ಮೈಸೂರು: ಆಲಕೆರೆ ಜೆ.ರಾಮಲಿಂಗೇಗೌಡ ಅನುವಾದಿಸಿರುವ ಬಸವಣ್ಣನವರ ವಚನಗಳಾದ ‘108 ಪರ್ಲ್ಸ್ ಆಫ್ ವಿಸ್ಡಂ’ ಹಾಗೂ ತೆಲುಗು ಕವಿ ಶೇಕ್ ಕರೀಮುಲ್ಲಾ ಅವರ ‘ಅಬಾಬಿಲ್– ಎ ಫ್ಲೋಕ್ ಆಫ್ ಟಿನಿ ಬರ್ಡ್ಸ್’ ಕೃತಿಗಳನ್ನು ಲೇಖಕ ಪ್ರೊ.ಸಿ.ನಾಗಣ್ಣ ಭಾನುವಾರ ಬಿಡುಗಡೆ ಮಾಡಿದರು.
ಸರಸ್ವತಿಪುರಂನ ‘ರೋಟರಿ ಪಶ್ಚಿಮ’ ಸಭಾಂಗಣದಲ್ಲಿ ಪ್ರೊ.ಕೆ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್, ಹನ್ಯಾಳು ಪ್ರಕಾಶನ ಹಾಗೂ ಸಂವಹನ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಪ್ರಯತ್ನಗಳು ಶತಮಾನದಿಂದಲೂ ನಡೆದಿವೆ. ಎ.ಕೆ.ರಾಮಾನುಜನ್ ಅವರೂ ಅನುವಾದಿಸಿದ್ದರು. ಅಂಕಿತನಾಮವಾದ ‘ಕೂಡಲ ಸಂಗಮದೇವ’ ಅನ್ನು ‘ಲಾರ್ಡ್ ಆಫ್ ಮೀಟಿಂಗ್ ರಿವರ್ಸ್’ ಎಂದಿದ್ದರು. ಅದಕ್ಕೆ ಸಾಹಿತ್ಯ ವಲಯದಲ್ಲಿ ಚರ್ಚೆಗೆ ಒಳಗಾಗಿತ್ತು’ ಎಂದು ಹೇಳಿದರು.
‘ಸುಮಾರು 110 ವರ್ಷಗಳ ಹಿಂದೆ ವಿಜಯಪುರದ ಪಾಟೀಲ ಎಂಬುವರು ವಚನಗಳನ್ನು ಇಂಗ್ಲಿಷ್‌ಗೆ ಮೊದಲು ಅನುವಾದ ಮಾಡಿದ್ದರು. ಬಿ.ಎಲ್.ರೈಸ್ ಅವರೂ 100 ವಚನಗಳನ್ನು ಭಾಷಾಂತರಿಸಿದ್ದರು. ಫ.ಗು.ಹಳಕಟ್ಟಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅನುವಾದಿಸಿದ್ದರು. ಈಚಿನ ವರ್ಷಗಳಲ್ಲಿ ಓ.ಎಲ್.ನಾಗಭೂಷಣಸ್ವಾಮಿ, ಡಿ.ಎ.ಶಂಕರ್, ಸಿದ್ದೇಶ್ವರ ಸ್ವಾಮೀಜಿ ಪ್ರಯತ್ನ ನಡೆಸಿದ್ದರು’ ಎಂದು ಸ್ಮರಿಸಿದರು.
‘ಕಾಳಿದಾಸ, ವಿಲಿಯಂ ಷೇಕ್ಸ್‌ಪಿಯರ್ ಬಿಟ್ಟರೆ ಬಸವಣ್ಣ ಅವರ ವಚನಗಳನ್ನು ಜಗತ್ತಿನ ನೂರಾರು ಭಾಷೆಗಳಿಗೆ ಅನುವಾದಿಸಲಾಗಿದೆ. ಒಂದೇ ಭಾಷೆಗೆ ಹಲವು ಬಾರಿ ಅನುವಾದಗೊಂಡಿವೆ. ಓದುಗರು ಅನುವಾದವನ್ನು ಆಲಂಗಿಸಿಕೊಂಡಿದ್ದಾರೆ. ಅಷ್ಟು ವಿಸ್ತಾರದ ಹರವು ವಚನಗಳಿಗಿದೆ. ಎಷ್ಟೇ ಸಲ ಅನುವಾದ ಮಾಡಿದರೂ ಅದರ ಸಾರ ಹಾಗೂ ಆಕರ್ಷಣೆ ಕಡಿಮೆಯಾಗದು’ ಎಂದು ವಿಶ್ಲೇಷಿಸಿದರು.
