ADVERTISEMENT

ನಗರದಲ್ಲಿ ಬಿರುಸಿನ ಮಳೆ

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವ್ಯಾಪಾರ ವಹಿವಾಟಿಗೆ ಸ್ವಲ್ಪ ತೊಡಕು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 3:35 IST
Last Updated 19 ಆಗಸ್ಟ್ 2021, 3:35 IST
ಮೈಸೂರಿನಲ್ಲಿ ಕೆ.ಆರ್. ವೃತ್ತದಲ್ಲಿ ಬುಧವಾರ ಮಧ್ಯಾಹ್ನ ಸುರಿದ ಮಳೆಯಲ್ಲಿ ಮಹಿಳೆಯೊಬ್ಬರು ಕೊಡೆ ಹಿಡಿದು ಹೋಗುತ್ತಿರುವ ದೃಶ್ಯ ಕಂಡುಬಂತು
ಮೈಸೂರಿನಲ್ಲಿ ಕೆ.ಆರ್. ವೃತ್ತದಲ್ಲಿ ಬುಧವಾರ ಮಧ್ಯಾಹ್ನ ಸುರಿದ ಮಳೆಯಲ್ಲಿ ಮಹಿಳೆಯೊಬ್ಬರು ಕೊಡೆ ಹಿಡಿದು ಹೋಗುತ್ತಿರುವ ದೃಶ್ಯ ಕಂಡುಬಂತು   

ಮೈಸೂರು: ನಗರದಲ್ಲಿ ಕಳೆದ ಹಲವು ದಿನಗಳ ನಂತರ ಬುಧವಾರ ಬಿರುಸಿನಿಂದ ಮಳೆ ಸುರಿದಿದೆ.

ಕೇವಲ ತುಂತುರು ಹನಿಗಳಿಗಷ್ಟೇ ಸೀಮಿತವಾಗಿದ್ದ ಮಳೆಯು ನಗರದ ಹಲವು ಬಡಾವಣೆಗಳಲ್ಲಿ ಧಾರಾಕಾರವಾಗಿ ಸುರಿಯಿತು. ಚಾಮರಾಜ ಮೊಹಲ್ಲಾ, ಅಗ್ರಹಾರ, ಕುವೆಂಪುನಗರ ಸೇರಿದಂತೆ ಹಲವೆಡೆ ಸುರಿದ ಮಳೆಯು ವಾತಾವರಣವನ್ನು ತಂಪಾಗಿಸಿತು.

ನಗರದ ಆಲನಹಳ್ಳಿ, ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ, ವರಕೋಡು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಒಂದು ಸೆಂ.ಮೀ.ಗೂ ಹೆಚ್ಚಿನ ಮಳೆಯಾಗಿದೆ.

ADVERTISEMENT

ಹುಣಸೂರಿನ ಮರದೂರು ಭಾಗದಲ್ಲಿ 2, ಕೆ.ಆರ್.ನಗರದ ಹೊಸ ಅಗ್ರಹಾರ, ಅಂಕನಹಳ್ಳಿ, ಸಾಲಿಗ್ರಾಮ ಭಾಗಗಳಲ್ಲಿ ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು, ನವಿಲೂರುಗಳಲ್ಲಿ 1 ಸೆಂ.ಮೀ ಮಳೆಯಾಗಿದೆ.

ಗ್ರಾಮಾಂತರ ಭಾಗಗಳಲ್ಲಿ ಬಿದ್ದಿರುವ ಹಗುರ ಮಳೆಯು ಬೆಳೆಗಳಿಗೆ ಅನುಕೂಲಕಾರಿಯಾಗಿದೆ. ಮುಂಗಾರಿನಲ್ಲಿ ಬಿತ್ತನೆ ಮಾಡಲಾಗಿದ್ದ ಹಲವು ಬೆಳೆಗಳು ಮಳೆಗಾಗಿ ಈಗ ಕಾಯುತ್ತಿದ್ದವು. ಬೀಳುತ್ತಿರುವ ಮಳೆಯು ರೈತರಲ್ಲಿ ಹರ್ಷ ತರಿಸಿದೆ.

ನಗರದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಡೆದಿದ್ದ ವ್ಯಾಪಾರ ವಹಿವಾಟಿಗೆ ಮಳೆಯಿಂದ ಸ್ವಲ್ಪ ತೊಡಕಾಯಿತು. ದೇವರಾಜ ಮಾರುಕಟ್ಟೆಯ ಆಸುಪಾಸಿನಲ್ಲಿ ಜನದಟ್ಟಣೆ ಹೆಚ್ಚಿತ್ತು. ಇದ್ದಕ್ಕಿದ್ದಂತೆ ಸುರಿದ ಮಳೆಯಿಂದ ಅಂಗಡಿಗಳ ಮುಂದೆ ಜನರೆಲ್ಲರೂ ಆಶ್ರಯ ಪಡೆದರು. ಇದರಿಂದ ಅಪಾರ ಜನಜಂಗುಳಿ ಕಂಡು ಬಂತು. ಸಯ್ಯಾಜಿರಾವ್ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದರು. ಹೂವಿನ ವ್ಯಾಪಾರಿಗಳು ಹಾಗೂ ರಸ್ತೆಬದಿ ವ್ಯಾಪಾರಸ್ಥರು ಮಳೆಯಿಂದ ಪರಿತಪಿಸುವಂತಾಯಿತು.

ಇಲ್ಲಿನ ಅಗ್ನಿಶಾಮಕ ಠಾಣೆ ವೃತ್ತ, ಅಗ್ರಹಾರ ವೃತ್ತ, ವಾಲ್ಮೀಕಿರಸ್ತೆ, ಎಂ.ಜಿ.ರಸ್ತೆ ಮಾರುಕಟ್ಟೆ ಸೇರಿದಂತೆ ಹಲವೆಡೆ ಸಾಕಷ್ಟು ಕಾಲ ನೀರು ನಿಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.