌ನಲ್ಲಿ 30ರಿಂದ 40 ಮಂದಿ ಕೂರಬಹುದಾಗಿದೆ. ನಿರ್ವಹಣೆಯನ್ನು ಅವರೇ ನೋಡಿಕೊಳ್ಳಬೇಕು’ ಎನ್ನುತ್ತಾರೆ ಗಿರೀಶ.
‘ಕೋಚ್‌ಗಳು ವ್ಯರ್ಥವಾಗುವ ಬದಲಿಗೆ ಇದನ್ನು ಬಳಸುವುದು ಈ ಮೂಲಕ ಆದಾಯ ಕಂಡುಕೊಳ್ಳುವುದು ಇಲಾಖೆಯ ಉದ್ದೇಶವಾಗಿದೆ. ದೇಶದಾದ್ಯಂತ ಇಂತಹ 70 ರೈಲ್ ಕೋಚ್ ರೆಸ್ಟೋರೆಂಟ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಭಾಗವಹಿಸಲು ಆಸಕ್ತಿ ತೋರಿಸುತ್ತವೆ. ಮೈಸೂರು ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಇಲ್ಲಿನ ಯಶಸ್ಸನ್ನು ಆಧರಿಸಿ ದಾವಣಗೆರೆ ಹಾಗೂ ಶಿವಮೊಗ್ಗದಲ್ಲೂ ವಿಸ್ತರಣೆಗೆ ಉದ್ದೇಶಿಸಲಾಗಿದೆ’ ಎಂದು ಗಿರೀಶ ತಿಳಿಸಿದರು.
ಆ ಉದ್ಯಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗುತ್ತದೆ. ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸಲಾಗುವುದು–ಗಿರೀಶ ಧರ್ಮರಾಜ ಕಲಗೊಂಡ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ನೈರುತ್ಯ ರೈಲ್ವೆ ಮೈಸೂರು ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.