ಮೈಸೂರು: ‘ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್) ನೀಡುವ ಪಡಿತರ ಚೀಟಿದಾರರ ಪಟ್ಟಿ’ಯಿಂದ ಆದಾಯ ತೆರಿಗೆ (ಐಟಿ) ಪಾವತಿದಾರರೂ ಸೇರಿದಂತೆ ಸ್ಥಿತಿವಂತರನ್ನು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಅಕ್ರಮವಾಗಿ ‘ಅನ್ನಭಾಗ್ಯ’ ಅಕ್ಕಿ ಪಡೆಯುವುದಕ್ಕೆ ತಡೆ ಬೀಳಲಿದೆ.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುಳ್ಳ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯ ಮತ್ತು ಉಳಿದ 5 ಕೆ.ಜಿ.ಗೆ ₹170 ಹಣವನ್ನು ಪಾವತಿಸಲಾಗುತ್ತಿದೆ. ಅದರಿಂದ ಜಿಲ್ಲೆಯ 6.60 ಲಕ್ಷ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಈವರೆಗೆ ₹408.16 ಕೋಟಿ ಪಾವತಿಸಲಾಗಿದೆ. ಯೋಜನೆಯಲ್ಲಿ ಶ್ರೀಮಂತರು ಕೂಡ ಲಾಭ ಪಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಐಟಿ ಪಾವತಿದಾರರ ಮೇಲೆ ಕಣ್ಣಿಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆ ಮೇರೆಗೆ ಆಹಾರ ಇಲಾಖೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗುತ್ತಿದೆ.
ಮುಂದುವರಿಸಲಾಗದು: ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು ಎಂದು ಗುರುತಿಸಿರುವವರಿಗೆ, ‘ನೀವು ಆದಾಯ ತೆರಿಗೆ ಪಡೆಯುತ್ತಿರುವುದರಿಂದ ನಿಮಗೆ ಬಿಪಿಎಲ್ ಕಾರ್ಡ್ ಮುಂದುವರಿಸಲಾಗುವುದಿಲ್ಲ; ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಹಾಗೂ ಹಣ ದೊರೆಯುವುದಿಲ್ಲ’ ಎಂದು ತಿಳಿಸಲಾಗುತ್ತಿದೆ.
ಅಲ್ಲದೆ, ಆಯಾ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸೂಚನಾ ಫಲಕದಲ್ಲಿ ಪಡಿತರ ಚೀಟಿದಾರರ ಹೆಸರುಗಳನ್ನು ಪ್ರಕಟಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಂತಹ ಸಾವಿರಾರು ಅನರ್ಹರಿರುವುದನ್ನು ಗುರುತಿಸಲಾಗಿದೆ. ಹಂತ ಹಂತವಾಗಿ ಅವರನ್ನು ಬಿಪಿಎಲ್ ಪಡಿತರ ಚೀಟಿದಾರರ ಪಟ್ಟಿಯಿಂದ ತೆಗೆಯಲಾಗುವುದು. ಅವರ ಕಾರ್ಡ್ ರದ್ದುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಬಿಪಿಎಲ್ ಪಡಿತರ ಚೀಟಿಗಳನ್ನು ಅನಧಿಕೃತವಾಗಿ ಪಡೆದು, ‘ಅನ್ನಭಾಗ್ಯ’ ಯೋಜನೆ ದುರ್ಬಳಕೆ ಮಾಡಿಕೊಂಡವರ ವಿರುದ್ಧದ ಕ್ರಮ ಇದು. ಇಲಾಖೆಯಿಂದ ನೀಡಿದ್ದ ಎಚ್ಚರಿಕೆ ಹಿನ್ನೆಲೆಯಲ್ಲಿ, ತಾವು ಪಡೆದಿದ್ದ ಚೀಟಿಗಳನ್ನು ಕೆಲವರು ಇಲಾಖೆಗೆ ವಾಪಸ್ ಮಾಡಿದ್ದಾರೆ. ಅವರಲ್ಲಿ ಕೆಲವರಿಗೆ ಎಪಿಎಲ್ ಕಾರ್ಡ್‌ಗೆ ಪರಿವರ್ತಿಸಲಾಗಿದೆ. ಶ್ರೀಮಂತರು ಕೂಡ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದಿರುವುದು ಪತ್ತೆ ವೇಳೆ ಗೊತ್ತಾಗಿದೆ. ಅನಧಿಕೃತವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದವರಲ್ಲಿ ಶಿಕ್ಷಕರು, ಪೊಲೀಸರು, ಸೆಸ್ಕ್ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಗುರುತಿಸಲಾಗಿದೆ.
