ಮೈಸೂರು: ಗಿರೀಶ ಕಾರ್ನಾಡರು ರಂಗಾಯಣಕ್ಕಾಗಿ ರಚಿಸಿಕೊಟ್ಟಿದ್ದ ‘ಟಿಪ್ಪುವಿನ ಕನಸುಗಳು’ ನಾಟಕ, ಜನಮನವನ್ನು ಪರಿಣಾಮಕಾರಿಯಾಗಿ ಮುಟ್ಟಿದ್ದು, ಇಂದು ವಿಶೇಷ ನೆನಪಾಗಿದೆ.
ಟಿಪ್ಪುವಿನ 200ನೇ ಜಯಂತಿಯ ಅಂಗವಾಗಿ ರಾಜ್ಯ ಸರ್ಕಾರವು ಕಾರ್ನಾಡರನ್ನು ಟಿಪ್ಪು ಕುರಿತು ನಾಟಕ ರಚಿಸಿಕೊಡುವಂತೆ ಕೇಳಿತ್ತು. ಅವರು ರಚಿಸಿದ ‘ಟಿಪ್ಪುವಿನ ಕನಸುಗಳು’ ನಾಟಕವು, ಶ್ರೀರಂಗಪಟ್ಟಣದ ಟಿಪ್ಪುವಿನ ಸಮಾಧಿಯ
ಬಳಿ ಸಿದ್ಧಗೊಳಿಸಿದ ವೇದಿಕೆಯಲ್ಲಿ 3 ದಿನ ಪ್ರದರ್ಶನ ಕಂಡಿತು. ಮೈಸೂರಿನ ರಂಗಾಯಣ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದರು.
ರಂಗಾಯಣದ ನಿರ್ದೇಶಕರಾಗಿದ್ದ ಸಿ.ಬಸವಲಿಂಗಯ್ಯ ಈ ನಾಟಕವನ್ನು ನಿರ್ದೇಶಿಸಿದ್ದರು. ಅದು ಅನೇಕ ಪ್ರಯೋ ಗಗಳನ್ನು ಕಂಡಿತು. ‘ಅದರಲ್ಲಿನ ಒಂದು ದೃಶ್ಯ ಎಲ್ಲರ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿತ್ತು. ಯುದ್ಧದ ಸಂದರ್ಭದಲ್ಲಿ ಬ್ರಿಟಿಷರು ಇಬ್ಬರು ಮಕ್ಕಳನ್ನು ಒತ್ತೆಯಾಗಿಡುವಂತೆ ಹೇಳಿದ
ನಂತರ ಮಕ್ಕಳನ್ನು ತಬ್ಬಿಕೊಂಡು ಟಿಪ್ಪು ‘ಯಾ ಅಲ್ಲಾ’ ಎನ್ನುತ್ತಾನೆ. ಈ ದೃಶ್ಯ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡಿತ್ತು’ ಎಂದು ರಂಗಾಯಣದ ಕಲಾ ವಿದ ಹುಲಗಪ್ಪ ಕಟ್ಟಿಮನಿ ಸ್ಮರಿಸಿದರು.
ಕಾರ್ನಾಡರಿಗೆ ರಂಗಾಯಣದ ನಂಟು ಅದರ ಆರಂಭದಿಂದಲೇ ಇತ್ತು. ಬಿ.ವಿ.ಕಾರಂತರು ಭೋಪಾಲ್‌ನಲ್ಲಿ ಜೈಲು ಸೇರಿದ್ದಾಗ, ಅವರ ಬಿಡುಗಡೆಗಾಗಿ ಸಿನಿಮಾ ನಿರ್ದೇಶಕ ಜಿ.ವಿ.ಅಯ್ಯರ್ ಅವರೊಂದಿಗೆ ಅಲ್ಲಿಗೆ ತೆರಳಿದ್ದರು. 3 ತಿಂಗಳು ಅಲ್ಲಿದ್ದುಕೊಂಡು, ಅಲ್ಲಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾರಂತರ ಬಿಡುಗಡೆಗೆ ನೆರವಾದರು. ಅಲ್ಲಿಂದ ಕಾರಂತರನ್ನು ಮೈಸೂರಿಗೆ ಕರೆತಂದಿದ್ದರು.
