ಮೈಸೂರು: ಮಳೆಗಾಲದೊಂದಿಗೆ ಸಾಂಕ್ರಾಮಿಕ ರೋಗ ಬಾಧೆಯೂ ಕಾಲಿಟ್ಟಿದ್ದು, ಜಿಲ್ಲೆಯಾದ್ಯಂತ ಜನರಲ್ಲಿ ಶೀತ–ಜ್ವರ, ಕೆಮ್ಮಿನಂತಹ ಸಮಸ್ಯೆಗಳು ಈಗ ಸಾಮಾನ್ಯವಾಗಿವೆ.
ಸ್ವಚ್ಛತೆಯ ಕೊರತೆಯಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಿದ್ದು, ಡೆಂಗಿಯಂತಹ ಮಾರಕ ಕಾಯಿಲೆಗಳನ್ನು ಆಹ್ವಾನಿಸುತ್ತಿದೆ. ‘ಇಂತಹ ಬಾಧೆಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೇ ಪ್ರಧಾನ ಮದ್ದು’ ಎನ್ನುತ್ತಾರೆ ವೈದ್ಯರು.
ಮಳೆಗಾಲದಲ್ಲಿ ನೀರು–ಗಾಳಿಯ ಮೂಲಕ ಹರಡುವ ಕಾಯಿಲೆಗಳ ಉಲ್ಬಣ ಸಾಮಾನ್ಯ. ಈ ಅವಧಿಯಲ್ಲಿ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಿದ್ದು, ಇದರಿಂದಾಗಿ ಡೆಂಗಿ, ಮಲೇರಿಯಾ, ಚಿಕುನ್‌ಗುನ್ಯಾದಂತಹ ಕಾಯಿಲೆಗಳು ಜನರನ್ನು ಹೆಚ್ಚು ಬಾಧಿಸುತ್ತವೆ. ಜೊತೆಗೆ ಟೈಫಾಯ್ಡ್, ಹೆಪಾಟೈಟಿಸ್, ಇಲಿ ಜ್ವರದಂತಹ ಕಾಯಿಲೆಗಳೂ ಕಾಣಿಸಿಕೊಳ್ಳುತ್ತಿವೆ. ಇವುಗಳಿಂದಾಗಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆಯೂ ಹೆಚ್ಚಿದೆ. ಸದ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಸಾಮಾನ್ಯ ರೋಗಿಗಳ ಸಂಖ್ಯೆಯು ಕ್ರಮೇಣ ಏರತೊಡಗಿದೆ.
ಸ್ವಚ್ಛತೆಯ ಕೊರತೆ
ಅನೈರ್ಮಲ್ಯ, ನೀರಿನ ಮಾಲಿನ್ಯ ಮಳೆಗಾಲದಲ್ಲಿ ರೋಗ ಹರಡುವಿಕೆಗೆ ಮುಖ್ಯ ಕಾರಣವಾಗಿದೆ. ಚರಂಡಿಗಳು, ಸಣ್ಣ ಪುಟ್ಟ ಹೊಂಡಗಳಲ್ಲಿ ನೀರು ನಿಂತು ಲಾರ್ವಾಗಳ ಉತ್ಪಾದನೆಯಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗುತ್ತಿದೆ. ಅಶುದ್ಧ ನೀರಿನ ಸೇವನೆಯಿಂದಲೂ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದೆ. ನಗರದ ಕೇಂದ್ರ ಭಾಗದ ಒಳಗೆ ಸ್ವಚ್ಛತೆ ಬಗ್ಗೆ ನಿಗಾ ವಹಿಸಿದ್ದರೂ ಹೊರ ವಲಯಗಳಲ್ಲಿ ಕಸದ ರಾಶಿ ಕಾಣುತ್ತಿದೆ. ಚರಂಡಿಗಳು ಕಟ್ಟಿದ ಪರಿಣಾಮ ಸೊಳ್ಳೆಗಳ ಉತ್ಪತ್ತಿ ಹೆಚ್ಚಿದೆ. ಹುಣಸೂರು, ನಂಜನಗೂಡು, ಕೆ.ಆರ್. ನಗರ, ಸರಗೂರು ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿಯೂ ತ್ಯಾಜ್ಯ ಮತ್ತು ನೀರಿನ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವುದು ಜನರ ದೂರು.
