ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದ ಪಾದದಲ್ಲಿರುವ ಸುತ್ತೂರು ಶಾಖಾ ಮಠದಲ್ಲಿಆ.18ರ ಗುರುವಾರ ಬೆಳಿಗ್ಗೆ 11ಕ್ಕೆ ‘ಶಿವರಾತ್ರಿ ರಾಜೇಂದ್ರ ಸ್ವಾಮೀಜಿ’ ಅವರ 107ನೇ ಜಯಂತಿ ಆಚರಿಸಲಾಗುತ್ತಿದೆ.
‘ಅಮೆರಿಕದ ಮೇರಿಲ್ಯಾಂಡ್ ಗ್ರೇಥರ್ಸ್ ಬರ್ಗ್‌ನಲ್ಲಿ ಜಯಂತಿ ಪ್ರಯುಕ್ತ ಆ.28ರಂದು ದೇವಾಲಯ ಹಾಗೂ ಜೆಎಸ್‌ಎಸ್ ಆಧ್ಯಾತ್ಮಕಿಕ ಕೇಂದ್ರದ ಸಂಕೀರ್ಣವನ್ನು ಉದ್ಘಾಟಿಸಲಾಗುತ್ತಿದೆ. ಹೀಗಾಗಿ ಮೈಸೂರಿನಲ್ಲಿ ಜಯಂತಿಯನ್ನು ಮುಂಚಿತವಾಗಿ ನಡೆಸಲಾಗುತ್ತಿದೆ’ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸಿ.ಜಿ.ಬೆಟ್‌ಸೂರಮಠ ಹೇಳಿದರು.
ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ.ಸಿದ್ದಗಂಗೆಯ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕ ಎಸ್.ಎ.ರಾಮದಾಸ್ ಭಾಗವಹಿಸಲಿದ್ದಾರೆ’ ಎಂದರು.
‘ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದಜೆಎಸ್‌ಎಸ್ ಸಂಸ್ಥೆಗಳ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 131 ಮಂದಿ, ಕರ್ತವ್ಯ ಅವಧಿಯಲ್ಲಿ ಮೃತಪಟ್ಟ 16 ಹಾಗೂ ಕೆಲಸದಿಂದ ಬಿಡುಗಡೆಯಾದ 42 ಮಂದಿಗೆ ಅಭಿನಂದನೆಯನ್ನು ಮಧ್ಯಾಹ್ನ 2ಕ್ಕೆ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿಜೆಎಸ್ಎಸ್ ಮಹಾವೀದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಕಾಲೇಜು ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಇದ್ದರು.
ರಕ್ತದಾನ ಶಿಬಿರ,ಮೃಗಾಲಯಕ್ಕೆ ಕೊಡುಗೆ:‘ಆ.29ರಂದು ರಾಜೇಂದ್ರ ಶ್ರೀ ಜಯಂತಿ ಪ್ರಯುಕ್ತ ಚಾಮರಾಜೇಂದ್ರ ಮೃಗಾಲಯಕ್ಕೆ ₹ 1 ಲಕ್ಷ ನೀಡಲಾಗುತ್ತಿದೆ. ರಕ್ತದಾನ, ನೇತ್ರದಾನ ಹಾಗೂ ದೇಹದಾನಗಳ ಅರಿವು ಮೂಡಿಸಲಾಗುತ್ತಿದ್ದು, ಸಾಂಕೇತಿಕವಾಗಿ ರಕ್ತದಾನ ಶಿಬಿರವನ್ನೂ ಏರ್ಪಡಿಸಲಾಗಿದೆ’ ಎಂದು ಬೆಟ್‌ಸೂರಮಠ ಹೇಳಿದರು.
‘ಸೆ.30ರ ವರೆಗೆ ಗ್ರಂಥಮಾಲೆಯ ಪುಸ್ತಕಗಳಿಗೆ ರಿಯಾಯಿತಿ ನೀಡಲಾಗುತ್ತಿದೆ. ಆನ್‌ಲೈನ್ ಮೂಲಕವೂ ಕಾರ್ಯಕ್ರಮ ವೀಕ್ಷಿಸಬಹುದು’ ಎಂದರು.
ಆನ್‌ಲೈನ್ ಲಿಂಕ್:http://Youtube.com/c/JSSMahavidyapeethaonline- https://www.facebook.com/JSSMVP
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.