ಸುಳ್ಳು ಮಾಹಿತಿ ನೀಡಿ: ‘ಕೆ.ಜಿ. ಅಕ್ಕಿಗೆ ₹35ರಂತೆ ಸರ್ಕಾರ ಹಣ ಪಾವತಿಸಿ ದುರ್ಬಲ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದೆ. ಆರ್ಥಿಕವಾಗಿ ಸದೃಢವಾಗಿರುವ ಕೆಲವು ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಇದನ್ನು ಪಡೆಯುತ್ತಿರುವುದು ಕಂಡುಬಂದಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಅನರ್ಹರನ್ನು ಪತ್ತೆ ಹಚ್ಚಿದ ನಂತರ, ಯಾವಾಗಿನಿಂದ ಎಷ್ಟು ಅಕ್ಕಿ ಸೇರಿದಂತೆ ಆಹಾರ ಧಾನ್ಯವನ್ನು ಪಡೆದಿದ್ದಾರೆ ಎನ್ನುವುದನ್ನು ಲೆಕ್ಕ ಹಾಕಿ, ಪ್ರಸಕ್ತ ಮಾರುಕಟ್ಟೆ ದರದಂತೆ (ಅಕ್ಕಿಗಾದರೆ ಕೆ.ಜಿ.ಗೆ ₹23 ಇದೆ) ದಂಡ ವಿಧಿಸಲಾಗುತ್ತಿದೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ’ ಎಂದರು.
‘ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ನೌಕರಿ ಪಡೆದವರು, ನಾಲ್ಕು ಚಕ್ರಗಳ ವಾಹನ ಹೊಂದಿರುವವರು, ಐಟಿ ಪಾವತಿದಾರರು ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿಲ್ಲ. ನಿರಂತರವಾಗಿ ಪರಿಶೀಲನೆ ನಡೆದಿದೆ’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಶ್ರೀಮಂತರೂ ಹೊಂದಿದ್ದಾರೆ ಬಿಪಿಎಲ್ ಕಾರ್ಡ್ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ವಾಪಸ್ ಮಾಡಬೇಕು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶ
ಬಿಪಿಎಲ್ ಪಡಿತರ ಚೀಟಿ ಪಡೆದಿರುವವರು ನಿಜವಾಗಿಯೂ ಬಡತನದ ರೇಖೆಗಿಂತ ಕೆಳಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದ್ದು ಅನರ್ಹರ ಚೀಟಿಗಳನ್ನು ರದ್ದುಪಡಿಸಲಾಗುತ್ತದೆ ಜಿ.ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ
ಸೂಚನಾ ಫಲಕದಲ್ಲಿ ಪ್ರಕಟ ‘ನಂಜನಗೂಡು ತಾಲ್ಲೂಕು ವ್ಯಾಪ್ತಿಯ 317 ಪಡಿತರ ಚೀಟಿದಾರರು 2022–23ನೇ ಸಾಲಿನಿಂದ ಆದಾಯ ತೆರಿಗೆ ಪಾವತಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರ ಮಾಹಿತಿಯನ್ನು ಗ್ರಾಮ ಪಂಚಾಯಿತಿ ನಗರಸಭೆಯ ಸೂಚನಾ ಫಕಲಕದಲ್ಲಿ ಪ್ರಕಟಿಸಲಾಗಿದೆ’ ಎಂದು ನಂಜನಗೂಡು ತಾಲ್ಲೂಕು ತಹಶೀಲ್ದಾರ್ ಶಿವಕುಮಾರ್ ಕಾಸನೂರು ತಿಳಿಸಿದರು. ‘ಪಟ್ಟಿಯಲ್ಲಿರುವವರು ಆಕ್ಷೇಪಣೆ ಇದ್ದಲ್ಲಿ ತಾಲ್ಲೂಕು ಕಚೇರಿಯ ಆಹಾರ ಶಾಖೆಯ ರೂಂ ನಂ: 39ಕ್ಕೆ ಬಂದು ಏಳು ದಿನಗಳೊಳಗೆ ಲಿಖಿತ ಸಮಾಜಾಯಿಷಿ ನೀಡಬೇಕು. ಇಲ್ಲದಿದ್ದಲ್ಲಿ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.