ಹೋಬಳಿ ಕೇಂದ್ರವಾದ ಜಯಪುರ ಗ್ರಾಮದ ಹಳೇ ಆಸ್ಪತ್ರೆಯ ಆವರಣದಲ್ಲಿಯೇ ರಾಶಿ ರಾಶಿ ತ್ಯಾಜ್ಯ ಸುರಿದಿದ್ದು, ಇಡೀ ಆವರಣ ತಿಪ್ಪೆಗುಂಡಿಯಾಗಿ ಪರಿವರ್ತನೆ ಆಗಿದೆ. ಇದರಿಂದಾಗಿ ಸೊಳ್ಳೆ–ನೊಟಗಳ ಕಾಟ ವಿಪರೀತವಾಗಿದೆ. ಸ್ಥಳೀಯ ರಸ್ತೆ ಬದಿ ವರ್ತಕರು ತ್ಯಾಜ್ಯ ಸುರಿಯುತ್ತಿದ್ದು, ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗವೇ ಕಸದ ರಾಶಿ ಬಿದ್ದಿದ್ದು, ಆಸ್ಪತ್ರೆಗೆ ಬರುವವರಿಗೆ ರೋಗ ಅಂಟುವ ಸಾಧ್ಯತೆ ಇದೆ. ಆಸ್ಪತ್ರೆಗೇ ಅನಾರೋಗ್ಯವಾಗಿದ್ದು, ಸ್ವಚ್ಛತೆಯ ಚಿಕಿತ್ಸೆ ಸಿಗಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಡೆಂಗಿ ಭೀತಿ: ಮಳೆಗಾಲದಲ್ಲಿ ಕಾಡುವ ರೋಗಗಳಲ್ಲಿ ಪ್ರಮುಖವಾದದು ಡೆಂಗಿ ಜ್ವರ. ಮಳೆಯಿಂದಾಗಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಿದಷ್ಟೂ ಈ ಕಾಯಿಲೆಯ ಹರಡುವಿಕೆಯೂ ಹೆಚ್ಚಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದರ ಪ್ರಮಾಣ ಕಡಿಮೆ ಇದೆ ಎನ್ನುವುದೇ ಸಮಾಧಾನದ ಸಂಗತಿ.
2022ರ ಜೂನ್‌ನಲ್ಲಿ ಜಿಲ್ಲೆಯಲ್ಲಿ 115 ಡೆಂಗಿ ಪ್ರಕರಣಗಳು ವರದಿ ಆಗಿದ್ದರೆ, ಈ ವರ್ಷದ ಜೂನ್‌ನಲ್ಲಿ ಅದು 68ಕ್ಕೆ ಇಳಿಕೆ ಆಗಿದೆ. 2022ರ ಜುಲೈನಲ್ಲಿ 155 ಪ್ರಕರಣಗಳು ಇದ್ದರೆ, ಈ ವರ್ಷ ಜುಲೈನಲ್ಲಿ ಕೇವಲ 76 ಪ್ರಕರಣ ಮಾತ್ರ ವರದಿ ಆಗಿವೆ.
‘ಕೇವಲ 5 ಎಂ.ಎಲ್.ನಷ್ಟು ನಿಂತ ನೀರಿನಲ್ಲೂ ಸೊಳ್ಳೆ ಉತ್ಪತ್ತಿ ಆಗಬಹುದು. ಜಿಟಿಜಿಟಿ ಮಳೆಯಾದಷ್ಟೂ ಇವುಗಳ ಉತ್ಪಾದನೆಗೆ ಅನುಕೂಲ. ಸಾರ್ವಜನಿಕರಿಗೆ ಈ ಬಗ್ಗೆ ಆದಷ್ಟು ಜಾಗೃತಿ ನೀಡುತ್ತಿದ್ದೇವೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದೇವೆ. ಚರಂಡಿ ಸ್ವಚ್ಛತೆಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದ್ದೇವೆ. ಮನೆಯ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರ ವಹಿಸುವಂತೆ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಇದರೊಟ್ಟಿಗೆ ಸಾರ್ವಜನಿಕರ ಸಹಭಾಗಿತ್ವವೂ ಅತಿಮುಖ್ಯ’ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಚಿದಂಬರ್.
‘ಹುಣಸೂರು ತಾಲ್ಲೂಕು ಒಂದರಲ್ಲಿಯೇ ಈ ವರ್ಷ 80ಕ್ಕೂ ಹೆಚ್ಚು ಜನರಲ್ಲಿ ಡೆಂಗಿ ಕಾಣಿಸಿಕೊಂಡಿದೆ. ಹುಣಸೂರು ನಗರದಲ್ಲೇ 40 ಪ್ರಕರಣಗಳು ಪತ್ತೆಯಾಗಿದೆ. ತಾಲ್ಲೂಕಿನ 22 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಈವರಗೆ 1300– 1400 ಜನರ ರಕ್ತ ಪರೀಕ್ಷೆಗೆ ಮೈಸೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದೇವೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್.