‘ರಂಗಾಯಣದ ಭದ್ರ ಬುನಾದಿಗೆ ಕಾರ್ನಾಡರ ಕೊಡುಗೆ ದೊಡ್ಡದು. ರಂಗಾಯಣದ ರೂಪುರೇಷೆ ಸಿದ್ಧಪಡಿಸಿ ಒಳ್ಳೆಯ ರೂಪ ಕೊಟ್ಟರು. ಕಾರಂತ ಹಾಗೂ ಕಾರ್ನಾಡ ಅವಳಿ ಜವಳಿ ಇದ್ದ ಹಾಗೆ’ ಎಂದು ಸ್ಮರಿಸುತ್ತಾರೆ ರಂಗಕರ್ಮಿ ಎಚ್.ಜನಾರ್ದನ.
‘ಕಾರಂತರೊಂದಿಗೆ ಕಾರ್ನಾಡರ ಹೆಸರು ತಳಕು ಹಾಕಿಕೊಂಡಿದೆ. ಅವರು ರಂಗಾಯಣದ ರಂಗ ಸಮಾಜದ ಮೊದಲ ಸದಸ್ಯರಾಗಿದ್ದರು. ಅಲ್ಲದೆ, ‘ತುಘಲಕ್’ ನಾಟಕವನ್ನು ಕಾರಂತರು ಹಿಂದಿಗೆ ಅನುವಾದಿಸಿ, ನಿರ್ದೇಶಿಸಿದ್ದರು’ ಎಂದು ನೆನಪಿಸಿಕೊಂಡರು ರಂಗಾಯಣದ ನಿರ್ದೇಶಕಿ ಭಾಗೀರತಿಬಾಯಿ ಕದಂ.
ಜಂಗಮ ಸ್ವರೂಪಿ: ‘2018ರ ‘ಬಹುರೂಪಿ’ ನಾಟಕೋತ್ಸವ ಉದ್ಘಾಟನೆಗೆ ಬಂದಿದ್ದ ಕಾರ್ನಾಡರು, ಬಹುರೂಪಿಗಳನ್ನು (ಅಲೆಮಾರಿಗಳು) ಖುದ್ದಾಗಿ ಬರಮಾಡಿಕೊಂಡು ಬೆಲ್ಲ, ನೀರು ಕೊಟ್ಟು ‘ಬಹುರೂಪಿಯ ಜಂಗಮತ್ವ ಸದಾ ಮುಂದುವರಿಯಲಿ’ ಎಂದು ಹಾರೈಸಿದ್ದರು. ಜತೆಗೆ, ಅಲೆಮಾರಿಗಳು ಅಕ್ಷರವನ್ನೂ ಕಲಿಯಲಿ ಎಂದು ಪುಸ್ತಕ ಕೊಟ್ಟಿದ್ದರು’ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ನೆನಪಿಸಿಕೊಂಡರು.
ಕಾರ್ನಾಡರ ‘ತಲೆದಂಡ’, ‘ತುಘಲಕ್’ ನಾಟಕಗಳನ್ನು ಆಡಿದ್ದ ರಂಗಾಯಣದ ಕಲಾವಿದರಿಗೆ ಕ್ಲಾಸಿಕ್ ನಾಟಕ ಆಡಿದ ಹೆಮ್ಮೆ ಇದೆ. ಜತೆಗೆ, ಇಲ್ಲಿನ ಅನೇಕ ರಂಗತಂಡಗಳು ಕಾರ್ನಾಡರ ನಾಟಕಗಳನ್ನು ಆಡಿವೆ. ಹಾಗೆಯೇ, ಅವರ ನಾಟಕ ಆಡುವುದು ಗೌರವದ ಸಂಗತಿಯೂ ಎಂಬುದು ಅನೇಕ ರಂಗಕರ್ಮಿಗಳ ಅನಿಸಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.