‘ಅಲ್ಲಮ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಸಿದ್ಧರಾಮ ಸೇರಿದಂತೆ ಶರಣರ ವಚನಗಳು ಅನುವಾದಗೊಂಡಿವೆ. ವಚನ ಸಾಹಿತ್ಯದಷ್ಟು ಬೇರೆ ಕೃತಿಗಳು ಕನ್ನಡದಿಂದ ಅನುವಾದ ಕಂಡಿಲ್ಲ. ಅವು ಬದುಕಿನ ಕನ್ನಡಿ. ಮಾನವೀಯ ಅಂಶಗಳು, ಸಮಾನತೆಯ ತತ್ವ, ಕಾಯಕನಿಷ್ಠೆಯನ್ನು ಜಗತ್ತು ಅಪ್ಪಿಕೊಂಡಿದೆ’ ಎಂದು ಹೇಳಿದರು.
‘ರವೀಂದ್ರನಾಥ ಟ್ಯಾಗೋರ್‌ರ ಗೀತಾಂಜಲಿ ಕೃತಿಯನ್ನು ಕನ್ನಡದಲ್ಲಿ 28 ಮಂದಿ ಅನುವಾದಿಸಿದ್ದಾರೆ. ಈ ವಿಷಯದ ಕುರಿತು ಪಿಎಚ್‌ಡಿ ಪ್ರಬಂಧ ಬರೆಯಬಹುದು’ ಎಂದು ಅಭಿಪ್ರಾಯಪಟ್ಟರು.
ಅನುವಾದಕ ಜೆ.ರಾಮಲಿಂಗೇಗೌಡ, ಮೆಸ್ಕೊ ಐಟಿಐ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಕಲೀಂ ಅಹಮ್ಮದ್, ವಕೀಲ ಎನ್.ಸಿ.ತಮ್ಮಣ್ಣಗೌಡ, ಪ್ರಕಾಶಕರಾದ ಎಚ್.ಎಸ್.ಗೋವಿಂದೇಗೌಡ, ಡಿ.ಎನ್.ಲೋಕಪ್ಪ ಹಾಜರಿದ್ದರು.
ಪುಸ್ತಕ ವಿವರ ಕೃತಿ: 108 ಪರ್ಲ್ಸ್ ಆಫ್ ವಿಸ್ಡಂ ಮೂಲ: ಬಸವಣ್ಣ ಇಂಗ್ಲಿಷ್‌ಗೆ: ಜೆ.ರಾಮಲಿಂಗೇಗೌಡ ಪ್ರಕಾಶನ: ಸಂವಹನ ಪ್ರಕಾಶನ ಪುಟ: 116 ಬೆಲೆ: ₹120 ** ಕೃತಿ: ‘ಅಬಾಬಿಲ್– ಎ ಫ್ಲೋಕ್ ಆಫ್ ಟಿನಿ ಬರ್ಡ್ಸ್’ ತೆಲುಗು ಮೂಲ: ಶೇಕ್ ಕರೀಮುಲ್ಲಾ ಕನ್ನಡಕ್ಕೆ: ಧನಪಾಲ ನಾಗರಾಜಪ್ಪ ಇಂಗ್ಲಿಷ್‌ಗೆ: ಜೆ.ರಾಮಲಿಂಗೇಗೌಡ ಪ್ರಕಾಶನ: ಹನ್ಯಾಳು ಪ್ರಕಾಶನ ಪುಟ: 120 ಬೆಲೆ: ₹120
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.