ಹುಣಸೂರು ತಾಲ್ಲೂಕಿನ ರತ್ನಾಪುರಿ ಗ್ರಾಮದಲ್ಲಿ 8 ಮಂದಿಯಲ್ಲಿ ಈ ರೋಗ ಪತ್ತೆಯಾಗಿದ್ದು, ಗ್ರಾಮದಲ್ಲಿ ಫಾಗಿಂಗ್ ಮತ್ತು ಲಾರ್ವ ತಿನ್ನುವ ಮೀನುಗಳನ್ನು ತೊಟ್ಟಿ ಮತ್ತು ಕೆರೆಗಳಿಗೆ ಬಿಡುವ ಅಭಿಯಾನ ನಡೆದಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿ ವಿಶ್ವನಾಥ್.
ವಿವಿಧೆಡೆ ಜಾಗೃತಿ: ಆರೋಗ್ಯ ಇಲಾಖೆಯು ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲೂ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸುವ ಪ್ರಯತ್ನ ನಡೆಸಿದೆ.
‘ಸಾರ್ವಜನಿಕ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬರುವ ರೋಗಿಗಳಲ್ಲಿ ಯಾವುದೇ ಜ್ವರ ಕಂಡು ಬಂದರೂ ಪರೀಕ್ಷೆ ಮಾಡಲಾಗುತ್ತಿದೆ. ನಿರಂತರವಾಗಿ ಲಾರ್ವಾ ಸರ್ವೆ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಮೂಲಕ ಮನೆಗಳಿಗೆ ತೆರಳಿ ಬಿಸಿ ನೀರು ಬಳಕೆ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ತಿ. ನರಸೀಪುರ ತಾಲ್ಲೂಕು ವೈದ್ಯಾಧಿಕಾರಿ ರವಿಕುಮಾರ್.
ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತರ ಜೊತೆಯಲ್ಲಿ ಮನೆ–ಮನೆ, ಶಾಲಾ- ಕಾಲೇಜುಗಳು, ವಿದ್ಯಾರ್ಥಿನಿಲಯಗಳಿಗೆ ತೆರಳಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸರಗೂರು ತಾಲ್ಲೂಕಿನಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಆರೋಗ್ಯ ಇಲಾಖೆಯಿಂದ ಲಾರ್ವ ಸಮೀಕ್ಷೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.
ಮಲೇರಿಯಾ
ಹೊರ ರಾಜ್ಯದವರ ಮೇಲೆ ಕಣ್ಣು ‘ಸದ್ಯ ಮೈಸೂರು ಜಿಲ್ಲೆಯು ಮಲೇರಿಯಾ ಮುಕ್ತವಾಗಿದೆ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಜ್ವರ ಬಾಧೆಗೆ ಒಳಗಾಗಿ ಆಸ್ಪತ್ರೆಗಳಿಗೆ ಬರುವ ಎಲ್ಲರನ್ನೂ ಮಲೇರಿಯಾ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸ್ಥಳೀಯರಲ್ಲಿ ಈ ರೋಗ ಪತ್ತೆ ಆಗಿಲ್ಲ. ಆದರೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು ಅಂಥವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ಅಂತಹ 5 ಜನರಿಗೆ ಚಿಕಿತ್ಸೆ ದೊರೆತಿದೆ’ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಚಿದಂಬರ್.
ಸಾಂಕ್ರಾಮಿಕ ರೋಗಗಳ ತಡೆಗೆ ವೈದ್ಯರ ಸಲಹೆಗಳು
ಬಿಸಿ ನೀರು ಇಲ್ಲವೇ ಕುದಿಸಿ ಆರಿಸಿದ ನೀರನ್ನು ಸೇವಿಸಿ ಶೀತ ಕೆಮ್ಮೆ ನೆಗಡಿ ಜ್ವರ ಇದ್ದಾಗ ಮನೆಯಲ್ಲೇ ವಿಶ್ರಾಂತಿ ಪಡೆಯಿರಿ
ರೋಗ ಬಾಧೆ ಇದ್ದವರು ಪ್ರತ್ಯೇಕ ವಾಸದಲ್ಲಿರಿ
ವೈದ್ಯರ ಸಲಹೆ ಪಡೆಯಿರಿ
ಬೆಚ್ಚಗಿನ ಉಡುಪುಗಳನ್ನು ಧರಿಸಿ ಮನೆ ಸುತ್ತಮುತ್ತ ಕೊಳಕು ನೀರು ನಿಲ್ಲದಂತೆ ನೋಡಿಕೊಳ್ಳಿ
ಮನೆ ಮೇಲೆ ಟೈರ್ ತೆಂಗಿನ ಚಿಪ್ಪು ಎಸೆಯಬೇಡಿ
ಮನೆಗಳಲ್ಲಿ ಹೂಕುಂಡಗಳ ಕೆಳಗೆ ಪ್ಲೇಟ್ ಇಡಬೇಡಿ
ಮಲಗುವಾಗ ಸೊಳ್ಳೆ ಪರದೆ ಬಳಸಿ
ಯಾರು ಏನಂತಾರೆ?
ಮಳೆಗಾಲದ ಅವಧಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಡೆಂಗಿ ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಫಾಗಿಂಗ್ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ವಾಣಿವಿಲಾಸ ವಿಭಾಗದಿಂದ ನಗರಕ್ಕೆ ಸರಬರಾಜು ಆಗುವ ನೀರಿನ ಮಾದರಿಗಳನ್ನು ಆಗಾಗ್ಗೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿದ್ದು ಸ್ವಚ್ಛತಾ ಕಾರ್ಮಿಕರು ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಸೊಳ್ಳೆಗಳ ಉತ್ಪತ್ತಿ ಆಗದಂತೆ ಎಚ್ಚರ ವಹಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮನ್ವಯ ಸಮಿತಿಯು ಆಗಾಗ್ಗೆ ಸಭೆ ಸೇರುತ್ತಿದ್ದು ಅವರ ಸಲಹೆಯಂತೆ ಸ್ವಚ್ಛತಾ ಅಭಿಯಾನ ನಡೆದಿದೆ – ಡಾ. ಡಿ.ಜಿ. ನಾಗರಾಜು ಆರೋಗ್ಯಾಧಿಕಾರಿ ಮೈಸೂರು ಮಹಾನಗರ ಪಾಲಿಕೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು–ಸಿಬ್ಬಂದಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದೇವೆ. ಪ್ರತಿ ಆಸ್ಪತ್ರೆಯಲ್ಲೂ ರೋಗಿಗಳ ಜ್ವರ ಪರೀಕ್ಷೆ ನಡೆಸಿದ್ದೇವೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಜನರ ಸಹಭಾಗಿತ್ವ ಮುಖ್ಯ. ನಮ್ಮ ಸುತ್ತಲಿನ ಪರಿಸರ ನೀರು–ಗಾಳಿಯನ್ನು ಸ್ವಚ್ಛವಾಗಿ ಇಟ್ಟುಕೊಂಡಷ್ಟು ಇವುಗಳ ನಿಯಂತ್ರಣ ಸಾಧ್ಯ. ನೀರು ಸಂಗ್ರಹ ಆಗದಂತೆ ನೋಡಿಕೊಂಡರೆ ಸೊಳ್ಳೆಗಳ ಕಾಟ ತಪ್ಪುತ್ತದೆ – ಡಾ. ಚಿದಂಬರ್ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ
ಮಳೆಗಾಲದಲ್ಲಿ ಜ್ವರ ನೆಗಡಿ ಕೆಮ್ಮು ಲಕ್ಷಣಗಳಿರುವ ಸಾಂಕ್ರಾಮಿಕ ರೋಗ ಸಾಮಾನ್ಯವಾಗಿದೆ. ಆರೋಗ್ಯ ಇಲಾಖೆಯು ಅಗತ್ಯಬಿದ್ದಲ್ಲಿ ಸಾಂಕ್ರಾಮಿಕ ರೋಗಗಳ ತಪಾಸಣೆಗೆ ಪ್ರತ್ಯೇಕ ಕೇಂದ್ರ ತೆರೆಯಬೇಕು. ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆದಷ್ಟು ನಿಯಂತ್ರಣಕ್ಕೆ ಪೂರಕವಾದ ಜಾಗೃತಿ ಕಾರ್ಯಕ್ರಮಗಳನ್ನು ಹಾಗೂ ಸ್ವಚ್ಚತಾ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು – ಆದರ್ಶ್ ತಿ.ನರಸೀಪುರ ನಿವಾಸಿ
ಹುಣಸೂರು ತಾಲ್ಲೂಕಿನ 22 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಪ್ರತಿ ಶುಕ್ರವಾರ ಇಲಾಖೆಯ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಲಾರ್ವ ತಿನ್ನುವ ಮೀನುಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ವಿತರಿಸುತ್ತಿದ್ದೇವೆ. ನೀರು ಹೆಚ್ಚು ನಿಲ್ಲುವ ಕಡೆಗಳಲ್ಲಿ ಇಂತಹ ಮೀನುಗಳನ್ನು ಬಿಡಲಾಗುತ್ತಿದೆ – ಡಾ. ಕೀರ್ತಿಕುಮಾರ್ ತಾಲ್ಲೂಕು ಆರೋಗ್ಯಾಧಿಕಾರಿ ಹುಣಸೂರು
ನಿರ್ವಹಣೆ: ಆರ್. ಜಿತೇಂದ್ರ. ಪೂರಕ ಮಾಹಿತಿ: ಎಚ್.ಎಸ್. ಸಚ್ಚಿತ್, ಸತೀಶ್ ಆರಾಧ್ಯ, ಎಂ. ಮಹದೇವು, ಎಸ್.ಆರ್. ನಾಗರಾಮ್, ಆರ್. ಬಿಳಿಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.